ಕನ್ನಡಪ್ರಭ ವಾರ್ತೆ ನವದೆಹಲಿ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾನುವಾರ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ‘ವೋಟ್ ಚೋರಿ’ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಪ್ರತಿಭಟನೆ ನಂತರ ಡಿ.ಕೆ.ಶಿವಕುಮಾರ್ ಅವರು ದೆಹಲಿಯ ಇಂದಿರಾ ಭವನದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಮಾತುಕತೆ ವೇಳೆ, ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿ, ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಹೈಕಮಾಂಡ್ ಸಮ್ಮುಖದಲ್ಲಿ ನಡೆದಿದೆ ಎನ್ನಲಾದ ಅಧಿಕಾರ ಹಸ್ತಾಂತರ ಕುರಿತ ಒಪ್ಪಂದ, ಅಧಿಕಾರ ಹಸ್ತಾಂತರ ಕುರಿತ ಸಿದ್ದರಾಮಯ್ಯ ನಿಲುವು, ಬೆಂಬಲಿಗರ ಆಕ್ರೋಶ ಸೇರಿ ರಾಜಕೀಯ ವಿದ್ಯಮಾನಗಳ ಕುರಿತು ವಿವರವಾದ ಮಾಹಿತಿ ನೀಡಿದರು ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ಮಾತುಗಳನ್ನು ಆಲಿಸಿದ ಉಭಯ ನಾಯಕರು, ಅಧಿಕಾರ ಹಸ್ತಾಂತರ ಕುರಿತ ಸಮಸ್ಯೆ ಶೀಘ್ರ ಬಗೆಹರಿಸುವ ಕುರಿತು ಅಭಯ ನೀಡಿದರು ಎಂದು ಮೂಲಗಳು ತಿಳಿಸಿವೆ.ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ:
ಸಭೆ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇದೊಂದು ಉಭಯ ಕುಶಲೋಪರಿ ಭೇಟಿ. ವೋಟ್ ಚೋರಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಂದಿದ್ದೆ. ಸಹಜವಾಗಿ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ‘ಎಐಸಿಸಿ ಕಚೇರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದೇನೆ. ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಮಾತುಕತೆ ವೇಳೆ ಏನೆಲ್ಲ ಚರ್ಚೆಯಾಗಿದೆ ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಇನ್ನು, ಪ್ರತ್ಯೇಕ ಭೇಟಿ ಬಗ್ಗೆ ಆಮೇಲೆ ಹೇಳ್ತಿನಿ’ ಎಂದರು.ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಪುನರುಚ್ಚರಿಸಿದರು. ಬಳಿಕ, ಡಿ.ಕೆ.ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಭೇಟಿಗೆ ತೆರಳಿದರು.