ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ದಿನದಿಂದ ದಿನಕ್ಕೆ ವೇಗ ಪಡೆದಿದ್ದು ಸೋಮವಾರ ಕೂಡ 12.71 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದ್ದು, ಈವರೆಗೆ 40 ಲಕ್ಷಕ್ಕಿಂತ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.ಸಮೀಕ್ಷೆಗೆ ಗುರುತಿಸಿರುವ 1,43,77,978 ಮನೆಗಳ ಪೈಕಿ ಈವರೆಗೆ 40,07,354 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇಕಡಾವಾರು 27.87 ಆಗಿದೆ. ಸಮೀಕ್ಷೆ ಪೂರ್ಣಗೊಳಿಸಲು ಅ. 7 ಕೊನೆಯ ದಿನವಾಗಿರುವುದರಿಂದ ಉಳಿದ ಎಂಟು ದಿನಗಳಲ್ಲಿ ಇನ್ನೂ 1.03 ಕೋಟಿಗೂ ಹೆಚ್ಚು ಮನೆಗಳ (ಶೇ.77.13) ಸಮೀಕ್ಷೆ ನಡೆಯಬೇಕಿದೆ.
ಸಮೀಕ್ಷೆ ಆರಂಭವಾದ ಮೊದಲ ನಾಲ್ಕೈದು ದಿನ ಸರ್ವರ್, ನೆಟ್‌ವರ್ಕ್, ಆ್ಯಪ್ ಸಮಸ್ಯೆ, ಗಣತಿದಾರರು ಪೂರ್ಣ ಪ್ರಮಾಣದಲ್ಲಿ ಹಾಜರಾಗದಿರುವ ಕಾರಣಗಳಿಂದ ಮಂದಗತಿಯಲ್ಲಿ ಸಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಸಮೀಕ್ಷೆಗೆ ಬಾಕಿ ಇರುವ ಮನೆಗಳ ಪೈಕಿ ಪ್ರತಿದಿನ ಶೇ.10ರಷ್ಟು (ಶೇ.11.85 ಲಕ್ಷ ಮನೆ) ಪ್ರಗತಿ ಸಾಧಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.ಶನಿವಾರ 8 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸಲಾಗಿತ್ತಾದರೂ ಮುಖ್ಯಮಂತ್ರಿ ಅವರು ನಿಗದಿಪಡಿಸಿದ್ದ ಶೇ.10ರ ಮನೆಗಳ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಆದರೆ, ಭಾನುವಾರ ಮತ್ತು ಸೋಮವಾರ ಗುರಿ ಮೀರಿ ಎರಡೂ ದಿನ ತಲಾ 12 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸಲಾಗಿದೆ.
3 ಜಿಲ್ಲೆಗಳಲ್ಲಿ ಶೇ.40 ದಾಟಿದ ಸಮೀಕ್ಷೆ:ಹಾವೇರಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಮೀಕ್ಷಾ ಕಾರ್ಯ ಶೇ.40 ದಾಟಿದೆ. ಹಾವೇರಿಯಲ್ಲಿ ಶೇ.44.93ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದರೆ, ಕೊಪ್ಪಳ ಶೇ.44.22, ಗದಗ ಜಿಲ್ಲೆ ಶೇ.40.30 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಉಡುಪಿ ಮತ್ತು ಮೈಸೂರು ಸಮೀಕ್ಷೆಯಲ್ಲಿ ತೀವ್ರ ಹಿಂದೆ ಬಿದ್ದಿವೆ. ಈ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.15 ಮತ್ತು 17 ಮನೆಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಉಳಿದಂತೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಸಮೀಕ್ಷಾ ಕಾರ್ಯ ಶೇ.35ಕ್ಕೂ ಹೆಚ್ಚು ಆಗಿದ್ದರೆ, ಉಳಿದ ಜಿಲ್ಲೆಗಳ ಪೈಕಿ ಕನಿಷ್ಠ ಶೇ.25ರಿಂದ ಗರಿಷ್ಠ ಶೇ.30ಕ್ಕೂ ಹೆಚ್ಚು ನಡೆದಿರುವುದಾಗಿ ಹಿಂದುಳಿದ ವರ್ಗಗಳ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.