ಸಿಎಂ ಸಿದ್ದರಾಮಯ್ಯರನ್ನು ಮುಟ್ಟಲಾಗುವುದಿಲ್ಲ: ಚಲುವರಾಯಸ್ವಾಮಿ

KannadaprabhaNewsNetwork | Published : Aug 20, 2024 12:48 AM

ಸಾರಾಂಶ

ಬಿಜೆಪಿ ಹಾಗೂ ಜೆಡಿಎಸ್ ಹಗರಣಗಳನ್ನೂ ನಾವು ಬಿಡುವುದಿಲ್ಲ. ಆರು ತಿಂಗಳ ಒಳಗೆ ತನಿಖೆ ಮಾಡಿಸುತ್ತೇವೆ. ಜಂತಕಲ್ ಮೈನಿಂಗ್ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡಲು ಪ್ರಾಸಿಕ್ಯೂಷನ್ ಅನುಮತಿ ಕೇಳಿ ೯ ತಿಂಗಳು ಆಗಿದೆ. ಆದರೆ ರಾಜ್ಯಪಾಲರ ಬಾಯಿ ಮುಚ್ಚಿಸಿದ್ದಾರೆ. ಜೊಲ್ಲೆ, ರೆಡ್ಡಿ, ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಮೋದಿ, ಅಮಿತ್ ಶಾ ಅವರಿಗೆ ನಾಚಿಕೆ ಆಗೋಲ್ವೆ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

೨೦೨೩ರ ಚುನಾವಣೆ ಬಿಜೆಪಿ ಹಾಗೂ ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್‌ಗೆ ಹೆಚ್ಚು ಬಹುಮತ ಬಂದಿದೆ. ಇದು ಬಿಜೆಪಿ ಅವರಿಗೆ ನಿದ್ರೆಗೆಡಿಸಿದೆ. ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಮುಟ್ಟಲೂ ಆಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸಿಎಂ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿರೋಧಿಸಿ ಮಂಡ್ಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ೯ ಸ್ಥಾನ ಕಾಂಗ್ರೆಸ್‌ಗೆ ಬಂದಿವೆ. ಹಾಗಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ನಿದ್ರೆಗೆಡಿಸಬೇಕು ಎನ್ನುವುದು ಬಿಜೆಪಿ- ಜೆಡಿಎಸ್ ಉದ್ದೇಶವಾಗಿದೆ ಎಂದು ಹೇಳಿದರು.

ಬಿಜೆಪಿ ಹಾಗೂ ಜೆಡಿಎಸ್ ಹಗರಣಗಳನ್ನೂ ನಾವು ಬಿಡುವುದಿಲ್ಲ. ಆರು ತಿಂಗಳ ಒಳಗೆ ತನಿಖೆ ಮಾಡಿಸುತ್ತೇವೆ. ಜಂತಕಲ್ ಮೈನಿಂಗ್ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡಲು ಪ್ರಾಸಿಕ್ಯೂಷನ್ ಅನುಮತಿ ಕೇಳಿ ೯ ತಿಂಗಳು ಆಗಿದೆ. ಆದರೆ ರಾಜ್ಯಪಾಲರ ಬಾಯಿ ಮುಚ್ಚಿಸಿದ್ದಾರೆ. ಜೊಲ್ಲೆ, ರೆಡ್ಡಿ, ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಮೋದಿ, ಅಮಿತ್ ಶಾ ಅವರಿಗೆ ನಾಚಿಕೆ ಆಗೋಲ್ವೆ ಎಂದು ಪ್ರಶ್ನಿಸಿದರು.

ಇದು ನಿಮಗೆ ಕೊನೆಗಾಲ. ಕೇಂದ್ರ ಬಿಜೆಪಿ ವಿರುದ್ಧ ಮಾತನಾಡುವ ಧಮ್ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರ. ಸಿದ್ದರಾಮಯ್ಯ ಅವರ ಜೊತೆ ಶಾಸಕರು, ಮಂತ್ರಿಗಳು ಗಟ್ಟಿಯಾಗಿ ನಿಂತಿದ್ದೇವೆ. ಕಾನೂನಾತ್ಮಕವಾಗಿ ಗೆಲುವು ಸಿಗಲಿದೆ. ರಾಜ್ಯಪಾಲರು ತಮ್ಮ ಹುದ್ದೆಗೆ ಗೌರವ ಕೊಟ್ಟು ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ರೆಡ್ಡಿ ವಿರುದ್ಧ ಬಾಕಿ ಇರುವ ಪ್ರಕರಣಗಳಿಗೆ ಪ್ರಾಸಿಕ್ಯೂಷನ್ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

-----------

ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕೈ ಪಡೆ

ಕನ್ನಡಪ್ರಭ ವಾರ್ತೆ ಮಂಡ್ಯಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ಉರುಳಿಸಲು ಷಡ್ಯಂತ್ರ ನಡೆಸಿರುವ ಬಿಜೆಪಿ- ಜೆಡಿಎಸ್ ವಿರುದ್ಧವೂ ಆಕ್ರೋಶ ಹೊರಹಾಕಿದರು.ಮೈಸೂರು ಮುಡಾಗೆ ನಿವೇಶನ ಕೋರಿ ಸಿದ್ದರಾಮಯ್ಯನವರು ಅರ್ಜಿಯನ್ನೂ ಹಾಕಿಲ್ಲ, ೫೦:೫೦ ಅನುಪಾತದಲ್ಲಿ ಒಂದೇ ಒಂದು ನಿವೇಶನವನ್ನೂ ಪಡೆದಿಲ್ಲ, ಕಾನೂನುಬಾಹೀರ ಆದೇಶವನ್ನೂ ಹೊರಡಿಸಿಲ್ಲ. ಅಂದ ಮೇಲೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರ ಪ್ರಭಾವ ಬೀರಿ ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದೆ. ಸಿದ್ದರಾಮಯ್ಯ ಪ್ರಬಲ ಹಿಂದುಳಿದ ವರ್ಗದ ನಾಯಕರಾಗಿದ್ದು, ಅವರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲಾಗದೆ ವಿರೋಧಫಕ್ಷಗಳಾದ ಬಿಜೆಪಿ- ಜೆಡಿಎಸ್ ಷಡ್ಯಂತ್ರ ರೂಪಿಸಿವೆ. ಮೈಸೂರು ಮುಡಾದಲ್ಲಿ ೫೦:೫೦ ಅನುಪಾತದಡಿ ಪಾರದರ್ಶಕವಾಗಿ ನಿವೇಶನಗಳನ್ನು ಹಂಚಿದ್ದೀರಾ. ಕಾನೂನು ಬಾಹೀರವಾಗಿ ನಡೆದಿರುವುದನ್ನು ನಾವು ಸಾಬೀತುಪಡಿಸಿದರೆ ತನಿಖೆಗೆ ಸಿದ್ಧರಿರುವಿರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ರಾಜ್ಯದಲ್ಲಿ ಆಪರೇಷನ್ ನಡೆಸಿಯಾಗಲೀ ಅಥವಾ ಇನ್ನೊಂದು ಪಕ್ಷದ ಬೆಂಬಲ ಪಡೆದುಕೊಂಡು ಅಧಿಕಾರಕ್ಕೆ ಬಂದಿಲ್ಲ. ಸ್ವತಂತ್ರವಾಗಿ ಅಧಿಕಾರವನ್ನು ಹಿಡಿದಿದೆ. ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಅಧಿಕಾರ ನಡೆಸಲು ಅವಕಾಶ ನೀಡಿದೆ. ಆದರೂ ಕುಮಾರಸ್ವಾಮಿಗೆ ಆ ಬಗ್ಗೆ ಕೃತಜ್ಞತೆಯೇ ಇಲ್ಲ ಎಂದು ದೂರಿದರು.ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕುಸಿದು ಬಿದ್ದ ಮಹಿಳೆ: ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲೇ ಮಹಿಳೆಯೊಬ್ಬರು ಕುಸಿದುಬಿದ್ದ ಘಟನೆ ನಡೆಯಿತು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಎದುರಿನಲ್ಲೇ ಮಹಿಳೆ ಕುಸಿದುಬಿದ್ದ ವೇಳೆ ತಕ್ಷಣವೇ ಮಹಿಳೆಗೆ ಕಾರ್ಯಕರ್ತರು ನೀರು ಕುಡಿಸಿದರು. ಬಳಿಕ ಸಮಾಧಾನವಾಗಿ ಚೇತರಿಸಿಕೊಂಡು ಮತ್ತೆ ಮೇಲೆದ್ದು ಕುಳಿತುಕೊಂಡರು.ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಟಿ ಭಾವನಾ ಭಾಗಿ:ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಟಿ ಭಾವನಾ ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳದಲ್ಲಿ ಭಾವನಾ ನೆಲದ ಮೇಲೆಯೇ ಕುಳಿತು ವಿರೋಧ ವ್ಯಕ್ತಪಡಿಸಿದರು. ಅವರೊಂದಿಗೆ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಕುಳಿತು ಸಾಥ್ ನೀಡಿದರು. ಪ್ರತಿಭಟನೆಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಸೋಮಶೇಖರ್, ಮುಖಂಡರಾದ ವಿಜಯ್‌ರಾಮೇಗೌಡ, ರವಿಭೋಜೇಗೌಡ, ರೇವಣ್ಣ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ, ಮುಡಾ ಅಧ್ಯಕ್ಷ ನಯೀಂ, ನಿರ್ದೇಶಕರಾದ ಮರ್ದಿನಿ ಕೃಷ್ಣ, ದೊಡ್ಡಯ್ಯ, ಮಹಿಳಾ ಮುಖಂಡರಾದ ಪಲ್ಲವಿ, ಶುಭದಾಯಿನಿ, ಜ್ಯೋತಿ, ವಿಜಯಲಕ್ಷ್ಮೀ ರಘುನಂದನ್ ಇತರರಿದ್ದರು.

Share this article