ಹಾವೇರಿ: ಬೆಳೆಯುತ್ತಿರುವ ಮಕ್ಕಳು ಇಂದು ಒತ್ತಡದ ಜೀವನ ನಡೆಸುತ್ತಿದ್ದಾರೆ. ಮನೆಯ ವಾತಾವರಣ ಉತ್ತಮಗೊಂಡರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಪ್ರೀತಿ, ಸಮಾಧಾನ, ಸಂಸ್ಕಾರಗಳು ಆರೋಗ್ಯಕರ ಜೀವನಕ್ಕೆ ಪ್ರೇರಕವಾಗಿವೆ ಎಂದು ಖ್ಯಾತ ಪ್ರವಚನಕಾರ್ತಿ ಬ್ರಹ್ಮಕುಮಾರಿ ಶಿವಾನಿ ಹೇಳಿದರು.
ಪ್ರೀತಿ, ವಿಶ್ವಾಸದಿಂದ ಬದುಕುವುದು ನಮ್ಮ ಸಂಸ್ಕಾರ. ಸುತ್ತಲಿನ ವಾತಾವರಣ ಖುಷಿಯಾಗಿದ್ದರೆ, ಒತ್ತಡವಿಲ್ಲದೆ ಸಂತೋಷವಾಗಿ ಬದುಕಬಹುದು. ಕಲಿಯುಗದಿಂದ ಸತ್ಯಯುಗದ ಕಡೆ ನಾವೆಲ್ಲ ಸಾಗುತ್ತಿದ್ದು, ಸ್ವಯಂಗೌರವ ಇಟ್ಟುಕೊಳ್ಳಬೇಕು. ನಿಸ್ವಾರ್ಥವಾಗಿ ಎಲ್ಲರನ್ನು ಪ್ರೀತಿಸುತ್ತಾ ಸಾಗಬೇಕು. ಪ್ರತಿದಿನ ಹದಿನೈದು ನಿಮಿಷ ಧ್ಯಾನ ಮಾಡಿದರೆ, ನಮ್ಮ ಆಲೋಚನಾ ಲಹರಿ ಬದಲಾಗುತ್ತದೆ. ಸತ್ಯಯುಗದಲ್ಲಿ ಆತ್ಮವೇ ಅಂತಿಮ. ಅದು ಪರಮಾತ್ಮವಾಗಿದ್ದು, ಪವಿತ್ರವಾಗಿದೆ ಎಂದು ಹೇಳಿದರು.
ಹಿಂದಿನ ಪೀಳಿಗೆಯವರು ಸಂತೋಷದಿಂದ ಇರುತ್ತಿದ್ದರು. ಈಗ ಟಿವಿ ಮತ್ತು ಮೊಬೈಲ್ ಬಂದ ನಂತರ ಜೀವನದಲ್ಲಿ ಒತ್ತಡಗಳು ಹೆಚ್ಚಾಗಿವೆ. ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಮನೆ ಮುರಿಯುವ ಧಾರಾವಾಹಿಗಳು ವಿಜೃಂಭಿಸುತ್ತಿವೆ. ಇದೆಲ್ಲವನ್ನೂ ಬದಿಗಿಟ್ಟು, ಸಾತ್ವಿಕ ಆಹಾರ ಸೇವಿಸಿ, ರಾತ್ರಿ ಬೇಗ ಮಲಗಿ ಬೇಗ ಎದ್ದರೆ ಸಂತೋಷಕರ ಜೀವನ ನಿಮ್ಮದಾಗಿಸಿಕೊಳ್ಳಬಹುದು ಎಂದರು.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅತಿಯಾದ ನಿರೀಕ್ಷೆಗಳು ನಿರಾಸೆ ಉಂಟು ಮಾಡುತ್ತವೆ. ಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು. ಇಲ್ಲದಿದ್ದರೆ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ ಎಂದು ಹೇಳಿದರು.