ಕನ್ನಡಪ್ರಭ ವಾರ್ತೆ ಬೀದರ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೈಮಾನಿಕ ಸಮೀಕ್ಷೆ ಬದಿಗಿಟ್ಟು, ಕೃಷಿ, ಕಂದಾಯ ಹಾಗೂ ಉಸ್ತುವಾರಿ ಸಚಿವರೊಂದಿಗೆ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಲಿ. ನೆರೆಪೀಡಿತ ರೈತರ ಸಾಲಮನ್ನಾ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೆಂದ್ರ ಆಗ್ರಹಿಸಿದ್ದಾರೆ.ಸೋಮವಾರ ಅವರು ಬೀದರ್ ಜಿಲ್ಲೆಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಆಲಿಸಿದರು. ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ (ಪಿ) ಗ್ರಾಮದ ರೈತರಾದ ಪಾರ್ವತಿ ಮಾಣಿಕಪ್ಪ ಅವರ ಜಮೀನಿನಲ್ಲಿ ಸೋಯಾ ಬೆಳೆ ಹಾನಿಯನ್ನು ಪರಿಶೀಲಿಸಿದರು. ಬಳಿಕ, ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಕಲಪ್ಪ ಚಂದನಕೇರಿ ಎಂಬುವರ ಹೊಲಕ್ಕೆ ಭೇಟಿ ನೀಡಿ ಸೋಯಾ, ತೊಗರಿ ಬೆಳೆ ವೀಕ್ಷಿಸಿದರು.
ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿಯವರು ಮಂಗಳವಾರ ಕಲಬುರಗಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ವೈಮಾನಿಕ ಸಮೀಕ್ಷೆ ಮಾಡಿದರೆ ರೈತರ ಸಮಸ್ಯೆ ಅರಿಯಲು ಸಾಧ್ಯವಿಲ್ಲ. ರೈತರ ಬಳಿಗೆ ತೆರಳಿ, ಬೆಳೆ ಹಾನಿ ಸಮೀಕ್ಷೆ ಮಾಡಿ, ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ. ಆದರೆ, ಕಂದಾಯ, ಕೃಷಿ, ತೋಟಗಾರಿಕಾ ಸಚಿವರು ಏನು ಮಾಡುತ್ತಿದ್ದಾರೆ?. ಜಿಲ್ಲಾ ಕೇಂದ್ರದ ಎ.ಸಿ. ಕೋಣೆಯಲ್ಲಿ ಕುಳಿತು ರೈತರ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಾರಾ ಎಂದು ಅವರು ಪ್ರಶ್ನಿಸಿದರು. ರೈತರು ಸಂಕಷ್ಟದಲ್ಲಿದ್ದಾಗ ಅವರ ಮನೆ ಬಾಗಿಲಿಗೆ ಹೋಗಬೇಕು. ಹೊಲಗಳಿಗೆ ತೆರಳಿ ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುವುದು ಜಿಲ್ಲಾ ಉಸ್ತವಾರಿ ಸಚಿವರು, ಕಂದಾಯ ಹಾಗೂ ಕೃಷಿ ಸಚಿವರ ಕರ್ತವ್ಯವಾಗಿದೆ ಎಂದರು.---
(ಬಾಕ್ಸ್):ಮಾಂಜರಾ ಹಿನ್ನೀರಿಗೆ ಇಳಿದ ವಿಜಯೇಂದ್ರ: ಬೀದರ್ ತಾಲೂಕಿನ ಇಸ್ಲಾಂಪುರ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದ ವಿಜಯೇಂದ್ರ, ಮಾಂಜ್ರಾ ಹಿನ್ನೀರಿಗಿಳಿದು ಹಾನಿ ಪ್ರದೇಶ ವೀಕ್ಷಿಸಿದರು. ಇಸ್ಲಾಂಪುರ ಗ್ರಾಮದಲ್ಲಿ ಪ್ರವಾಹದಿಂದ ನೂರಾರು ಎಕರೆ ಭೂಮಿ ಜಲಾವೃತಗೊಂಡಿದ್ದು, ಇಸ್ಲಾಂಪುರ ಗ್ರಾಮದಲ್ಲಿ ಟ್ರಾಕ್ಟರ್ ಹತ್ತಿ ಮಾಂಜ್ರಾ ಹಿನ್ನೀರಿನಿಂದ ಜಾಲವೃತಗೊಂಡ ಕೃಷಿ ಭೂಮಿ ವೀಕ್ಷಣೆ ನಡೆಸಿದರು.++++
++++ಬೆಳೆ ವಿಮೆ ಮಾಡಿಸಿದ ರೈತರಿಗೆ ಸಮಯಕ್ಕೆ ಪರಿಹಾರ ಕಲ್ಪಿಸುವ ಕೆಲಸ ವಿಮಾ ಕಂಪನಿಯದಾಗಿದೆ, ಅವರ ಉಪಕಾರ ಬೇಡ. ಅವರ ಕರ್ತವ್ಯ ನಿಭಾಯಿಸಬೇಕು. ಇದನ್ನು ರಾಜ್ಯ ಸರ್ಕಾರ ಗಮನಿಸಬೇಕು. ಮಾನವೀಯತೆ ದೃಷ್ಟಿಯಿಂದ ರಾಜ್ಯ ಸರ್ಕಾರ ರೈತರನ್ನು ಕಣ್ಣು ತೆರೆದು ನೋಡಬೇಕಾಗಿದೆ. ರೈತರ ಮೇಲೆ ಇರುವ ಸಾಲ ಸಹಿತ ಮನ್ನಾ ಮಾಡಬೇಕು ಎಂದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಶೇ.60ರಷ್ಟು ಮಳೆಯಾಗಿದೆ. ರೈತರು ಹೊಲದಲ್ಲಿ ಬೆಳೆದ ಬೆಳೆಗಳು ಶೇ.90ರಷ್ಟು ಅತಿವೃಷ್ಠಿಯಿಂದ ಹಾನಿಯಾಗಿದೆ. ಸಾಲ ಸೂಲ ಪಡೆದು ಬಿತ್ತಿರುವ ಸೋಯಾ ಹೊಲಗಳಿಗೆ ರೈತರ ಅಪೇಕ್ಷೆಯಂತೆ ಕನಿಷ್ಠ ಎಕರೆಗೆ 40 ರಿಂದ 50 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಮಾದರಿಯಲ್ಲಿ ರೈತರಿಗೆ ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಕೇಂದ್ರ ಸರ್ಕಾರದ ಹಣ ಬಂದೇ ಬರುತ್ತೆ. ಆದರೆ, ಸಂಕಷ್ಟದಲ್ಲಿರುವ ರೈತರಿಗೆ ಅಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಕೂಡ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದರು.ಪ್ರತಿಬಾರಿ ಮಳೆ ಬಂದಾಗ, ಪ್ರವಾಹ ಬಂದಾಗ ನದಿ ದಡದಲ್ಲಿರುವವರಿಗೆ ತೊಂದರೆಯಾಗುತ್ತಿದೆ. ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಸಂಕಷ್ಟದಲ್ಲಿರುವ ರೈತರ ಜೊತೆಗಿರಬೇಕೆಂದು ಅವರ ಸಮಸ್ಯೆಗೆ ಸ್ಪಂದನೆ ಮಾಡಬೇಕೆಂದು ಬಂದಿದ್ದೇನೆ. ನಾವು ಇಂದು ರಾಜಕೀಯ ಮಾಡಲು ಹಾಗೂ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಬಂದಿಲ್ಲ, ರಾಜ್ಯ ಸರ್ಕಾರಕ್ಕೂ ಕೂಡ ಎಚ್ಚರಿಸುವ ಕೆಲಸ ಆಗಬೇಕಾಗಿದೆ. ಮುಂದಿನ ಎರಡು ದಿನ ನಮ್ಮ ನಾಯಕರು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ ಎಂದರು.ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಪ್ರಭು ಚವ್ಹಾಣ್, ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ ಸಾಥ್ ನೀಡಿದರು.