ರಾಮನಗರ: ರಾಮನಗರ ಸೇರಿದಂತೆ ಚನ್ನಪಟ್ಟಣ ಮತ್ತು ಮಾಗಡಿ ಕ್ಷೇತ್ರಗಳ ಅಭಿವೃದ್ಧಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೂವರು ಶಾಸಕರಿಗೂ ಬುಲಾವ್ ನೀಡಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಬೆಂಗಳೂರು ದಕ್ಷಿಣ (ರಾಮನಗರ) ಮಾಜಿ ಪ್ರಧಾನಿ, ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳ ಜಿಲ್ಲೆಯಾಗಿರುವುದರಿಂದ ಅಭಿವೃದ್ಧಿ ನಿರೀಕ್ಷೆಗಳು ಸಾಕಷ್ಟಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಶೇ. 30ರಷ್ಟು ಭಾಗದಲ್ಲಿ ಮಾತ್ರ ಯುಜಿಡಿ ವ್ಯವಸ್ಥೆ ಇದ್ದು, ಆ ವ್ಯವಸ್ಥೆ ಎಲ್ಲೆಡೆ ಆಗಬೇಕಾಗಿದೆ. ಹೀಗಾಗಿ ಹೈದರಾಬಾದ್ ತಂಡ ನಗರದಲ್ಲಿ ಯುಜಿಡಿ ವ್ಯವಸ್ಥೆ ಪರಿಶೀಲಿಸಿ 300 ಕೋಟಿ ರುಪಾಯಿಗಳ ಪ್ರಸ್ತಾವನೆ ಸಿದ್ಧಪಡಿಸಿದೆ. ರಸ್ತೆ,ಚರಂಡಿ, ಪಾರ್ಕ್ ಗಳ ನಿರ್ಮಾಣ, ಹೈಟೆಕ್ ಶಾಲೆ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಈಗಾಗಲೇ ಅರ್ಚಕರಹಳ್ಳಿ ವಾರ್ಡಿನಲ್ಲಿ ಯುಐಡಿಎಫ್ ಸೇರಿದಂತೆ ಈಗಾಗಲೇ ವಿವಿಧ ಶೀರ್ಷಿಕೆಗಳಡಿ 2 ಕೋಟಿ ರುಪಾಯಿ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮುಂದುವರಿಸ ಭಾಗವಾಗಿ ಈಗ 2 ಕೋಟಿ ಅನುದಾನದಲ್ಲಿ ರಸ್ತೆ, ಚರಂಡಿ ಅಭಿವೃದ್ದಿ ಕೆಲಸ ಕೈಗೆತ್ತಿಕೊಂಡಿದ್ದು ಒಟ್ಟು 4 ಕೋಟಿ ರುಪಾಯಿ ವೆಚ್ಚದಲ್ಲಿ ಕೆಲಸಗಳು ಈ ವಾರ್ಡಿನಲ್ಲಿ ನಡೆಯುತ್ತಿವೆ ಎಂದರು.ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೌಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನ ಲಭ್ಯವಾಗಿದ್ದು, ಮೂಲ ಸೌಕರ್ಯಗಳ ಉನ್ನತೀಕರಣ, ಗುಣಮಟ್ಟದ ರಸ್ತೆಗಳ ನಿರ್ಮಾಣ, ಕಾಂಕ್ರೀಟ್, ಡಾಂಬರೀಕರಣ, ಮತ್ತು ರಾಜಕಾಲುವೆಗಳ ನಿರ್ಮಾಣ ಹಾಗೂ ನವೀಕರಣ. ಕುಡಿಯುವ ನೀರು ಪೂರೈಕೆ, ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ. ಬೀದಿ ದೀಪ ಅಳವಡಿಕೆ, ಸಾರ್ವಜನಿಕ ಶೌಚಾಲಯ ಸೌಲಭ್ಯಗಳು ಹಾಗೂ ಸಾರ್ವಜನಿಕ ಕಟ್ಟಡ ಶೌಚಾಲಯ, ಸ್ಮಶಾನ ಗಳ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಬಹು ದಾಗಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯರಾದ ವಿಜಯಕುಮಾರಿ, ಆಯಿಷಾಬಾನು, ಅಜ್ಮತ್, ಮುತ್ತುರಾಜು , ಮುಖಂಡರಾದ ದೀಪು, ವಿಜಯಕುಮಾರ್, ವೇದಮೂರ್ತಿ, ಹೂಗುರುವಯ್ಯ, ಕೆಂಪರಾಮು, ಅನಿಲ್ ಜೋಗೆಂದರ್, ಎಂ.ಮುಷೀರ್, ವಸೀಂ, ಇನಾಯತ್ , ಪೌರಾಯುಕ್ತ ಡಾ.ಜಯಣ್ಣ ಮತ್ತಿತರರು ಹಾಜರಿದ್ದರು.
ರಾಮಲಿಂಗಾರೆಡ್ಡಿ - ಮುನಿಯಪ್ಪ ಅನುಭವಕ್ಕೆ ತಕ್ಕ ಹುದ್ದೆ ಕೇಳಿರುವುದರಲ್ಲಿ ತಪ್ಪಿಲ್ಲ - ಇಕ್ಬಾಲ್ ಹುಸೇನ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಷ್ಟೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಾಗಿದ್ದಾರೆ. ನಮ್ಮ ಪಕ್ಷದವರೇ ಹುದ್ದೆ ಕೇಳುತ್ತಿದ್ದು, ಅದರಲ್ಲಿ ತಪ್ಪೇನಿಲ್ಲ. ಯಾವ ರೀತಿಯ ಗೊಂದಲವೂ ಇಲ್ಲ. ದೊಡ್ಡವರು ಎಲ್ಲವನ್ನು ತೀರ್ಮಾನ ಮಾಡುತ್ತಾರೆ. ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಅನುಭವಿ ರಾಜಕಾರಣಿ, ಸೋಲಿಲ್ಲದ ಸರದಾರ. ವಿವಿಧ ಇಲಾಖಾ ಸಚಿವರಾಗಿ, ಈ ಹಿಂದೆ ಬೆಂಗಳೂರು ನಗರ, ರಾಮನಗರ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದವರು. ಬೆಂಗಳೂರು ನಗರ ಪ್ರದೇಶದ ಬಗ್ಗೆ ಸಂಪೂರ್ಣ ಅರಿವಿದೆ. ಅವರು ಬೆಂಗಳೂರಿಗೆ ಒಂದಷ್ಟು ಕೆಲಸ ಮಾಡುವ ಬದ್ದತೆಯಿದೆ. ಜಿಬಿಡಿ ಚುನಾವಣೆ ಬರುತ್ತಿರುವುದರಿಂದ ಅವಕಾಶ ಕೊಡಿ ಅಂತ ಕೇಳುತ್ತಿದ್ದಾರೆ. ರೆಡ್ಡಿರವರು ಅನುಭವಕ್ಕೆ ತಕ್ಕಂತೆ ಹುದ್ದೆ ಬಯಸಿದ್ದರಲ್ಲಿ ತಪ್ಪೇನಿಲ್ಲ ಎಂದರು.
5ಕೆಆರ್ ಎಂಎನ್ 4.ಜೆಪಿಜಿ