ಕೋಹಿನೂರ್ ವಾಪಸ್‌ ಕೊಡಿ : ಬ್ರಿಟನ್‌ ರಾಜನಿಗೆ ನ್ಯೂಯಾರ್ಕ್‌ ಮೇಯರ್‌ ಕೋರಿಕೆ

Published : May 08, 2026, 11:08 AM IST
Kohinur

ಸಾರಾಂಶ

ವಿಶ್ವಪ್ರಸಿದ್ಧ ಕೋಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್‌ ಕುರಿತು, ಅಮೆರಿಕದ ನ್ಯೂಯಾರ್ಕ್‌ನ ಮೇಯರ್‌, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್‌ ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ

 ಆನಂದ್‌ ಎಂ. ಸೌದಿ

 ಯಾದಗಿರಿ : ವಿಶ್ವಪ್ರಸಿದ್ಧ ಕೋಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್‌ ಕುರಿತು, ಅಮೆರಿಕದ ನ್ಯೂಯಾರ್ಕ್‌ನ ಮೇಯರ್‌, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್‌ ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂಬೈ ಮೂಲದ ಮೊಹ್ಮದ್‌ ಮಮ್ದಾನಿ ಹಾಗೂ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಮೀರಾ ನಾಯರ್‌ ಪುತ್ರ ಜೋಹ್ರನ್‌ ಮಮ್ದಾನಿ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

9/11 ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲು ನ್ಯೂಯಾರ್ಕ್‌ಗೆ ಬುಧವಾರ ಬ್ರಿಟನ್‌ ರಾಜ ಚಾರ್ಲ್ಸ್ ಆಗಮಿಸಿದ್ದರು. ಈ ವೇಳೆ, ಅಲ್ಲಿನ ಮೇಯರ್‌ ಜೋಹ್ರನ್‌ ಮಮ್ದಾನಿ ಭೇಟಿ ನಿಗದಿಯಾಗಿತ್ತು. ಭೇಟಿಗೂ ಮುನ್ನ, ಮಾಧ್ಯಗಳೊಂದಿಗೆ ಮಾತನಾಡಿದ ಮಮ್ದಾನಿ, "ನಾನು ರಾಜನೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಸಿಕ್ಕರೆ, ಕೋಹಿನೂರ್ ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ." ಎಂದು ಹೇಳಿದ್ದರು. ನಂತರದಲ್ಲಿ ಅವರಿಬ್ಬರು ಈ ವಿಷಯದ ಬಗ್ಗೆ ಚರ್ಚೆ ನಡೆಸಿದರೋ ಅಥವಾ ಇಲ್ಲವೋ ಸ್ಪಷ್ಟವಾಗಿಲ್ಲವಾದರೂ, ಆದರೆ, ವಜ್ರ ಹಿಂತಿರುಗಿಸುವ ಕುರಿತು ಮಮ್ದಾನಿ ಹೇಳಿಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

 * ಯಾದಗಿರಿಯ ಕೊಳ್ಳೂರಿನಲ್ಲಿ ಕೋಹಿನೂರ್‌ ಉಗಮ !

ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ ಕೃಷ್ಣಾ ನದಿಯಲ್ಲಿ ಕೋಹಿನೂರ್‌ ವಜ್ರ ಸಿಕ್ಕ ಐತಿಹ್ಯದ ದಾಖಲೆಗಳಿವೆ. ಬ್ರಿಟಿಷ್‌ ಪ್ರವಾಸಿಗ, ಲೇಖಕ ರಾಬರ್ಟ್‌ ಸೀವೆಲ್‌ ಬರೆದ "ಎ ಫಾರಗಟನ್‌ ಎಂಪಾಯರ್‌- ವಿಜಯನಗರ" ಹಾಗೂ ವಿಲಿಯಂ ಡೇಲಿಂಪ್ಲ್‌ ಮತ್ತು ಅನಿತಾ ಆನಂದ್‌ ಅವರ 2017ರಲ್ಲಿ ಪ್ರಕಟವಾದ " ಕೋಹಿನೂರ್‌ : ದ ಹಿಸ್ಟರಿ ಆಫ್‌ ವರ್ಲ್ಡ್‌ ಮೋಸ್ಟ್‌ ಇನ್‌ಫೇಮಸ್ ಡೈಮಂಡ್‌" ಪುಸ್ತಕದಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಇತಿಹಾಸ ಸಂಶೋಧಕರಾಗಿದ್ದ ಶಹಾಪುರದ ದಿ. ಭಾಸ್ಕರರಾವ್‌ ಮುಡಬೂಳ್‌ ಅವರು ಈ ಬಗ್ಗೆ ದಾಖಲೆಗಳ ಸಂಗ್ರಹಕ್ಕೆ ಪ್ರಯತ್ನಿಸಿದ್ದರು. ರಾಜ್ಯ ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಗೋಯಲ್‌ ಅವರು, ಅಂದಿನ ಎಚ್ಕೆಡಿಬಿ ಕಾರ್ಯದರ್ಶಿಯಾಗಿದ್ದ ವೇಳೆ ಇಲ್ಲಿನ ಸರ್ವೆ ನಂ.337 ಹಾಗೂ 342ರಲ್ಲಿನ ಒಟ್ಟು 8 ಎಕರೆ 19 ಗುಂಟೆ ಪ್ರದೇಶವನ್ನು ಸಂರಕ್ಷಿತ ಸ್ಥಳವೆಂದು ಗುರುತಿಸಿದ್ದರಲ್ಲದೆ, ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿದ್ದರು. ಇಲ್ಲಿನ ಉತ್ಕೃಷ್ಟ ಮರಳಿಗೆ ಕನ್ನ ಹಾಕುತ್ತಿದ್ದವರ ತಡೆದು, ಇಲ್ಲಿ ಮರಳು ಗಣಿಗಾರಿಕೆ ನಿಷೇಧ ಹೇರಿ ಆದೇಶಿಸಲಾಗಿದೆ.

* ಏನಿದು ಕೋಹಿನೂರ್‌ ವಜ್ರ !

"ಕೋಹ್‌-ಎ-ನೂರ್‌", ಪರ್ಷಿಯನ್‌ ಭಾಷೆಯಲ್ಲಿನ ಈ ಪದದ ಅರ್ಥ ಬೆಳಕಿನ ಪರ್ವತ (ಕೋಹ್‌ ಅಂದರೆ ಪರ್ವತ, ನೂರ್‌ ಅಂದರೆ ಬೆಳಕು). ವಿಶ್ವದಲ್ಲಿನ ಅತಿ ದೊಡ್ಡ ಕತ್ತರಿಸಿದ ವಜ್ರಗಳಲ್ಲೊಂದು. 105.6 ಕ್ಯಾರೆಟ್ ತೂಕದ, ಒಂದು ಕೋಳಿ ಮೊಟ್ಟೆಯಷ್ಟು ಗಾತ್ರದ ಕೋಹಿನೂರ್‌ ವಜ್ರವನ್ನು 1849ರಲ್ಲಿ ಬ್ರಿಟಿಷರು ಸಿಖ್ ಸಾಮ್ರಾಜ್ಯದ 10 ವರ್ಷದ ಮಹಾರಾಜ ದುಲೀಪ್‌ ಸಿಂಗ್‌ ಅವರಿಂದ ಪಡೆಯಲಾಗಿತ್ತು. ಕಾಕತೀಯರು ಹಾಗೂ ಮೊಗಲರ ನಂತರ ಸಿಖ್‌ ದೊರೆಗಳ ವಶದಲ್ಲಿತ್ತು. ಒಪ್ಪಂದವೊಂದಕ್ಕೆ ಸಹಿ ಹಾಕುವ ವೇಳೆ ದುಲೀಪ್‌ ಸಿಂಗ್‌ರಿಂದ ಪಡೆದು, ವಿಕ್ಟೋರಿಯಾ ರಾಣಿಗೆ ಒಪ್ಪಿಸಲಾಗಿತ್ತು. ಸದ್ಯ, ಕೋಹಿನೂರ್‌ ವಜ್ರ ಬ್ರಿಟನ್‌ ರಾಜಮನೆತನದ ಎಲಿಜೆಬೆತ್‌ ರಾಣಿ ಕಿರೀಟದಲ್ಲಿ ಅಳವಡಿಸಲಾಗಿದ್ದು, ಲಂಡನ್ ಟವರ್‌ನಲ್ಲಿರುವ ಕ್ರೌನ್ ಜುವೆಲ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನದಲ್ಲಿದೆ. 2002ರಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ವಜ್ರ ಕೊನೆಯ ಬಾರಿ ಕಂಡುಬಂದಿತ್ತು.

* ಮಮ್ದಾನಿ ಹೇಳಿಕೆ : ಗರಿಗೆದರಿದ ಚರ್ಚೆ

ಬ್ರಿಟನ್ ಪ್ರಧಾನಿಯಾಗಿದ್ದ ಡೇವಿಡ್‌ ಕೆಮರೂನ್‌ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ, ಕೋಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ, ಇದಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದ ಡೇವಿಡ್‌, ಬ್ರಿಟನ್‌ನಲ್ಲಿ ಗ್ರೀಸ್, ಈಜಿಪ್ಟ್ ಮುಂತಾದವು ಸೇರಿದಂತೆ ವಿವಿಧ ರಾಷ್ಟ್ರಗಳ ಅನೇಕ ವಸ್ತುಗಳನ್ನು ಸಂಗ್ರಹಿಸಲ್ಪಟ್ಟಿವೆ. ಒಂದು ವಸ್ತುವನ್ನು ಹಿಂದಿರುಗಿಸಿದರೆ, ಭಾರತ ಮಾತ್ರವಲ್ಲ ಇತರ ದೇಶಗಳೂ ಅದೇ ಬೇಡಿಕೆಯನ್ನು ಮುಂದಿಡುತ್ತವೆ ಎಂದಿದ್ದರು. ಇನ್ನು, 2016ರಲ್ಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಸ್ನೇಹಪೂರ್ವಕವಾಗಿ ಕೋಹಿನೂರ್‌ ವಜ್ರ ವಾಪಸ್‌ ಪಡೆಯಲಾಗುವುದು ಎಂದು ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಆದರೆ, ಮ್ಯೂಸಿಯಂ ಕಾಯ್ದೆ ಪ್ರಕಾರ ವಸ್ತುಗಳನ್ನು ಹಿಂತಿರುಗಿಸುವುದು ಕಷ್ಟಕರ ಎಂದು ಬ್ರಿಟನ್‌ ಸ್ಪಷ್ಟಪಡಿಸಿತ್ತು. ಸದ್ಯ, ಮಮ್ದಾನಿ ಅವರ ಹೇಳಿಕೆ ಮತ್ತೇ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಮುಂದಿಟ್ಟಂತಾಗಿದೆ. 

PREV
Stay informed with the latest news and developments from Yadgir district (ಯಾದಗಿರಿ ಸುದ್ದಿ) — including local politics, agriculture, civic issues, social events, environment, community affairs and regional reports on Kannada Prabha News.
Read more Articles on

Recommended Stories

ಯಾದಗಿರಿ: 7 ತಿಂಗಳಲ್ಲಿ 30 ಹೆಣ್ಣು ಭ್ರೂಣ ಹತ್ಯೆ!
ಗರ್ಭಿಣಿ ಜೊತೆ ಪುತ್ರನ ಅನೈತಿಕ ಸಂಬಂಧ- ಸಾಮಾಜಿಕ ಬಹಿಷ್ಕಾರಕ್ಕೆ ನೊಂದ ಮಹಿಳೆ ಆತ್ಮ*ತ್ಯೆ