ಕನ್ನಡಪ್ರಭ ವಾರ್ತೆ ಹಂಪಿ
ವಿಜಯನಗರ ಸಾಮ್ರಾಜ್ಯದ ಗತವೈಭವದ ಮಾದರಿಯಲ್ಲಿ ಕರ್ನಾಟಕ ರಾಜ್ಯವನ್ನು ಕಟ್ಟುವುದು ನಮ್ಮ ಗುರಿಯಾಗಿದೆ. ಕರ್ನಾಟಕದ ಮಾದರಿಯಲ್ಲೇ ನಾವು ರಾಜ್ಯ ನಿರ್ಮಾಣ ಮಾಡುತ್ತೇವೆ. ನಮಗೆ ಬೇರೆ ಮಾದರಿ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಹಂಪಿಯ ಗಾಯತ್ರಿ ಪೀಠದಲ್ಲಿ ಶುಕ್ರವಾರ ನಗಾರಿ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಅವರು, ವಿಜಯನಗರ ಅರಸರ ಕಾಲದಲ್ಲಿ ಈ ಸಾಮ್ರಾಜ್ಯ ಅತ್ಯಂತ ಸುಭೀಕ್ಷವಾಗಿತ್ತು. ಎಲ್ಲರೂ ಸುಖವಾಗಿ ಇದ್ದರು. ಅಂತಹ ಸಮೃದ್ಧತೆಯನ್ನು ಮತ್ತೆ ನಮ್ಮ ರಾಜ್ಯದಲ್ಲಿ ಕಾಣುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಇಡೀ ದೇಶಕ್ಕೆ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುತ್ತೇವೆ ಎಂದರು.
ಇತಿಹಾಸ ಅರಿಯಿರಿ:ಯಾರೇ ಆಗಲಿ ಮೊದಲು ಇತಿಹಾಸವನ್ನು ತಿಳಿಯಬೇಕು. ಒಂದು ವೇಳೆ ಇತಿಹಾಸ ಅರಿಯದೇ ಹೋದರೆ ಕೇಂದ್ರದಲ್ಲಿರುವ ಕೋಮುವಾದಿ ಪಕ್ಷದ ಮುಖಂಡರು ಹೇಳುವುದನ್ನೇ ಸತ್ಯ ಎಂದು ಅರಿಯಬೇಕಾದ ಸ್ಥಿತಿ ಬರಲಿದೆ ಎಂದರು.ನಮ್ಮ ಸರ್ಕಾರ ಯುರೋಪ್ ಮಾದರಿಯಲ್ಲಿ ಪ್ರತಿ ನಾಗರಿಕರಿಗೆ ಕನಿಷ್ಠ ಆದಾಯ ದೊರಕುವಂತೆ ಮಾಡಲು ಯೋಜನೆ ರೂಪಿಸಿದೆ. ಇಂದು ನಾವು ನೀಡುತ್ತಿರುವ ಐದು ಗ್ಯಾರಂಟಿಗಳ ಗುರಿ ಇದೇ ಆಗಿದೆ. ಇದರ ಮೂಲಕ ‘ಯುನಿವರ್ಸಲ್ ಮಿನಿಮಮ್ಮ ಇನ್‌ಕಂ’ ಎಂಬ ಯುರೋಪ್ ನಾಡಲ್ಲಿ ಇರುವ ಪದ್ಧತಿಯನ್ನು ಇಲ್ಲಿಗೆ ತಂದಿದ್ದೇವೆ ಎಂದರು.
ಇಂದಿನ ನಾಡ ಹಬ್ಬ ದಸರಾ ಮೊದಲು ವಿಜಯನಗರಲ್ಲಿ ನಡೆಯುತ್ತಿತ್ತು. ಸಾಮ್ರಾಜ್ಯ ಪತನವಾದ ನಂತರ ಅದನ್ನು ಮೈಸೂರು ಮಹಾರಾಜರು ಅಲ್ಲಿ ಆರಂಭಿಸಿದರು. ಇದನ್ನೇ ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವ ಆಚರಿಸಬೇಕು ಎಂದು ಕೋರಿದ್ದರು. ೧೯೮೭ರಲ್ಲಿ ನಾನು ಮೊಟ್ಟ ಮೊದಲ ಹಂಪಿ ಉತ್ಸವಕ್ಕೆ ಅನುದಾನ ನೀಡಿದೆ ಎಂದರು.ಮೋದಿ ಗ್ಯಾರಂಟಿ ಕಾಪಿ:
ನಾನು ಗ್ಯಾರಂಟಿಗಳನ್ನು ಘೋಷಿಸಿದಾಗ ಎಲ್ಲರೂ ನನ್ನನ್ನು ಟೀಕಿಸಿದರು. ಇವೆಲ್ಲಾ ಸಾಧ್ಯವೇ ಎಂದು ಪ್ರಶ್ನಿಸಿದರು. ಆದರೆ, ಈಗ ನಮ್ಮದನ್ನೇ ಕಾಪಿ ಮಾಡುತ್ತಿದ್ದಾರೆ. ಅದನ್ನೇ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಎಂದರು.ಗ್ಯಾರಂಟಿಗಳಿಂದ ಬರಗಾಲದ ತೀವ್ರತೆ ಕಾಣುತ್ತಿಲ್ಲ:
ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ನಾವು ರೈತರಿಗೆ ₹650 ಕೋಟಿ ಮಧ್ಯಂತರ ಪರಿಹಾರ ನೀಡಿದ್ದೇವೆ. ಐದು ಗ್ಯಾರಂಟಿಗಳಿಂದಲೂ ಬರಗಾಲದ ತೀವ್ರತೆ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ರೈತರಿಗೆ ನೆರವಿಗಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.