;Resize=(412,232))
ಯಾದಗಿರಿ : ಗರ್ಭಿಣಿಯೊಬ್ಬಳ ಜೊತೆ ತನ್ನ ಪುತ್ರ ಅನೈತಿಕ ಸಂಬಂಧ ಹೊಂದಿದ ಆರೋಪದ ಮೇಲೆ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಕುಟುಂಬದ ಮಹಿಳೆ ಮನನೊಂದು ನದಿಗೆ ಹಾರಿ ಆತ್ಮ*ತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜಿನಲ್ಲಿ ನಡೆದಿದೆ.
ಮೀನುಗಾರ ವೃತ್ತಿ ಮಾಡಿಕೊಂಡಿದ್ದ ಕಮಲಮ್ಮ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆಕೆಯ ಪುತ್ರ ಎರ್ರಿಸ್ವಾಮಿ ಎಂಬಾತ ಅದೇ ಸಮುದಾಯದ ಗರ್ಭಿಣಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ, ಕಮಲಮ್ಮ ಕುಟುಂಬಸ್ಥರಿಗೆ ಶಿಳ್ಳೆಕ್ಯಾತ ಸಮುದಾಯದ ಮುಖಂಡರು 50000 ರು. ದಂಡ ಮತ್ತು 10 ವರ್ಷ ಸಾಮಾಜಿಕ ಬಹಿಷ್ಕಾರ ಹಾಕಿದ್ದರು ಎನ್ನಲಾಗಿದೆ.
ಮನೆ ಖಾಲಿ ಮಾಡಿ ಹೋಗಬೇಕು, ಯಾರ ಜೊತೆಯೂ ಮಾತನಾಡಕೂಡದು ಹಾಗೂ ಯಾರಾದರೂ ಮಾತನಾಡಿದರೆ ಅವರಿಗೂ ಕೂಡ 10 ವರ್ಷ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದರು. ಜೊತೆಗೆ, ಶಿಳ್ಳೆಕ್ಯಾತ ಸಮುದಾಯದ ಮುಖಂಡರು ಕಮಲಮ್ಮ ಹಾಗೂ ಕುಟುಂಬಕ್ಕೆ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ನೊಂದ ಕಮಲಮ್ಮ ಶನಿವಾರ ರಾತ್ರಿ ಸಮೀಪದ ಭೀಮಾ ನದಿಯ ಬ್ರಿಡ್ಜ್ ಕಂ ಬ್ಯಾರೇಜಿಗೆ ತೆರಳಿ, ಸೇತುವೆ ಮೇಲೆ ಮಾಂಗಲ್ಯ ಸರ ಕಳಚಿಟ್ಟು, ನದಿಗೆ ಹಾರಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.
ಮೀನುಗಾರಿಕೆ ಹಾಗೂ ಮೀನು ಮಾರಾಟ ಮಾಡಲೂ ಕೂಡ ಸಮುದಾಯದ ಮುಖಂಡರು ಅವಕಾಶ ಮಾಡದಿದ್ದರಿಂದ ಕಮಲಮ್ಮ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಸಾಮಾಜಿಕ ಬಹಿಷ್ಕಾರದ ನಂತರ, ಕುಟುಂಬಸ್ಥರು ಸಂಬಂಧಿಕರ ಊರಾದ ಜೋಳದಡಗಿ ಗ್ರಾಮಕ್ಕೆ ಹೋಗಿದ್ದರು.
ಮೃತದೇಹವನ್ನು ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಯಿಮ್ಸ್) ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಆತ್ಮ*ತ್ಯೆಗೆ ಪ್ರಚೋದನೆ ಆರೋಪದಡಿ, ವಡಗೇರಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 108 ಸೆಕ್ಷನ್‌ನಡಿ ಪ್ರಕರಣ (0058/2026) ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, ಇನ್ನೂ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ.