ಜೂ. 3ರಂದು ಲಕ್ಕುಂಡಿಗೆ ಸಿಎಂ ಸಿದ್ದರಾಮಯ್ಯ ಆಗಮನ

KannadaprabhaNewsNetwork |  
Published : May 29, 2025, 12:14 AM IST
ಲಕ್ಕುಂಡಿ ಗ್ರಾಮಸಭೆಯಲ್ಲಿ ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶರಣು ಗೋಗೇರಿ ಮಾತನಾಡಿದರು. | Kannada Prabha

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾಮಗಾರಿಗೆ ಜೂ. 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಬಯಲು ವಸ್ತು ಸಂಗ್ರಾಲಯದ ಭೂಮಿಪೂಜೆ, ಕಾಶಿ ವಿಶ್ವನಾಥ, ನನ್ನೇಶ್ವರ ದೇಗುಲ ಹಾಗೂ ಜಂತ್ಲಿಶಿರೂರ ರಸ್ತೆಯಲ್ಲಿಯ ಐತಿಹಾಸಿಕ ಕಲ್ಮಠದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.

ಗದಗ: 100 ಗುಡಿ, 100 ಬಾವಿಗಳನ್ನು ಪತ್ತೆ ಹಚ್ಚುವಂತಹ ಉತ್ಖನನ ಕಾಮಗಾರಿಗೆ ಚಾಲನೆ ನೀಡಲು ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ. 3ರಂದು ಬೆಳಗ್ಗೆ 11ಕ್ಕೆ ಆಗಮಿಸಲಿದ್ದು, ಈ ಕುರಿತು ಇಲ್ಲಿಯ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಇಲ್ಲಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿರುವಂತೆ ಬಯಲು ವಸ್ತು ಸಂಗ್ರಾಲಯದ ಭೂಮಿಪೂಜೆ, ಕಾಶಿ ವಿಶ್ವನಾಥ, ನನ್ನೇಶ್ವರ ದೇಗುಲ ಹಾಗೂ ಜಂತ್ಲಿಶಿರೂರ ರಸ್ತೆಯಲ್ಲಿಯ ಐತಿಹಾಸಿಕ ಕಲ್ಮಠದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಗ್ರಾಮದ ನೈರ್ಮಲ್ಯ ಕಾಪಾಡಿಕೊಂಡು, ಗ್ರಾಮಸ್ಥರ ಸಹಾಯ-ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

1 ಕೆಜಿ ಪ್ಲಾಸ್ಟಿಕ್‌ಗೆ 2 ಕೆಜಿ ಸಕ್ಕರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಲಕ್ಕುಂಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪ್ರತಿ ಮನೆಗೆ ತೆರಳಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ವಿನಂತಿಸಿಕೊಳ್ಳಲಾಗುವುದು. 1 ಕೆಜಿ ಪ್ಲಾಸ್ಟಿಕ್ ತಂದು ಕೊಟ್ಟವರಿಗೆ 2 ಕೆಜಿ ಸಕ್ಕರೆ ಕೊಡಲಾಗುವುದು. ಸ್ವಚ್ಛ ಭಾರತ ಯೋಜನೆಯಡಿ ಇನ್ನೂ ಬಾಕಿ ಇರುವ 250 ಮನೆಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಲು ಜಾಗೃತಿ ಮೂಡಿಸುವುದು. ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕವನ್ನು ಆರಂಭಿಸುವುದು. ಒಣ ಕಸವನ್ನು ಸಂಗ್ರಹಿಸಿ ವಿಲೇವಾರಿ ವಾಹನದಲ್ಲಿ ಹಾಕಲು ಜಾಗೃತಿ ಮೂಡಿಸುವ ಕುರಿತು ಚರ್ಚೆ ನಡೆಯಿತು.

15ನೇ ಹಣಕಾಸು ಯೋಜನೆಯಲ್ಲಿ ₹59 ಲಕ್ಷಗಳ ಕ್ರಿಯಾಯೋಜನೆ ಸಿದ್ಧಪಡಿಸಿದ್ದಕ್ಕೆ ಅಧ್ಯಕ್ಷರು ಅನುಮೋದನೆ ನೀಡಿದರು. ಇದರಲ್ಲಿ ಗ್ರಾಮದ ಕುಡಿಯುವ ನೀರು. ಗ್ರಾಮದ ನೈರ್ಮಲ್ಯ, ರಸ್ತೆ ಸುಧಾರಣೆ, ಗಟಾರು ನಿರ್ಮಾಣ ಇತರ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಚರ್ಚಿಸಲಾಯಿತು.

ಪಿಡಿಒ ಅಮೀರನಾಯಕ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ, ಇತರ ಕಾಮಗಾರಿಗಳು ಅಪೂರ್ಣಗೊಂಡು ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಆದ್ದರಿಂದ ಇನ್ನೂ 15 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದರು.

ಇನ್ನೂ ಮನರೇಗಾ ಕಾಮಗಾರಿಯಲ್ಲಿ ಕ್ರಿಯಾ ಯೋಜನೆಯಂತೆ 27,400 ಮಾನವ ದಿನಗಳ ಗುರಿಯನ್ನು ತಲುಪಲಾಗಿದ್ದು, ಸಹಕಾರ ನೀಡಿದ ಕೂಲಿ ಕಾರ್ಮಿಕರಿಗೆ, ಸಿಬ್ಬಂದಿ ವರ್ಗಕ್ಕೆ ಸಭೆ ಅಭಿನಂದಿಸಿತು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಕಾರ್ಯದರ್ಶಿ ಪ್ರದೀಪ ಆಲೂರ, ಎಸ್‌ಡಿಎಂಎ ಎಂ.ಎ. ಗಾಜಿ ಹಾಗೂ ಗ್ರಾಪಂ ಸದಸ್ಯರು ಇದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ