ಮುಡಾ ಹಗರಣದಿಂದ ಮುಕ್ತವಾಗಲು ಸಿಎಂ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಮುನಿಸ್ವಾಮಿ

KannadaprabhaNewsNetwork |  
Published : Aug 22, 2024, 01:02 AM ISTUpdated : Aug 22, 2024, 01:12 PM IST
ಸ | Kannada Prabha

ಸಾರಾಂಶ

ಮುಡಾ ಹಗರಣದ ಆರೋಪದಿಂದ ಮುಕ್ತವಾಗಲು ಸಿಎಂ ಸಿದ್ಧರಾಮಯ್ಯ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಸಂಸದ ಮುನಿಸ್ವಾಮಿ ಆಗ್ರಹಿಸಿದರು.

ಬಳ್ಳಾರಿ: ಮುಡಾ ಹಗರಣದ ಆರೋಪದಿಂದ ಮುಕ್ತವಾಗಲು ಸಿಎಂ ಸಿದ್ಧರಾಮಯ್ಯ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಸಂಸದ ಮುನಿಸ್ವಾಮಿ ಆಗ್ರಹಿಸಿದರು.

ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ಎನ್ನುತ್ತಿರುವ ಸಿಎಂ ತನಿಖೆಗೆ ಹಿಂದೇಟು ಹಾಕುತ್ತಿರುವುದೇಕೆ? ಸಿಎಂ ಸ್ಥಾನಕ್ಕೆ ಅಂಟಿಕೊಳ್ಳುವ ಬದಲು ರಾಜೀನಾಮೆ ನೀಡಿ ತನಿಖೆಯನ್ನು ಸಮರ್ಥವಾಗಿ ಎದುರಿಸಬಹುದಲ್ಲವೇ ಎಂದರು.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಪ್ಪಾಗಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ನಿಗಮದಲ್ಲಾಗಿರುವ ಭಾರೀ ಪ್ರಮಾಣದ ಭ್ರಷ್ಟಾಚಾರ ಹಾಗೂ ಹಣ ಲೂಟಿಯ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಮುಡಾ ಪ್ರಕರಣದಲ್ಲಿ ಸಿಎಂ ಮೇಲಿರುವ ಆರೋಪ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಿರುವಾಗ ರಾಜೀನಾಮೆ ನೀಡಲು ಹಿಂಜರಿದು ಅಧಿಕಾರಕ್ಕೆ ಅಂಟಿಕೊಳ್ಳುವುದು ಎಷ್ಟು ಸರಿ ಎಂದು ಕೇಳಿದರು.

ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಕಾಂಗ್ರೆಸ್ಸಿಗರು ಪ್ರತಿಭಟನೆ ವೇಳೆ ತೀವ್ರ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುವವರನ್ನು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಡೆಯ ಬಗ್ಗೆ ಬರೆದವರನ್ನೂ ಬಂಧಿಸುವ ಕೆಲಸವಾಗುತ್ತಿದೆ. ಬಿಜೆಪಿ ಹಗರಣವನ್ನು ಹೊರ ತೆಗೆಯುತ್ತೇವೆ ಎಂದು ಪಾದಯಾತ್ರೆ ವೇಳೆ ಬೆದರಿಕೆವೊಡ್ಡಲಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಬಂಧಿಸುವ ಹುನ್ನಾರ ನಡೆದಿದೆ ಎಂದು ದೂರಿದರು.

ಸಿದ್ಧರಾಮಯ್ಯ ವಿರುದ್ಧ ದೂರು ನೀಡಿರುವುದು ಬಿಜೆಪಿಗರಲ್ಲ. ಸಾಮಾನ್ಯ ವ್ಯಕ್ತಿ ನೀಡಿದ ದೂರಿನ ಮೇಲೆ ಕಾನೂನು ಕ್ರಮಗಳಾಗುತ್ತಿವೆ. ಕಾನೂನಿನಿಗಂತ ದೊಡ್ಡವರಿಲ್ಲ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸಹ ಅರಿಯಬೇಕು. ಈ ಹಿಂದೆ ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಯಡಿಯೂರಪ್ಪ ಅವರ ಮೇಲೆ ಆರೋಪಗಳು ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದರು. ಈಗ ಸಿದ್ದರಾಮಯ್ಯ ಸಹ ತನಿಖೆ ಎದುರಿಸಲಿ. ಅವರದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾದರೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿ, ನಮ್ಮದೇನೂ ತಕರಾರಿಲ್ಲ ಎಂದರು.

ಇದೇ ವೇಳೆ ಶಾಸಕ ಐವನ್ ಡಿಸೋಜಾ ಅವರ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮುನಿಸ್ವಾಮಿ, ಐವನ್ ಡಿಸೋಜಾ ಪಾಕಿಸ್ತಾನದಲ್ಲಿದ್ದಾರೋ ಅಥವಾ ಅಮೆರಿಕದಲ್ಲಿದ್ದಾರೋ ಎಂದು ಕೇಳಿದರಲ್ಲದೆ, ಐವನ್ ಡಿಸೋಜಾ ಮಾತನಾಡುವಾಗ ಎಚ್ಚರದಿಂದ ಇರಬೇಕು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬುದು ಅವರಿಗೆ ಗೊತ್ತಿರಬೇಕು ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಡಾ.ಬಿ.ಕೆ.ಸುಂದರ್, ಡಾ.ಮಹಿಪಾಲ್, ಎಚ್‌.ಹನುಮಂತಪ್ಪ, ಗಣಪಾಲ ಐನಾಥ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು