ಪರಿಸರ ಸಂಶೋಧನೆ ಸಂಸ್ಥೆ ಸ್ಥಾಪನೆಗೆ ಸಿಎಂ ಸಲಹೆ

KannadaprabhaNewsNetwork |  
Published : Jul 04, 2024, 01:00 AM ISTUpdated : Jul 04, 2024, 06:18 AM IST
Kanteerava stadium | Kannada Prabha

ಸಾರಾಂಶ

ಕಳೆದ 20 ವರ್ಷಗಳಲ್ಲಿ ಹವಾಮಾನದ ವೈಪರೀತ್ಯದಿಂದ ಪ್ರವಾಹ, ಬರಗಾಲವನ್ನು ನಾವು ಎದುರಿಸುತ್ತಿದ್ದೇವೆ. ಈ ಬಗ್ಗೆ ಸಂಶೋಧನೆಗಳು ಹೆಚ್ಚಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು ":  ಕಳೆದ 20 ವರ್ಷಗಳಲ್ಲಿ ಹವಾಮಾನದ ವೈಪರೀತ್ಯದಿಂದ ಪ್ರವಾಹ, ಬರಗಾಲವನ್ನು ನಾವು ಎದುರಿಸುತ್ತಿದ್ದೇವೆ. ಈ ಬಗ್ಗೆ ಸಂಶೋಧನೆಗಳು ಹೆಚ್ಚಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ಅವರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಭೂ ಪರಿವರ್ತನೆ ಮತ್ತು ಒಣಭೂಮಿ ನಿರ್ವಹಣೆ’ ಕಾರ್ಯಕ್ರಮ ಉದ್ಘಾಟಿಸಿ ರಾಜ್ಯ ಪರಿಸರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.

ನಿಸರ್ಗವನ್ನು ಪ್ರೀತಿಸುವ ಮನಸನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಿಸರ್ಗ ಕಾಪಾಡುವುದು ಕಷ್ಟವೇನಿಲ್ಲ. ಅದನ್ನು ಪ್ರೀತಿಸುವ ಪ್ರವೃತ್ತಿ ಅಗತ್ಯ. ಒಂದು ಮರ ಕಡಿದರೆ ಮತ್ತೊಂದು ನೆಡಬೇಕು. ಕಾಡು ಬೆಳೆಸಬೇಕಿದೆ. ಜೊತೆಗೆ ಪರಿಸರದ ಕುರಿತು ಸಂಶೋಧನೆಗಳು ಸರಿಯಾದ ದಾರಿಯಲ್ಲಿ ನಡೆಯಬೇಕು, ಸಂಶೋಧನಾ ಕೇಂದ್ರಗಳೂ ಹೆಚ್ಚಾಗಬೇಕು. ಯಾವ ಭಾಗದಲ್ಲಿ ಯಾವ ರೀತಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕೆನ್ನುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಪ್ರತಿದಿನವೂ ಪರಿಸರ ದಿನವನ್ನಾಗಿ ಆಚರಿಸುವ ಪ್ರವೃತ್ತಿ ಅಗತ್ಯ. ತಾಜ್ಯಗಳ ಸೂಕ್ತ ವಿಲೇವಾರಿ, ಮಳೆ ನೀರು ಕೊಯ್ಲು ಮುಂತಾದ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಅನುಕೂಲ. ಮನುಷ್ಯರು ಬದುಕುವಂತೆ ಪ್ರಾಣಿ ಸಂಕುಲಕ್ಕೂ ಬದುಕುವ ಹಕ್ಕಿದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಆರೋಗ್ಯಕ್ಕೂ ನೈರ್ಮಲ್ಯಕ್ಕೂ ನೇರ ಸಂಬಂಧವಿದೆ. ಸ್ವಚ್ಛತೆ ಇದ್ದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಶುದ್ಧ ಕುಡಿಯುವ ನೀರು ಸರಬರಾಜು ಸರ್ಕಾರದ ಕರ್ತವ್ಯ. ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಸರಬರಾಜಿನ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದರು. ಡೆಂಘೀ ನಿಯಂತ್ರಣಕ್ಕೆ ಕೈಜೋಡಿಸಿ:

ಇತ್ತೀಚೆಗೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣಕ್ಕೆ ನಗರಪಾಲಿಕೆ, ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆಗಳ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರೂ ಕೈಜೋಡಿಸಿದಾಗ ಮಾತ್ರ ಡೆಂಘೀ ನಿರ್ಮೂಲನೆ ಸಾಧ್ಯ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ ಬಹುತೇಕ ಕಡೆ ಈಗ 40 ಡಿಗ್ರಿಗಿಂತ ಕಮ್ಮಿ ತಾಪಮಾನ
ದಿನ ಸಲೂನ್‌ ಬರ್ತಿದ್ದ ಕೋತಿಗೆ ಅಂಗಡಿಯವನಿಂದ ಹೇರ್‌ಸ್ಟೈಲ್‌!