ರಾಜ್ಯದ 8.60 ಲಕ್ಷ ಹೆಕ್ಟೇರ್‌ ಬೆಳೆಅತಿವೃಷ್ಟಿಗೆ ಹಾನಿ: ಬೈರೇಗೌಡ

KannadaprabhaNewsNetwork |  
Published : Sep 30, 2025, 12:00 AM IST
ಕೃಷ್ಣ ಬೈರೇಗೌಡ  | Kannada Prabha

ಸಾರಾಂಶ

ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ ಈವರೆಗೆ 8.60 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯ ಅಂದಾಜು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಬಳಿಕ ಸೂಕ್ತ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ ಈವರೆಗೆ 8.60 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯ ಅಂದಾಜು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಬಳಿಕ ಸೂಕ್ತ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ 8.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯ ಅಂದಾಜು ಮಾಡಲಾಗಿದೆ, ಇನ್ನೂ ಮಳೆ ಮುಂದುವರೆದಿರುವುದರಿಂದ ಭೂಮಿ ಒಣಗಿದ ಬಳಿಕ ಆಯಾ ಜಿಲ್ಲಾಧಿಕಾರಿಗಳು ಜಂಟಿ ಸಮೀಕ್ಷೆ ಮುಂದುವರೆಸಲಿದ್ದಾರೆ. ಇದರಿಂದ ಬೆಳೆ ಹಾನಿ ಪ್ರದೇಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.4ಕ್ಕಿಂತ ಹೆಚ್ಚು ಮಳೆ, ಕೆಲವೆಡೆ ಕಡಿಮೆ ಮಳೆಯಾಗಿದೆ. ವಿಜಯಪುರ, ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು ಸೇರಿ ಕೆಲ ಜಿಲ್ಲೆಗಳಲ್ಲಿ ಆಗಸ್ಟ್‌ನಿಂದ ಸೆಪ್ಟಂಬರ್‌ ವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜತೆಗೆ ಕೃಷ್ಣಾ, ಭೀಮಾ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಅಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಆದರೆ, ಪ್ರಾಣ ಹಾನಿ ಪ್ರಕರಣಗಳು ವರದಿಯಾಗಿಲ್ಲ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಕಡಿಮೆ ಮಳೆ ಆಗಿದೆ. ದಕ್ಷಿಣ ಒಳನಾಡಿನಲ್ಲೂ ಈ ಬಾರಿ ಕಡಿಮೆ ಮಳೆ ಬಿದ್ದಿದೆ ಎಂದು ತಿಳಿಸಿದರು.

ತಾತ್ಕಾಲಿಕ ಪರಿಹಾರ ವ್ಯವಸ್ಥೆ:

ಮಳೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹1385 ಕೋಟಿ ಇದೆ. ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಸದ್ಯಕ್ಕೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಅವರು ಮಂಜೂರಾತಿ ನೀಡಿದ್ದಾರೆ. ಸುಮಾರು 75 ಕಡೆ ಜನರಿಗೆ ನೆರವು ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 8,919 ಮಂದಿ ಸಂತ್ರಸ್ತರಿದ್ದು ಅವರಿಗೆ ವಸತಿ, ಊಟ, ಮಲಗಲು ಬೇಕಾದ ವಸ್ತುಗಳ ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದರು.

+++

-ಬಾಕ್ಸ್‌-

ನಿದ್ರೆಯಿಂದ ಈಗ ಎದ್ದಿರುವ ಪ್ರತಿಪಕ್ಷ

ಪ್ರತಿಪಕ್ಷ ಬಿಜೆಪಿ ನಾಯಕರು ಇಲ್ಲಿಯವರೆಗೂ ಸುಮ್ಮನಿದ್ದು ಈಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಹೊರಟಿರುವುದು ನೋಡಿದರೆ ಈಗಷ್ಟೇ ಅವರು ನಿದ್ರೆಯಿಂದ ಎದ್ದಂತೆ ಕಾಣುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದ್ದಾರೆ.

ಪ್ರತಿಪಕ್ಷ ಬಿಜೆಪಿ ನಾಯಕರೂ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು, ನಮ್ಮ ಅಧಿಕಾರಿಗಳು ಈಗಾಗಲೇ ಒಂದು ತಿಂಗಳಿಂದ ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶಗಳ ಜನರ ರಕ್ಷಣೆ, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿಪಕ್ಷದವರು ಈಗ ನಿದ್ರೆಯಿಂದ ಎದ್ದಂತೆ ಕಾಣುತ್ತಿದೆ. ಅವರು ಪ್ರತಿಪಕ್ಷದಲ್ಲಿರುವುದರಿಂದ ಪರಿಶೀಲನೆ ಮಾಡಲಿ. ನಮ್ಮ ಅಭ್ಯಂತರ ಇಲ್ಲ. ಜನರಿಗೆ ಒಳ್ಳೆಯದು ಆಗಲಿ ಎಂದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ