Mahesha Swami, Secretary of the Sri Matha, announced that the traditional Padayatra from Gamvhara—the birthplace of the accomplished saint Sri Vishwaradhya—to Abbetumakuru will commence on August 10, under the leadership of Dr. Gangadhara Mahaswami of Abbetumakuru.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಿದ್ಧಿಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರಿಗೆ ಪ್ರತಿವರ್ಷದ ಪದ್ಧತಿಯಂತೆ ಅಬ್ಬೆತುಮಕೂರು ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಂಪರಾ ಪಾದಯಾತ್ರೆ ಆ.10 ರಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಮಹೇಶ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ.10 ಸೋಮವಾರದಂದು ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಲಾಗುವುದು. ಅಲ್ಲಿ ಬಿ.ಎಂ.ಪಾಟೀಲ ಅವರಿಂದ ಪ್ರಸಾದ ವ್ಯವಸ್ಥೆ ಜರುಗಲಿದೆ. ನಂತರ ಮಧ್ಯಾಹ್ನ1ಕ್ಕೆ ಸಕಲ ಮಂಗಲ ವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಭಕ್ತಗಣಪುರದ ಜನರ ಕಳಸ, ಕನ್ನಡಿಯೊಂದಿಗೆ ಪಾದಯಾತ್ರೆ ಸಾಗಲಿದೆ.

ನಂತರ ಪಾದಯಾತ್ರೆ ಗ್ರಾಮದ ಸೀಮಾಂತರದಲ್ಲಿ ಊರಿನ ಚನ್ನಪ್ಪ ಸಾಹು ಬಿರಾದಾರ ಅವರ ಹೊಲದಲ್ಲಿ ನಿರ್ಮಿಸಿದ ಗುರು ಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಲಿದೆ. ಅಲ್ಲಿ ಎಲ್ಲ ಭಕ್ತಗಣ ಪ್ರಸಾದ ಸ್ವೀಕರಿಸಿ ಮುಂದೆ ಹೊರಡುವ ಪಾದಯಾತ್ರೆ ಮಾರ್ಗ ಮಧ್ಯೆ ಅನೇಕ ಭಕ್ತರ ವಿಶ್ರಾಂತಿ ಕಟ್ಟೆಯಲ್ಲಿ ಪಾದಪೂಜೆ ಮುಗಿಸಿಕೊಂಡು ಅಣಬಿ ಗ್ರಾಮ ತಲುಪಲಿದೆ.

ಅಣಬಿ ಗ್ರಾಮದ ಭಕ್ತರು ಪಾದಯಾತ್ರೆಯನ್ನು ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸುವುರು. ಅಣಬಿ ಹಳ್ಳದ ದಂಡೆಯಲ್ಲಿ ಚಿತ್ತಾಪುರದ ವಿಶ್ವಗಂಗಾ ಗೆಳೆಯರ ಬಳಗದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪಾದಯಾತ್ರೆಗಳಿಗೆ ಶ್ರೀ ವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದ ಜರುಗಲಿದೆ. ಪಾದಯಾತ್ರೆ ಸಿರವಾಳ ಗ್ರಾಮ ತಲುಪಿದ ಮೇಲೆ ಆ ಗ್ರಾಮದ ಮಾಜಿ ಶಾಸಕ ಗುರುಪಾಟೀಲ ನೇತೃತ್ವದಲ್ಲಿ ಸಾಯಿಬಣ್ಣ ಶರಣರ ಹೊಲದಲ್ಲಿ ಪ್ರಸಾದ ಜರುಗುವುದು.

ಬಳಿಕ ಪಾದಯಾತ್ರೆ ಹುರಸಗುಂಡಗಿ ಮುಖಾಂತರ ಅಲ್ಲಿನ ಭಕ್ತರ ಸೇವೆ ಸ್ವೀಕರಿಸಿ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಮಾಡುವರು.

ಆ.11 ಮಂಗಳವಾರಂದು 2 ನೇ ದಿನದ ಪಾದಯಾತ್ರೆ ಕನಗಾನಹಳ್ಳಿ ಮಾರ್ಗವಾಗಿ ಹೊರಟು ಊಳವಂಡಗೇರಾ ಗ್ರಾಮದ ಭಕ್ತರಿಂದ ಪಾದಪೂಜೆ ಮತ್ತು ಪ್ರಸಾದ ವ್ಯವಸ್ಥೆ ನೆರವೇರಲಿದೆ. ಅಲ್ಲಿಂದ ಸಾಗುವ ಪಾದಯಾತ್ರೆ ಬನ್ನೆಟ್ಟಿ ಗ್ರಾಮ ದಾಟಿದ ನಂತರ ಶ್ರೀವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಶಿವಲಿಂಗಪ್ಪ ಸಾಹು ಕೂಡಿ ಫರಹತಾಬಾದ್ ಹಾಗೂ ಅವರ ಬಳಗದವರು ಏರ್ಪಡಿಸುವ ಪ್ರಸಾದವನ್ನು ಎಲ್ಲ ಭಕ್ತರೊಂದಿಗೆ ಶ್ರೀಗಳು ಸೇವಿಸುವರು.

ಹಾಗೆ ಮುಂದೆ ಹೊರಡುವ ಪಾದಯಾತ್ರೆ ತಳಕ ಗ್ರಾಮದ ಗ್ರಾಮದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ತಳಕ ಗ್ರಾಮದ ಭಕ್ತರ ಪ್ರಸಾದ ಸ್ವೀಕರಿಸಿ ಹೆಡಗಿಮದ್ರಾ ಗ್ರಾಮ ತಲುಪುವರು.

ಮಲ್ಲರೆಡ್ಡಪ್ಪ ಸಾಹು ಅರಿಕೇರಿ ಅವರ ಮನೆಯಲ್ಲಿ ಪಾದಯಾತ್ರಿಗಳು ಫಲಹಾರ ಸ್ವೀಕರಿಸಿ ಹಾಗೆ ಮುಂದೆ ಸಾಗಿ ಭೀಮರೆಡ್ಡಿ ಸಾಹುಕಾರ ಅವರು ಏರ್ಪಡಿಸುವ ಪ್ರಸಾದವನ್ನು ಸ್ವೀಕರಿಸಿ ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠವನ್ನು ತಲುಪಲಿದ್ದಾರೆ.

ಹೆಡಗಿಮದ್ರಾ ಮಠದಲ್ಲಿ ರಾತ್ರಿ ಇಡೀ ಭಜನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬಸವಂತಪೂರದ ಶಿವು ಸಾಹುಕಾರ ಅಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿರುತ್ತದೆ.

ಆ.12 ರಂದು ಬುಧವಾರದಂದು 3ನೇ ದಿನದ ಪಾದಯಾತ್ರೆ ಅಮಾವಾಸ್ಯೆಯ ವಿಶೇಷ ಪೂಜಾ ವಿಧಾನಗಳ ಜತೆಗೆ ಪಲ್ಲಕ್ಕಿ ಮೂರ್ತಿ ಗಂಗಾಸ್ನಾನ ನೆರವೇರಿಸಿಕೊಂಡು ತರುವಾಯ ಹೋತಪೇಟೆಯ ಮಲ್ಲರೆಡ್ಡಿಗೌಡ, ಶಹಾಪೂರದ ಮರೆಪ್ಪ ಹೈಯ್ಯಾಳಕರ್ ಏರ್ಪಡಿಸುವ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿ ಪಾದಯಾತ್ರೆಯು ಠಾಣಗುಂದಿ ತಲುಪಲಿದೆ.

ಠಾಣಗುಂದಿ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ ಪ್ರಸಾದ ಸ್ವೀಕರಿಸಿ ಸಂಜೆ ಅಬ್ಬೆತುಮಕೂರು ಶ್ರೀ ವಿಶ್ವಾರಾಧ್ಯರ ಪಾದಗಟ್ಟೆ ತಲುಪಲಿದೆ. ಅಲ್ಲಿ ಅಲ್ಲಿಪೂರ ಗ್ರಾಮದ ಸದ್ಭಕ್ತರಿಂದ ಹಾಗೂ ಪಲ್ಲವಿ ಹೋಟೆಲ್ ಮಾಲಿಕರಿಂದ ಪ್ರಸಾದ ಫಲಹಾರದ ವ್ಯವಸ್ಥೆ ಜರುಗಲಿದೆ.

ಸಂಜೆ 6ಕ್ಕೆ ಸಮಸ್ತ ಭಕ್ತರು ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರುಗಳು, ರಾಜಕೀಯ ಮುಖಂಡರು, ಸಾಹಿತಿ, ಕಲಾವಿದರು ಪಾದಯಾತ್ರೆಯನ್ನು ಭಕ್ತಿ ಸಡಗರಗಳಿಂದ ಬರಮಾಡಿಕೊಂಡು ಪಾದಗಟ್ಟೆಯಿಂದ ಶ್ರೀ ವಿಶ್ವಾರಾಧ್ಯರ ದೇವಸ್ಥಾನದ ವರೆಗೆ ವಿಶೇಷ ಮೆರವಣಿಗೆಯಲ್ಲಿ ಕರೆದೊಯ್ಯಲಿದ್ದಾರೆ.

ನಂತರ ಶ್ರೀಗಳು ಎಲ್ಲ ಭಕ್ತರಿಗೆ ದರ್ಶನ ನೀಡುವರು. ತರುವಾಯ ಮಾಸಿಕ ಅಮಾವಾಸ್ಯೆಯ ಶಿವಾನುಭವ ಗೋಷ್ಠಿ ಜರುವುದರೊಂದಿಗೆ ಪಾದಯಾತ್ರೆ ಸಂಪನ್ನಗೊಳ್ಳಲಿದೆ.

ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರಸೇರಿದಂತೆ ಲಕ್ಷಾಂತರ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಸಂದರ್ಭ ಸಂಬಂಧಪಟ್ಟ ಆರಕ್ಷಕ ಸಿಬ್ಬಂದಿ, ಆರೋಗ್ಯ, ಜೆಸ್ಕಾಂ ಇಲಾಖೆ ಮುಂತಾದವರು ಪಾದಯಾತ್ರೆ ಸುಗಮವಾಗಿ ನೆರವೇರಲು ಸಹಕರಿಸುವರು. ಸಮಸ್ತ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಹೇಶ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

----ಫೋಟೊ----

6ವೈಡಿಆರ್‌8 :

ಡಾ.ಗಂಗಾಧರ ಮಹಾಸ್ವಾಮಿ.