ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂಡುವ ನೈತಿಕತೆ ಇಲ್ಲ: ಸಿ.ಟಿ.ರವಿ - - -
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ಬಗ್ಗೆ ಐಡಿ, ಇಡಿ, ಎಸ್‌ಐಟಿ ತನಿಖೆ ಕೈಗೊಂಡಿವೆ. ಉಪ್ಪು ತಿಂದವನು ನೀರು ಕುಡಿಯಬೇಕೆಂದು ಸಿದ್ದರಾಮಯ್ಯ ಹೇಳುತ್ತಾರೆ. ನಿಗಮದ ಹಗರಣದಲ್ಲಿ ಭಾಗಿಯಾದವರಿಂದ ಹಣ ವಸೂಲು ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದರು.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಅದೇ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಸರ್ಕಾರದಲ್ಲಿ ಇನ್ನೂ ಯಾವ್ಯಾವ ಇಲಾಖೆಗಳಲ್ಲಿ ಹಗರಣ ಆಗಿದೆಯೋ ಗೊತ್ತಿಲ್ಲ. ರಾಜ್ಯದ ಖಜಾನೆಗೆ ಕನ್ನ ಹಾಕುವ ಹೆಗ್ಗಣಗಳೇ ತುಂಬಿವೆ. ಪರಿಸ್ಥಿತಿ ಹೀಗಿರುವ ರಾಜ್ಯದ ಖಜಾನೆಯಾದರೂ ಎಲ್ಲಿ ಉಳಿಯುತ್ತದೆ ಎಂದು ಅವರು ಪ್ರಶ್ನಿಸಿದರು.ತೆರಿಗೆ ಹೆಚ್ಚಿಸಿ, ಈಗ ಖಜಾನೆ ಖಾಲಿಯೆಂದರೆ ಹೆಗ್ಗಣಗಳು ಖಾಲಿ ಮಾಡಿ, ಜನರ ತಲೆ ಮೇಲೆ ಮತ್ತೆ ತೆರಿಗೆ ಭಾಗ ಹೆಚ್ಚಿಸಿ, ಖಜಾನೆ ತುಂಬಲು ಆಗುತ್ತದಾ? ಮೊದಲು ಹೆಗ್ಗಣಗಳನ್ನು ನಿಯಂತ್ರಣ ಮಾಡಬೇಕು. ನಿಯಂತ್ರಣ ಮಾಡದಿದ್ದರೆ ರಾಜ್ಯದ ಖಜಾನೆಯೇ ಇರುವುದಿಲ್ಲ. ಮೂಡಾ ಸೈಟ್ ಹಗರಣವನ್ನೇನಾದರೂ ಬೇರೆಯವರು ಮಾಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರಾ ಎಂದು ಅವರು ಲೇವಡಿ ಮಾಡಿದರು.
ಸಿದ್ದರಾಮಯ್ಯನವರ ಆಪ್ತರ ನಕಲಿ ಖಾತೆಗಳಿಗೆ ವಾಲ್ಮೀಕಿ ನಿಗಮದ ಹಣ ಜಮಾಆಗಿದೆ. ಮೂಡಾದಲ್ಲಿ ಪಿಂಚಣಿ ಹಣ, ಕೂಡಿದ್ದ ಹಣ ಸೇರಿಸಿ, ನಿವೇಶನಕ್ಕೆ ಅರ್ಜಿ ಹಾಕಿದವರಿಗೆ ಇಲ್ಲದ ನಿವೇಶನವು ಸಿದ್ದರಾಮಯ್ಯ ಮನೆಯವರ ಹೆಸರಿಗೆ 16 ಸೈಟ್ ಇವೆ. ಎಲ್ಲಾ ಪಾಲಿಕೆಯಲ್ಲೂ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೇ ಅಭಿವೃದ್ಧಿಗೆ ಹಣ ಇಲ್ಲ. ಎಲ್ಲವನ್ನೂ ಗ್ಯಾರಂಟಿ ಯೋಜನೆಗಳಿಗೆ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಬಾರದು. ಜನರಿಗೆ ತೆರಿಗೆ ಹೆಚ್ಚಿಸಬಾರದು. ಅಭಿವೃದ್ಧಿ ಕಾರ್ಯವನ್ನೂ ಮಾಡಬೇಕು ಎಂದು ಅವರು ತಾಕೀತು ಮಾಡಿದರು.
----
ಎಲ್ರೂ ಭ್ರಷ್ಟರು ಅಂತೆಲ್ಲಾ ಹೇಳುತ್ತಿದ್ದ ಸಿದ್ದರಾಮಯ್ಯನವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೂಡಾ ಸೈಟ್ ಹಗರಣದಲ್ಲಿ ಆಪಾದಿತರಾದ ಸಿದ್ದರಾಮಯ್ಯ ಮುಡಾ ಹಗರಣ ಸಮರ್ಥಿಸಿಕೊಂಡರೆ ಸಾರ್ವಜನಿಕವಾಗಿ ತಮ್ಮದೇ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆಂಬುದನ್ನೂ ಮರೆಯಬಾರದು.
---