ಲಕ್ಷ್ಮೇಶ್ವರ: ರಾಜ್ಯ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ, ಮುಡಾ ಹಗರಣದ ಭಯವಿದೆ. ಸಿದ್ದರಾಮಯ್ಯ ತಪ್ಪು ಮಾಡದಿದ್ದರೆ ಭಯಪಡುವ ಅಗತ್ಯವಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ರಾಜ್ಯದಲ್ಲಿ ನಡೆದಿರುವ ಮುಡಾ ಹಗರಣಗಳ ಕುರಿತು ತನಿಖೆ ನಡೆಸಲು ಅನುಮತಿ ನೀಡಬಾರದು ಎಂದು ಹೇಳಲು ಇವರು ಯಾರು? ಬಿ.ಎಸ್. ಯಡಿಯೂರಪ್ಪ ವಿರುದ್ಧ ಹಂಸರಾಜ್ ಭಾರದ್ವಾಜ್ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದಾಗ ಸಿದ್ದರಾಮಯ್ಯ ಯಾವ ರೀತಿ ನಡೆದುಕೊಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಈಗ ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದರಿಂದ ರಾಜ್ಯಪಾಲರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪು ಮುಚ್ಚಿಕೊಳ್ಳುವ ಉದ್ದೇಶದಿಂದ ಬಿಜೆಪಿ ನಾಯಕರ ಮೇಲೂ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಇದಾಗಿದೆ ಎಂದರು.
ಕೇಂದ್ರದಲ್ಲಿ ಎನ್‌ಡಿಎ ಒಕ್ಕೂಟವು ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಭದ್ರವಾಗಿದೆ ಎಂದು ಜೋಶಿ ಹೇಳಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಸಂಸ್ಕೃತಿಯಲ್ಲಿ ಹಿಂದೂಗಳ ಹಾಗೂ ಹಿಂದೂ ದೇವಸ್ಥಾನಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈಗ ಸಿದ್ದರಾಮಯ್ಯ ತಪ್ಪು ಮಾಡಿದ್ದರಿಂದ ರಾಜ್ಯದ ದೇವಾಲಯಗಳನ್ನು ಸುತ್ತುವ ಕಾರ್ಯ ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದರ ಪ್ರಾಯಶ್ಚಿತಕ್ಕಾಗಿ ದೇವಾಲಯಗಳಿಗೆ ಭೇಟಿ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ನಿಮ್ಮ ವಿರುದ್ಧ ಚುನಾವಣಾ ಅಖಾಡಕ್ಕೆ ಇಳಿದಿದ್ದ ಶಿರಹಟ್ಟಿಯ ಫಕ್ಕೀರ ಸ್ವಾಮಿಗಳ ಮಠಕ್ಕೆ ನೀವು ಭೇಟಿ ನೀಡುತ್ತಿರುವುದರ ಹಿಂದಿನ ರಹಸ್ಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಜೋಶಿ ಮಾತನಾಡಿ, ಶಿರಹಟ್ಟಿಯ ಫಕ್ಕೀರ ಸಿದ್ದರಾಮ ಸ್ವಾಮಿಗಳ ಮತ್ತು ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ಕಳೆದ 5 ಚುನಾವಣೆಯಲ್ಲಿ ಅವರು ನನಗೆ ಆಶೀರ್ವಾದ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಸಿದ್ದರಾಮ ಸ್ವಾಮಿಗಳ ಧಾರವಾಡದಲ್ಲಿ ನನ್ನನ್ನು ಭೇಟಿ ಆಗಲು ಪ್ರಯತ್ನಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಭೇಟಿ ಸಾಧ್ಯವಾಗಿರಲಿಲ್ಲ. ಇಂದು ನಾನು ದೇಶದ ಉತ್ತರಾಂಚಲ ಪ್ರದೇಶಕ್ಕೆ ಭೇಟಿ ನೀಡುವ ನಿಗದಿತ ಕಾರ್ಯಕ್ರಮ ಇತ್ತು, ಅಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ನಿನ್ನೆ ಧಾರವಾಡಕ್ಕೆ ಬಂದು, ಇಂದು ಶಿರಹಟ್ಟಿಯ ಫಕ್ಕೀರ ಸಿದ್ದರಾಮ ಸ್ವಾಮಿಗಳನ್ನು ಭೇಟಿಯಾಗಿ ಆರ್ಶೀವಾದ ಪಡೆಯಲು ಹೋಗುತ್ತಿರುವೆ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ, ಸುನೀಲ ಮಹಾಂತಶೆಟ್ಟರ, ಬಸವರಾಜ ಪಲ್ಲೆದ, ನವೀನ ಬೆಳ್ಳಟ್ಟಿ, ಗಂಗಾಧರ ಮೆಣಸಿನಕಾಯಿ ಇತರರು ಇದ್ದರು.