ಕನ್ನಡಪ್ರಭ ವಾರ್ತೆ ಉಡುಪಿ
ಇ.ಎಸ್.ಐ. ವಿಮಾ ಸೌಲಭ್ಯವು ಕೇಂದ್ರ ಪ್ರಾಯೋಜಿತ ಆರೋಗ್ಯ ವಿಮೆಯಾಗಿದ್ದು, 21 ಸಾವಿರ ರು.ದ ಒಳಗೆ ವೇತನ ಪಡೆಯುವ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ವೇತನ ಪರಿಷ್ಕರಣೆ ಮಾಡಿರುವ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕಾರ್ಮಿಕರು 21 ಸಾವಿರ ರು.ಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಇದರಿಂದ ಅವರು ಈ ವಿಮಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆದ್ದರಿಂದ ವೇತನದ ಮಿತಿಯನ್ನು 21 ಸಾವಿರ ರು.ನಿಂದ 30 ಸಾವಿರ ರು.ಗಳಿಗೆ ಏರಿಸಬೇಕು ಎಂದು ಕೋಟ ಅವರು ಕೇಂದ್ರ ಕಾರ್ಮಿಕ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪ್ರಸ್ತಾಪಿತ ಇ.ಎಸ್.ಐ. ಆಸ್ಪತ್ರೆಯನ್ನು ಶೀಘ್ರ ಪ್ರಾರಂಭಿಸಬೇಕು ಎಂದೂ ಕೋರಿಕೆ ಸಲ್ಲಿಸಿದರು. ಸಂಸದರ ಮನವಿ ಪರಿಶೀಲಿಸಿದ ಕೇಂದ್ರ ಸಚಿವರು, ಇ.ಎಸ್.ಐ. ವೇತನ ಮಿತಿ ಮೊತ್ತ ಪರಿಷ್ಕರಣೆ ಹಾಗೂ ಬ್ರಹ್ಮಾವರದ ಆಸ್ಪತ್ರೆ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು ಎಂದು ಸಂಸದ ಕಚೇರಿ ಪ್ರಕಟಣೆ ತಿಳಿಸಿದೆ.