ಸಿಎಂ ಭೇಟಿ: ಸಿದ್ಧತೆ ಪರಿಶೀಲಿಸಿದ ಶಾಸಕ ಕೃಷ್ಣಮೂರ್ತಿ

KannadaprabhaNewsNetwork |  
Published : Sep 30, 2026, 01:45 AM IST
ಲೀಡ್‌ | Kannada Prabha

ಸಾರಾಂಶ

ಪ್ರಪ್ರಥಮ ಬಾರಿಗೆ ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಆಗಮಿಸುತ್ತಿರುವ ಹಿನ್ನೆಲೆ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಸಿದ್ದತೆಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪ್ರಪ್ರಥಮ ಬಾರಿಗೆ ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಆಗಮಿಸುತ್ತಿರುವ ಹಿನ್ನೆಲೆ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಸಿದ್ದತೆಗಳನ್ನು ಪರಿಶೀಲಿಸಿದರು.

ಕಾರ್ಯಕ್ರಮ ಎಲ್ಲರ ಸಹಕಾರದಿಂದ ಯಶಸ್ವಿಯಾಗಲಿದೆ. ಈಗಾಗಲೇ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲು ಜಿಲ್ಲಾಡಳಿತ, ತಾಲೂಕು ಆಡಳಿತ ಅಗತ್ಯ ಸಿದ್ದತೆ ಕೈಗೊಂಡಿದ್ದು ಕಾರ್ಯಕ್ರಮಕ್ಕೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಅಭಿಮಾನಿಗಳು, ಕ್ಷೇತ್ರದ ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಹನೂರು,ಕೊಳ್ಳೇಗಾಲ ಕ್ಷೇತ್ರದ ಸಾವಿರದ ಐನೂರು ಕೋಟಿ ರು.ಗಳಿಗೂ ಹೆಚ್ಚು ಅನುದಾನದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೊದಲ ಬಾರಿಗೆ ಸಿಎಂ ನಮ್ಮ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಗೌರವ ಪೂರ್ವಕವಾಗಿ ಪಕ್ಷದ ವತಿಯಿಂದ ಬರಮಾಡಿಕೊಳ್ಳಲಾಗುವುದು. ಅದೇ ರೀತಿಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಹಂತದ ಅಧಿಕಾರಿಗಳು ತಮಗೆ ಸಿಕ್ಕ 5 ದಿನಗಳ ಕಾಲಾವಕಾಶದಲ್ಲಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದರು.

ಈ ವೇಳೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್, ಬ್ಲಾಕ್ ಅದ್ಯಕ್ಷ ತೋಟೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು, ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರಶಾಂತರಾಜು, ಪ್ರಭುಸ್ವಾಮಿ. ದುಗ್ಗಟ್ಟಿ ಮಾದೇಶ್, ಅನ್ಸರ್ ಬೇಗ್, ಸಿಗ್ ಬತ್ ಉಲ್ಲಾ, ಮಾಂಬಳ್ಳಿ ಮುಜು, ಸಮಾಜ ಸೇವಕ ಓಲೆ ಮಹದೇವು, ನಗರಸಭೆ ಮಾಜಿ ಉಪಾಧ್ಯಕ್ಷ ಹರ್ಷ, ಮಾಜಿ ಸದಸ್ಯರಾದ ಮಂಜುನಾಥ್, ಶಂಕನಪುರ ಪ್ರಕಾಶ್ ಇತರರು ಹಾಜರಿದ್ದರು.

ಕೊಳ್ಳೇಗಾಲ ಕ್ಷೇತ್ರಕ್ಕೆ ನಿರೀಕ್ಷೆಗಳು ನೂರಾರು:

ಮುಖ್ಯಮಂತ್ರಿಗಳಾದ ಬಳಿಕ ಮೊದಲ ಬಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಲ್ಲಿ ಸಮಗ್ರ ಅಭಿವೃದ್ದಿ ಕುರಿತು ಸಾಕಷ್ಟು ನಿರೀಕ್ಷೆಗಳು ಇವೆ. ಸೆ.30ರ ಬುಧವಾರ ಮುಖ್ಯಮಂತ್ರಿಗಳು ನೂರಾರು ಕೋಟಿ ಅಭಿವೃದ್ದಿ ಕಾಮಗಾರಿಗಳಿಗೆ ಸರ್ಕಾರಿ ಎಂ ಜಿ ಎಸ್ ವಿ ವೇದಿಕೆಯಲ್ಲಿ ಏಕಕಾಲದಲ್ಲಿ ಚಾಲನೆ ನೀಡಲಿದ್ದಾರೆ. ಅದೇ ರೀತಿಯಲ್ಲಿ ಯಳಂದೂರು ಆಸ್ಪತ್ರೆ, ಕೊಳ್ಳೇಗಾಲ ಅಂಬೇಡ್ಕರ್ ಭವನ ಕಾಮಗಾರಿಯನ್ನುಉದ್ಘಾಟಿಸಿದ ಬಳಿಕ ವಿವಿಧ ಇಲಾಖೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವರು.

ಈ ವೇಳೆ ಸಿ ಎಂ ಆಗಮನದ ಹಿನ್ನೆಲೆ ಸ್ವಾಗತಕ್ಕೆ ಒಂದೆಡೆ ಅಧಿಕಾರಿ ವರ್ಗ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಅದ್ದೂರಿ ಸ್ವಾಗತಕ್ಕೆ ಅಗತ್ಯ ಕ್ರಮಕೈಗೊಂಡಿದ್ದು ಸರ್ಕಾರಿ ಎಂಜಿ ಎಸ್ ವಿ ಕಾಲೇಜಿನಲ್ಲಿ ಭವ್ಯ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಬಾಗಶಃ ಪೂರ್ಣಗೊಂಡಿದೆ.

ಈಗಾಗಲೇ ಕೊಳ್ಳೇಗಾಲದ ಮುಖ್ಯರಸ್ತೆಗಳಾದ ರಾಜ್ ಕುಮಾರ್ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್ ರಸ್ತೆ ಅಗಲಿಕರಣಕ್ಕೆ ಶಾಸಕರು ಆಸಕ್ತಿ ಹೊಂದಿದ್ದಾರೆ, ಆದರೆ ಅನುದಾನದ ಕೊರತೆಯಿಂದ ಇದು ವಿಳಂಬವಾಗಿತ್ತು. ಹಂಪಾಪುರ ಬಳಿ ಸಿಲ್ಕ್ ಮಾರುಕಟ್ಟೆ ಪ್ರಾರಂಭ ಸೇರಿದಂತೆ ಹಲವು ಹೊಸ ಹೊಸ ಯೋಜನೆಗಳಿಗೆ ಮುಖ್ಯಮಂತ್ರಿಗಳು ಅನುದಾನ ನಿಗದಿಗೊಳಿಸುವಂತೆ ಶಾಸಕರು ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸರ್ಕಟನ್ ಚಾನಲ್ ಅಭಿವೃದ್ಧಿಗೆ ಮನವಿ

ಕೊಳ್ಳೇಗಾಲ ಪಟ್ಟಣದಲ್ಲಿ ನೀರಾವರಿ ಇಲಾಖೆ ದಶಕಗಳಿಂದಲೂ ಕೈಗೊಂಡಿರುವ ಸರ್ಕಟನ್ ಚಾನಲ್ ಅಭಿವೃದ್ದಿ ಕಾಮಗಾರಿ ಇನ್ನು ನಿಧಾನಗತಿಯಲ್ಲಿ ಸಾಗಿದ್ದು ಸದ್ಯ ಅಪೂರ್ಣಗೊಂಡಿದೆ. ಅಂದಿನ ಶಾಸಕರಾಗಿದ್ದ ಜಯಣ್ಣ ಅವರ ಪರಿಕಲ್ಪನೆ ಇದಾಗಿತ್ತು. ಬಳಿಕ ಅನೇಕ ಶಾಸಕರು ಈ ಯೋಜನೆ ಪೂರ್ಣಕ್ಕಾಗಿ ಅನೇಕ ಕ್ರಮ ಕೈಗೊಂಡರಾದರೂ ಅನೇಕ ಕಾರಣಗಳಿಗಾಗಿ ಇನ್ನು ಈ ಕಾಮಗಾರಿ ಅಪೂರ್ಣಗೊಂಡಿದ್ದು ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಇನ್ನಾದರೂ ಈ ಕಾಮಗಾರಿಗೆ ಮುಕ್ತಿ ನೀಡುವಂತಾಗಲಿ ಎಂದು ನಾಗರಿಕರು ಮನವಿ ಮಾಡಿದ್ದಾರೆ.

ಶಾದಿ ಮಹಲ್ ಶೀಘ್ರ ಪೂರ್ಣ ಶಾಸಕರಿಗೆ ಸವಾಲು

ಕೊಳ್ಳೇಗಾಲದಲ್ಲಿ ನಿರ್ಮಾಣ ಹಂತದಲ್ಲಿರುವ ಶಾದಿಮಹಲ್ ಪೂರ್ಣಗೊಳಿಸುವುದು ಸಹಾ ಈಗ ಶಾಸಕ ಎ.ಆರ್. ಆರ್ ಕೃಷ್ಣಮೂರ್ತಿ ಅವರಿಗೆ ಸವಾಲಾಗಿ ಪರಿಣಮಿಸಿದೆ.

ಕಳೆದ 19ವರ್ಷಗಳಿಂದಲೂ ಕಾಮಗಾರಿ ನಿಧಾನಗತಿಯತ್ತ ಸಾಗಿದ್ದು ಶೀಘ್ರ ಪೂರ್ಣಗೊಳಿಸುವಂತೆ ಮುಸ್ಲಿಂ ಸಮಾಜ ಬೇಸರಗೊಂಡು ಮೊನ್ನೆ ನಡೆದ ಪೂರ್ವಭಾವಿ ಸಭೆಗೆ ಆಗಮಿಸಿರಲಿಲ್ಲ. ಈ ಹಿನ್ನೆಲೆ ಮುನಿಸು ತಣಿಸಿರುವ ಶಾಸಕರು ನನ್ನ ಅವಧಿಯೊಳಗೆ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಮುಸ್ಲಿಂ ಸಮಾಜದ ಸ್ಮಶಾನ ಅಭಿವೃದ್ದಿ, ಶಾದಿ ಮಹಲ್ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು ಸವಾಲಾಗಿ ಸ್ವೀಕರಿಸಿದ್ದು ಅದೇ ರೀತಿಯಲ್ಲಿ ಹಲವು ಕಾಮಗಾರಿಗಳಿಗಾಗಿ ಸಿಎಂ ಬಳಿ ಹೆಚ್ಚಿನ ಅನುದಾನ ಕೇಳುವ ನಿರೀಕ್ಷೆ ಇದೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ