ಕನ್ನಡಪ್ರಭ ವಾರ್ತೆ ಸಾಗರ
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಗೋಪ್ರೇಮಿಗಳ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ವೇದಿಕೆಯ ಗುಡ್ಡೆಮನೆ ನಾಗರಾಜ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ಹೊಂದಿರುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡುವುದು ನಮ್ಮೆಲ್ಲರ ಒತ್ತಾಯವಾಗಿದೆ. ದೇಶದ ಬಹುಸಂಖ್ಯಾತರು ಗೋವನ್ನು ಗೋಮಾತೆ ಎಂದು ಕರೆಯುತ್ತಾರೆ. ನಾವು ಗೋರಕ್ಷಕರು ಎಂದು ಭಾಷಣ ಮಾಡಿ, ಗಲ್ಲಿಗಲ್ಲಿಯಲ್ಲಿ ಘೋಷಣೆ ಕೂಗಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿಯವರು ೧೨ ವರ್ಷವಾದರೂ ಈತನಕ ಗೋ ಸಂರಕ್ಷಣೆಗೆ ಬಗ್ಗೆ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಗೋಮಾಂಸ ರಫ್ತು ಮಾಡುತ್ತಿದೆ. ವಿಶ್ವಕ್ಕೆ ಅತಿಹೆಚ್ಚು ಗೋಮಾಂಸ ರಫ್ತು ಮಾಡುತ್ತಿರುವ ದೇಶ ಎನ್ನುವ ಕಳಂಕಕ್ಕೂ ಭಾರತ ಪಾತ್ರವಾಗಿದೆ. ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳದ್ದು ಗೋಸಂರಕ್ಷಣೆ ಎನ್ನುವುದು ಡೋಂಗಿ ನಾಟಕವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡಬೇಕು. ಗೋಮಾಂಸ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇದಿಸಬೇಕು. ಈಗಾಗಲೆ ದೇಶಾದ್ಯಂತ ಅಲ್ಪಸಂಖ್ಯಾತ ಬಾಂಧವರು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡಲು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ವೇದಿಕೆ ಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು.ವೇದಿಕೆಯ ಅಸ್ಪಾಕ್ ಮಾತನಾಡಿ, ನಮ್ಮ ಸಮುದಾಯವು ಗೋಪ್ರೇಮಿಗಳ ವೇದಿಕೆ ಸ್ಥಾಪಿಸಿಕೊಂಡು ತನ್ಮೂಲಕ ಗೋಸಂರಕ್ಷಣೆಗೆ ಒತ್ತು ನೀಡಿದೆ. ಗೋವಿನ ಹೆಸರಿನಲ್ಲಿ ಒಂದು ಜಾತಿಯ ಮೇಲೆ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಪರಸ್ಪರ ದ್ವೇಷಾಸೂಯೆ ಬೆಳೆಸಲಾಗುತ್ತಿದೆ. ಕೇಂದ್ರ ತನ್ನ ಢೋಂಗಿ ನೀತಿ ಬಿಟ್ಟು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.
ರಕ್ಷಣಾ ವೇದಿಕೆ ಉತ್ತರ ಕನ್ನಡ ವಿಭಾಗದ ಅಧ್ಯಕ್ಷ ಕಾರ್ತಿಕ್, ಭಾಷಾ, ಇನಾಯತುಲ್ಲಾ, ರಿಯಾಜ್, ಮಉನ್ನ, ಹನೀಫ್, ಇಮ್ತಿಯಾಜ್, ದಾನೀಸ್, ಅಬ್ದುಲ್ ಸಲೀಂ ಇನ್ನಿತರರು ಹಾಜರಿದ್ದರು.