ರಾಜ್ಯದ ಜನರ ಹಿತ ಕಾಪಾಡಲು ಸಿಎಂ ಸಿದ್ದರಾಮಯ್ಯ ಅವಿರತ ಶ್ರಮಿ: ಸಚಿವ ಸತೀಶ್ ಜಾರಕಿಹೊಳಿ

KannadaprabhaNewsNetwork |  
Published : Oct 10, 2024, 02:17 AM IST
ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಬುಧವಾರ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿ ನಂತರ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕರಾದ ಜಿ.ಎಚ್‌.ಶ್ರೀನಿವಾಸ್‌, ಟಿ.ಡಿ. ರಾಜೇಗೌಡ, ಎಚ್‌.ಡಿ. ತಮ್ಮಯ್ಯ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್‌ ಇದ್ದರು. | Kannada Prabha

ಸಾರಾಂಶ

ತರೀಕೆರೆ, ಕಳೆದ ಬಿಜೆಪಿ ಸರ್ಕಾರದಲ್ಲಿ ರಸ್ತೆ ಅಭಿವೃದ್ಧಿಗೆ 5 ಕೋಟಿ ಅನುದಾನ ತರುವುದು ಕಷ್ಟದ ಕೆಲಸವಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕೋಪಯೋಗಿ ಇಲಾಖೆಗೆ ಹೆಚ್ಚು ಅನುದಾನ ನೀಡಿದ್ದಾರೆ. ಪ್ರತೀ ಶಾಸಕರಿಗೂ ತಲಾ ₹15 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕಳೆದ ಬಿಜೆಪಿ ಸರ್ಕಾರದಲ್ಲಿ ರಸ್ತೆ ಅಭಿವೃದ್ಧಿಗೆ 5 ಕೋಟಿ ಅನುದಾನ ತರುವುದು ಕಷ್ಟದ ಕೆಲಸವಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕೋಪಯೋಗಿ ಇಲಾಖೆಗೆ ಹೆಚ್ಚು ಅನುದಾನ ನೀಡಿದ್ದಾರೆ. ಪ್ರತೀ ಶಾಸಕರಿಗೂ ತಲಾ ₹15 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಜನತೆಯ ಹಿತ ಕಾಪಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶ್ರಮಿಸು ತ್ತಿದೆ. ಆದರೆ, ವಿರೋಧ ಪಕ್ಷದವರು ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಅನಗತ್ಯವಾಗಿ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ತರೀಕೆರೆ ಪಟ್ಟಣದ ಎನ್.ಎಚ್.206 ರಸ್ತೆ ಅಭಿವೃದ್ದಿಯಾಗಬೇಕೆಂಬ ಹಲವು ವರ್ಷಗಳ ಬೇಡಿಕೆ ಇದೀಗ ಈಡೇರಿದೆ. ಸದ್ಯ ₹ 29 ಕೋಟಿ ಗಳಲ್ಲಿ 4 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ನಂತರ ಮತ್ತೆ 3 ಕಿಮೀ ರಸ್ತೆಗೆ ಅನುದಾನ ನೀಡಲಾಗುವುದು ಎಂದ ಅವರು, ಪಕ್ಷ ಬೇಧ ಮರೆತು 224 ಶಾಸಕರಿಗೂ ರಸ್ತೆ ಅಭಿವೃದ್ಧಿಗೆ ಸಮಾನ ಅನುದಾನ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಚಿಂತನೆಯಿದೆ ಎಂದು ತಿಳಿಸಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಸಚಿವ ಜಾರಕಿಹೊಳಿಯವರು ಬುದ್ದ, ಬಸವ, ಅಂಬೇಡ್ಕರ್ ತತ್ವ ಸಿದ್ದಾಂತಗಳಡಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ಅಜ್ಜಂಪುರ ಪಟ್ಟಣದಲ್ಲಿ ಹೊಸದಾಗಿ ಪ್ರವಾಸಿ ಮಂದಿರ ನಿರ್ಮಿಸಲು, ತರೀಕೆರೆ ಪ್ರವಾಸಿ ಮಂದಿರ ನವೀಕರಣಗೊಳಿಸಲು ಮತ್ತು ಪ್ರವಾಸಿ ಕ್ಷೇತ್ರ ಕೆಮ್ಮಣ್ಣುಗುಂಡಿ ರಸ್ತೆಯ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು. ಪಟ್ಟಣದಲ್ಲಿ ಒಟ್ಟು ₹55 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಲಿದೆ. ಪ್ರಸ್ತುತ ₹29 ಕೋಟಿ ಬಿಡುಗಡೆಯಾಗಿದೆ ಎಂದು ವಿವರಿಸಿದರು.ಚಿಕ್ಕಮಗಳೂರು ಶಾಸಕ ತಮ್ಮಯ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕೆಲಸಗಳನ್ನು ನಿರ್ವಹಿಸುತ್ತಿದೆ. ರಾಜ್ಯದ ಜನರ ಹಿತ ಕಾಪಾಡುತ್ತಿದೆ ಎಂದರು.ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ತರೀಕೆರೆ ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್‌ವರ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಾರುಕ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಕೃಷಿ ಉತ್ಪನ್ನ ಸಂಸ್ಕರಣಾ ನಿಗಮದ ಅಧ್ಯಕ್ಷ ಬಿ.ಎಚ್‌. ಹರೀಶ್, ಕೆಪಿಸಿಸಿ ಸದಸ್ಯರಾದ ಎಚ್.ವಿಶ್ವನಾಥ್, ನಟರಾಜ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ನಗರ ಕಾಂಗ್ರೆಸ್ ಅಧ್ಯಕ್ಷ ವರ್ಮಪ್ರಕಾಶ್, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಜಗದೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಂದ್ರಪ್ಪ ಉಪಸ್ಥಿತರಿದ್ದರು.

-- ಬಾಕ್ಸ್‌ --ಸತೀಶ್ ಜಾರಕಿಹೊಳಿ ಪರ ಶಾಸಕ ತಮ್ಮಯ್ಯ ಬ್ಯಾಟಿಂಗ್ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್‌.ಡಿ. ತಮ್ಮಯ್ಯ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್‌ ಮಾಡಿದರು.

ಸಿದ್ದರಾಮಯ್ಯ ಹೊರತುಪಡಿಸಿ ಭವಿಷ್ಯದ ನಾಯಕ ಸತೀಶ್ ಜಾರಕಿಹೊಳಿ. ಅವರಂತೆ ಸರಳ, ಸಜ್ಜನ ಮತ್ತೊಬ್ಬರಿಲ್ಲ. ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ಪಕ್ಷದಲ್ಲಿ ಅಂತಹಾ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಎಂದು ಹೇಳಿದರು.

---ಜಾರಕಿಹೊಳಿ ಪರ ಘೋಷಣೆ:

ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎನ್ನುವ ಘೋಷಣೆ ಕೇಳಿ ಬಂದಿತು. ಮುಂದಿನ ದಲಿತ ಸಿಎಂ ಎನ್ನುವ ಘೋಷಣೆಯನ್ನು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಹಾಕಿದರು.

--

ಐದು ವರ್ಷ ಸರ್ಕಾರ ಗಟ್ಟಿಯಾಗಿರಲಿದೆ

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರೇ ತಿಂಗಳಲ್ಲಿ ಬಿದ್ದು ಹೋಗುತ್ತದೆ ಎಂದು ಹೇಳಿದ್ದರು. ಈಗ ಸರ್ಕಾರಕ್ಕೆ 18 ತಿಂಗಳಾಗಿದೆ. ಮುಂದಿನ ಐದು ವರ್ಷವೂ ಸರ್ಕಾರ ಗಟ್ಟಿಯಾಗಿಯೇ ಇರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಮ್ಮನೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದಸರಾ ಬಳಿಕ ಸಿಎಂ ಬದಲಾವಣೆ ಎನ್ನುತ್ತಿದ್ದಾರೆ. ಇದನ್ನು ಯಾರು ಅವರಿಗೆ ಹೇಳಿದ್ದು ಎಂದು ಪ್ರಶ್ನಿಸಿದರು.ಹರಿಯಾಣ, ಕಾಶ್ಮೀರ ಚುನಾವಣಾ ಫಲಿತಾಂಶದ ಮೇಲೆ ಮೂಡಾ ಹಗರಣ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲಿಯ ಮೂಡಾ, ಎಲ್ಲಿಯ ಜಾರಕಿ ಹೊಳಿ, ಎಲ್ಲಿಯ ಕೋಳಿವಾಡ ಎಂದು ಹೇಳಿದ ಅವರು, ಹರಿಯಾಣದ ಜನರಿಗೆ ಕನ್ನಡ ಭಾಷೆ ಬರುವುದಿಲ್ಲ. ಹೀಗಿರುವಾಗ ಮೂಡಾ ಪ್ರಕರಣ ಅಲ್ಲಿನ ಜನರ ಮೇಲೆ ಪರಿಣಾಮ ಬೀರಲು ಹೇಗೆ ಸಾಧ್ಯ ಎಂದು ಹೇಳಿದರು.

ದಸರಾ ಉತ್ಸವಕ್ಕೆ ಮೈಸೂರಿಗೆ ಎಲ್ಲರೂ ಹೋಗುತ್ತಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಬೆಂಗಳೂರಿನಲ್ಲಿ ಶಾಸಕರ ಸಭೆ ನಡೆಯುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

9 ಕೆಸಿಕೆಎಂ 6ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಗುದ್ದಲಿ ಪೂಜೆ ನೆರವೇರಿಸಿ ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ಜಿ.ಎಚ್‌.ಶ್ರೀನಿವಾಸ್‌, ಟಿ.ಡಿ. ರಾಜೇಗೌಡ, ಎಚ್‌.ಡಿ. ತಮ್ಮಯ್ಯ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ