ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ₹3.44 ಕೋಟಿ ಸಂಗ್ರಹ

KannadaprabhaNewsNetwork |  
Published : Aug 20, 2024, 12:48 AM ISTUpdated : Aug 20, 2024, 09:47 AM IST
Lalbagh 2 | Kannada Prabha

ಸಾರಾಂಶ

ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯಗೊಂಡಿತು. 12 ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟಾರೆ 9.07 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಟಿಕೆಟ್‌ ಮಾರಾಟದಿಂದ 3.44 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

 ಬೆಂಗಳೂರು :  ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯಗೊಂಡಿತು. 12 ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟಾರೆ 9.07 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಟಿಕೆಟ್‌ ಮಾರಾಟದಿಂದ 3.44 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

ಈ ಬಾರಿ 4.97 ಲಕ್ಷಕ್ಕೂ ಅಧಿಕ ಮಂದಿ ವಯಸ್ಕರು, 4.10 ಲಕ್ಷಕ್ಕೂ ಅಧಿಕ ಮಂದಿ ಮಕ್ಕಳು ಭೇಟಿ ನೀಡಿದ್ದಾರೆ. ಪ್ರವೇಶ ಶುಲ್ಕದ ಮೂಲಕ ಒಟ್ಟಾರೆ 3,04,92,320 ರು. ಸಂಗ್ರಹವಾದರೆ, ಮಾರಾಟ ಮಳಿಗೆಗಳು ಮತ್ತಿತರ ಮೂಲಗಳಿಂದ 40 ಲಕ್ಷ ರು.ಗಳು ಸಂಗ್ರಹವಾಗಿವೆ. ಕೊನೆಯ ದಿನ ಸೋಮವಾರ 65,430 ಮಂದಿ ಆಗಮಿಸಿದ್ದು, 8.21 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.

ಪ್ರಸಕ್ತ 216ನೇ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಒಟ್ಟು 2.75 ಕೋಟಿ ರು.ಖರ್ಚು ಮಾಡಿದ್ದು, ಎಲ್ಲ ಮೂಲಗಳಿಂದ 3.44 ಕೋಟಿ ರು.ಗಳಿಸಿಸುವ ಮೂಲಕ ಫಲಪುಷ್ಪ ಪ್ರದರ್ಶನ ಉತ್ತಮ ಆದಾಯವನ್ನು ಆಯೋಜಕರಿಗೆ ತಂದು ಕೊಟ್ಟಿದೆ.

ಕಳೆದ ವರ್ಷ ಸ್ವಾತಂತ್ರ್ಯೋತ್ಸವದಲ್ಲಿ ಕೆಂಗಲ್‌ ಹನುಮಂತಯ್ಯ ಅವರ ವಿಷಾಯಾಧಾರಿತವಾಗಿ ಆಯೋಜಿಸಿದ್ದ 214ನೇ ಫಲಪುಷ್ಪ ಪ್ರದರ್ಶನದಲ್ಲಿ 11 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ, 3.98 ಕೋಟಿ ರು.ಸಂಗ್ರಹವಾಗಿದ್ದು ಇದುವರೆಗಿನ ದಾಖಲೆಯಾಗಿದೆ. 2024ರ ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆದ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ 5.61 ಲಕ್ಷ ಜನರು ಭೇಟಿ ನೀಡಿದ್ದು 2.59 ಕೋಟಿ ರು.ಶುಲ್ಕ ಸಂಗ್ರಹವಾಗಿತ್ತು.

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವಿಷಯಾಧಾರಿತವಾಗಿ ನಡೆದ ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿದೆ. ಒಂದೇ ವೇದಿಕೆಯಲ್ಲಿ ಅಂಬೇಡ್ಕರ್‌ ಅವರ ಜೀವನ, ಸಾಧನೆ ಎಲ್ಲವನ್ನೂ ಅನಾವರಣಗೊಳಿಸಿ, ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ(ಪಾರ್ಕ್ಸ್‌ ಆ್ಯಂಡ್‌ ಗಾರ್ಡನ್ಸ್‌) ಡಾ.ಎಂ.ಜಗದೀಶ್‌ ಅಭಿನಂದನೆ ಸಲ್ಲಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ