;Resize=(412,232))
ಯಾದಗಿರಿ : ವನ್ಯಜೀವಿಗಳ ಬೇಟೆ ತಡೆಯಲು, ನಸುಕಿನ ಜಾವ ಕಾಡಿಗೆ ತೆರಳಿದ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಸೇರಿದಂತೆ ಮೂವರು ಗಸ್ತು ವನಪಾಲಕರನ್ನು ಮನಸೋಇಚ್ಛೆ ಥಳಿಸಿದ ಸುಮಾರು 10ಕ್ಕೂ ಹೆಚ್ಚು ಬೇಟೆಗಾರರ ತಂಡ, ಇವರನ್ನು ಜಾಲಿಗಿಡಕ್ಕೆ ಕಟ್ಟಿ, ಸಮವಸ್ತ್ರ ಹರಿದು, ಇಲಾಖೆಯ ಸ್ಟಾರ್‌ಗಳನ್ನು ಕಿತ್ತು ಸಿನಿಮೀಯ ರೀತಿ ಪೈಶಾಚಿಕ ಕೃತ್ಯ ನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಸಮೀಪ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಸುರಪುರದ ವಲಯ ಅರಣ್ಯಾಧಿಕಾರಿ ಬಾಗಪ್ಪಗೌಡ ಸುಂಬಡ, ಗಸ್ತುವನಪಾಲಕರಾದ ಕಾಶೀನಾಥ್ ರಾಠೋಡ್ ಹಾಗೂ ಲಾಲ್ ಮಹ್ಮದ್, ಬೇಟೆಗಾರರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದವರು. ಮೇ 2 ರಂದು ನಸುಕಿನ ಜಾವ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವನ್ಯಜೀವಿ ಪ್ರಾಣಿಗಳಾದ ಮೊಲ, ನರಿ, ಮುಳ್ಳುಹಂದಿ, ಕೃಷ್ಣಮೃಗ ಹಾಗೂ ಕಾಡುಹಂದಿಗಳನ್ನು ಬೇಟೆಯಾಡುತ್ತಿರುವ ದೃಶ್ಯಗಳಿರುವ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ, ಕಕ್ಕೇರಾ ಗ್ರಾಮದ ಮಲಕೋಜರರ ದೊಡ್ಡಿಯ ಐವರನ್ನು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಆರೋಪಿಗಳ ವಶಕ್ಕೆ ಪಡೆದ ನಂತರ, ಮತ್ತೊಂದು ಬೊಲೆರೋ ವಾಹನದಲ್ಲಿ ತೆರಳುತ್ತಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ವಾಹನ ಅಡ್ಡಗಟ್ಟಿದ ಬೇಟೆಗಾರರ ತಂಡ, ಆರ್‌ಎಫ್‌ಒ ಬಾಗಪ್ಪಗೌಡರನ್ನು ಮೃಗೀಯ ರೀತಿ ಎಳೆದುಕೊಂಡು ಹೋಗಿ, ಅಲ್ಲಿನ ಕರಿಜಾಲಿಗಿಡಕ್ಕೆ ಹಗ್ಗದಿಂದ ಕಟ್ಟಿ, ಬಡಿಗೆಯಿಂದ ತೀವ್ರ ತರಹದ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಲಾಲ್ ಅಹ್ಮದ್ ಹಾಗೂ ಕಾಶೀನಾಥ್‌ರ ಮೇಲೂ ಇದೇ ತೆರನಾದ ಕೃತ್ಯ ಎಸಗಿ, ಜೀವಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
"ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಮೇಲಿನ ಈ ಹಲ್ಲೆ ಪ್ರಕರಣ ನಿಜಕ್ಕೂ ಆಘಾತ ಮೂಡಿಸಿದೆ. ಸಮವಸ್ತ್ರ ಹರಿದು, ಭುಜದ ಮೇಲಿನ ಸ್ಟಾರ್ ಕಿತ್ತು ಅಟ್ಟಹಾಸ ಮರೆದಿದ್ದಾರೆ. ಅಧಿಕಾರಿಯ ಕೆಳದವಡೆಯ ಹಲ್ಲು ಮುರಿದಿದ್ದಾರೆ ಘಟನೆಯ ಬಗ್ಗೆ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ತೆರಳಿದಾಗಲೂ, ಮೊದಲು ಬಂಧಿಸಿದ ಐವರನ್ನು ಬಿಟ್ಟರೆ ಮಾತ್ರ ಜಾಲಿಗಿಡಕ್ಕೆ ಕಟ್ಟಿಹಾಕಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಿಡುವುದಾಗಿ ಷರತ್ತು ಇಟ್ಟಿದ್ದರು. ಕೊನೆಗೆ ಪೊಲೀಸರ ಎಚ್ಚರಿಕೆ ನಂತರ ಆರ್‌ಎಫ್‌ಒ ಹಾಗೂ ಉಳಿದವರ ಬಿಡುಗಡೆ ಮಾಡಲಾಗಿದೆ." ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಅಲ್ಲಿ ಏರ್ಪಟ್ಟಿದ್ದ ಆತಂಕದ ವಾತಾವರಣ ಬಗ್ಗೆ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ, ಕಾಶೀನಾಥ್ ನೀಡಿದ ದೂರಿನಂತೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ (108/2026) ದಾಖಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ 2023, ಕಲಂ 189 (2), 191 (1), 191 (2), 115 (1), 118 (1), 126, 127 (2), 110, 132, 352, 351 (1) ಜೊತೆ 190 ಅಡಿಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದೆ.
ಉಳಿದ ಆರೋಪಿಗಳ ಬಂಧಿಸಲಾಗುವುದು ಎಂದು ಎಸ್ಪಿ ಪೃಥ್ವಿಕ್ ಶಂಕರ್ "ಕನ್ನಡಪ್ರಭ"ಕ್ಕೆ ಪ್ರತಿಕ್ರಿಯಿಸಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲಿನ ಈ ಹಲ್ಲೆ ಘಟನೆ ಅರಣ್ಯ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಗಿಡಕ್ಕೆ ಕಟ್ಟಿ ಹೊಡೆದ ಕಾರಣ ಆರ್‌ಎಫ್‌ಒ ಆಘಾತಕ್ಕೀಡಾಗಿದ್ದಾರೆನ್ನಲಾಗಿದೆ. ವರ್ಷದ ಹಿಂದೆ, ಅರಣ್ಯ ಜಮೀನು ಒತ್ತುವರಿ ಬಿಡಿಸಿಕೊಳ್ಳಲು ಸುರಪುರಕ್ಕೆ ತೆರಳಿದ್ದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಮೇಲೆ ಜೆಸಿಬಿಯನ್ನೇ ಹಾಯಿಸಿ, ಕೊಲ್ಲುವ ಯತ್ನ ನಡೆದಿತ್ತು ಎಂಬುದಾಗಿ ಆಗ ಕೇಳಿ ಬಂದಿತ್ತು.