Kannada Prabha News, Afzalpur: Farmers staged a protest in front of the Tahsildar's office, led by the State Farmers' Association and the Self-Respecting Sugarcane Growers' Action Committee, alleging injustice in the distribution of crop insurance compensation.
-ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನ್ಯಾಯ । ಕಬ್ಬು ಬೆಳೆಗಾರರ ಹೋರಾಟ ಸಮಿತಿ ಪ್ರತಿಭಟನೆ
--ಕನ್ನಡಪ್ರಭ ವಾರ್ತೆ ಅಫಜಲಪುರ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜ್ಯ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಬೆಳೆ ನಷ್ಟ ಅನುಭವಿಸಿದ್ದರೂ, ಬೆಳೆ ವಿಮೆ ಯೋಜನೆಯಡಿ ಸಮರ್ಪಕ ಪರಿಹಾರ ದೊರೆತಿಲ್ಲ. ಸಂಕಷ್ಟದ ಸಮಯದಲ್ಲಿ ನೆರವಾಗಬೇಕಿದ್ದ ವಿಮೆ ಯೋಜನೆಯಡಿ ರೈತರು ನಿಯಮಿತವಾಗಿ ಪ್ರೀಮಿಯಂ ಪಾವತಿಸಿದ್ದರೂ, ಹಲವರ ಖಾತೆಗಳಿಗೆ ಅಲ್ಪ ಮೊತ್ತ ಮಾತ್ರ ಜಮೆಯಾಗಿದೆ. ಇನ್ನೂ ಅನೇಕ ಗ್ರಾ.ಪಂ ವ್ಯಾಪ್ತಿಯ ರೈತರಿಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆ ಮತ್ತೊಮ್ಮೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳಿಗೆ 8 ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯೊಳಗೆ ರೈತರಿಗೆ ನ್ಯಾಯ ಒದಗಿಸದಿದ್ದರೆ ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಟೆಂಟ್ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ರಮೇಶ ಪಾಟೀಲ, ಗುರು ಚಾಂದಕವಟೆ, ಬಸವರಾಜ ಪಾಟೀಲ, ಕಲ್ಯಾಣಿ ಅಂಜುಟಗಿ, ದೌಲತರಾಯ ಪಾಟೀಲ, ಶರಣಗೌಡ ಪಾಟೀಲ, ಅರ್ಜುನ ಸೋಮಜಾಳ, ಪ್ರಮೋದ ಭೋವಿಸಂಗಣ್ಣ ವಾಲಿ, ಚಂದು ಬನ್ನೇಟಿ, ರಾಜು ಬಡದಾಳ, ಮಲ್ಲು ಅತ್ತಾರ, ಶಿವು ಹಿರ್ಯಾಳ, ಸೂರ್ಯಕಾಂತ ಪವಾರ, ಬಸವರಾಜ ಕಲಶೆಟ್ಟಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.