ದೇಶದ ರಕ್ಷಣೆಗಾಗಿ ಒಗ್ಗಟ್ಟು ಪ್ರದರ್ಶನ ಅಗತ್ಯ

KannadaprabhaNewsNetwork |  
Published : May 29, 2025, 12:13 AM IST
ರಾಷ್ಟ್ರ ರಕ್ಷಣೆ ಹಾಗೂ ಐಕ್ಯತೆಗಾಗಿ ತಿಪಟೂರಿನಲ್ಲಿ ಬೃಹತ್ ತಿರಂಗಾ ಯಾತ್ರೆ | Kannada Prabha

ಸಾರಾಂಶ

ರಾಷ್ಟ್ರ ರಕ್ಷಣೆಗಾಗಿ ಹಾಗೂ ದೇಶದ ಜನ ತಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ದೇಶದ ರಕ್ಷಣೆಗಾಗಿ ನಮ್ಮೆಲರ ನಡೆ ಎಂಬ ಧ್ಯೇಯವಾಕ್ಯದೊಂದಿಗೆ ರಾಷ್ಟ್ರೀಯ ರಕ್ಷಣೆಗಾಗಿ ಸಾವಿರಾರು ನಾಗರೀಕರ ಭಾಗವಹಿಸುವಿಕೆಯೊಂದಿಗೆ ತಿಪಟೂರಿನಲ್ಲಿ ಬೃಹತ್ ತಿರಂಗಾ ಯಾತ್ರೆಯು ಬುಧವಾರ ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ರಾಷ್ಟ್ರ ರಕ್ಷಣೆಗಾಗಿ ಹಾಗೂ ದೇಶದ ಜನ ತಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ದೇಶದ ರಕ್ಷಣೆಗಾಗಿ ನಮ್ಮೆಲರ ನಡೆ ಎಂಬ ಧ್ಯೇಯವಾಕ್ಯದೊಂದಿಗೆ ರಾಷ್ಟ್ರೀಯ ರಕ್ಷಣೆಗಾಗಿ ಸಾವಿರಾರು ನಾಗರೀಕರ ಭಾಗವಹಿಸುವಿಕೆಯೊಂದಿಗೆ ತಿಪಟೂರಿನಲ್ಲಿ ಬೃಹತ್ ತಿರಂಗಾ ಯಾತ್ರೆಯು ಬುಧವಾರ ಯಶಸ್ವಿಯಾಗಿ ನಡೆಯಿತು. ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆಯ ಶೌರ್ಯ ಪರಾಕ್ರಮಗಳನ್ನು ಬೆಂಬಲಿಸಿ, ರಾಷ್ಟ್ರ ರಕ್ಷಣೆಗಾಗಿ, ಪಕ್ಷಾತೀತವಾಗಿ ತಿರಂಗಾ ಯಾತ್ರೆಯನ್ನು ದೇಶಾದ್ಯಂತ ನಡೆಸುತ್ತಿದ್ದು ಬುಧವಾರ ಕಲ್ಪತರು ನಾಡು ತಿಪಟೂರು ನಗರದಲ್ಲಿ ಬೆಳಗ್ಗೆ ಬೃಹತ್ ತಿರಂಗಾ ಯಾತ್ರೆಯು ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದಿಂದ ಪ್ರಾರಂಭಗೊಂಡು ದೊಡ್ಡಪೇಟೆ ಮಾರ್ಗವಾಗಿ, ಬಿ.ಎಚ್.ರಸ್ತೆ ಮೂಲಕ ಕಲ್ಪತರು ಕ್ರೀಡಾಂಗಣಕ್ಕೆ ಸಾಗಿತು. ಸುಮಾರು 300 ಮೀಟರ್ ಉದ್ದದ ತಿರಂಗಾವನ್ನು ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲ್ಪತರು ಕ್ರೀಡಾಂಗಣದಲ್ಲಿ ಸಮಾವೇಶಗೊಂಡ ತಿರಂಗಾಯಾತ್ರೆಯಲ್ಲಿ ಆಪರೇಷನ್ ಸಿಂದೂರ ಉದ್ದೇಶಿಸಿ ಮಾತನಾಡಿದ ಮಾಜಿ ಸೈನಿಕ ಚಂದ್ರಶೇಖರ್, ಕಾಶ್ಮಿರದ ಪಹಲ್ಗಾಮ್ ದಾಳಿಯ ಪ್ರತಿಕಾರವಾಗಿ ಪಾಪಿ ಪಾಕಿಸ್ತಾನಕ್ಕೆ ನಮ್ಮ ಭಾರತೀಯ ಸೇನೆ ಆಪರೇಷನ್ ಸಿಂದೂರದ ಮೂಲಕ ತಕ್ಕ ಉತ್ತರ ನೀಡಿದೆ. ನಮ್ಮ ಸೇನೆಯು ತಂತ್ರಜ್ಞಾನವನ್ನು ಬಳಸಿಕೊಂಡು ಪಾಕಿಸ್ತಾನದಲ್ಲಿ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ ನೂರಕ್ಕೂ ಹೆಚ್ಚು ಉಗ್ರರನ್ನು ಸಂಹರಿಸಿ ವಾಯು ನೆಲೆಗಳನ್ನು ಧ್ವಂಸ ಮಾಡುವ ಮೂಲಕ ಭಯೋತ್ಪಾದಕರಿಗೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಮ್ಮ ಹೆಮ್ಮೆಯ ಸೇನೆಯು ಮಾಡಿ ಇಡೀ ವಿಶ್ವಕ್ಕೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಆದ್ದರಿಂದ ಯುವ ಪೀಳಿಗೆ ಜಾತಿ, ಮತ, ಧರ್ಮ ಬಿಟ್ಟು ದೇಶದ ರಕ್ಷಣೆ ಒಳಿತಿಗಾಗಿ ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು. ನಿವೃತ್ತ ಎಸಿಪಿ ಲೋಕೇಶ್ವರ ಮಾತನಾಡಿ ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ತಿರಂಗಾ ಯಾತ್ರೆ ನಡೆಸುವ ಮೂಲಕ ಸೈನಿಕರ ಬೆನ್ನುತಟ್ಟಲಾಗುತ್ತಿದೆ. ಆದರೆ ಘೋಷಣೆ, ಜೈಕಾರದ ಬದಲು ನಮ್ಮಲ್ಲಿ ಲಕ್ಷಾಂತರ ಸೈನಿಕರ ಕುಟುಂಬಗಳಿದ್ದು ಆ ಕುಟುಂಬಗಳ ಕಷ್ಟ ಸುಖಗಳಲ್ಲಿ ನಾವು ಕೈಲಾದ ಸೇವೆ ಸಲ್ಲಿಸಿದಾಗ ಸೈನಿಕರಿಗೆ ತಮ್ಮ ಕುಟುಂಬ ರಕ್ಷಣೆಗೆ ಸಮಾಜವಿದೆ ಎಂದು ಮತ್ತಷ್ಟು ಧೈರ್ಯ, ಹೋರಾಡುವ ಶಕ್ತಿ ಬರಲಿದ್ದು ಈ ನಿಟ್ಟಿನಲ್ಲಿ ಸೈನಿಕರ ಕುಟುಂಬಗಳಿಗೆ ಆತ್ಮಸ್ಥೈರ್ಯ, ಸಹಾಯ ಮಾಡುವ ಕೆಲಸದಲ್ಲಿ ಎಲ್ಲರೂ ನಿರತರಾಗಬೇಕಿದ್ದು ಇದೂ ಒಂದು ಸೇವೆಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರುಗಳಾದ ಸಬ್ಬೂರ್, ನಂಜಾಮರಿ, ಚಂದ್ರಶೇಖರ್, ಪರಮೇಶ್, ಗಂಗಾಧರಯ್ಯ, ಷಣ್ಮುಖ, ಷಡಕ್ಷರಯ್ಯ, ಕವಿತಾ, ದಯಾನಂದಮೂರ್ತಿ, ನಟರಾಜು, ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿಶಂಕರ್ ಇವರುಗಳನ್ನು ಸನ್ಮಾನಿಸಲಾಯಿತು. ತಿರಂಗಾಯಾತ್ರೆಯಲ್ಲಿ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ತಮ್ಮಡಿಹಳ್ಳಿ ಡಾ. ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ, ಗುರುಕುಲಾನಂದಾಶ್ರಮದ ಶ್ರೀಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಮಾಜಿ ಸಚಿವ ಬಿ.ಸಿ. ನಾಗೇಶ್, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ನಗರಸಭೆ ಅಧ್ಯಕ್ಷೆ ಯುಮನಾ, ಉಪಾಧ್ಯಕ್ಷೆ ಮೇಘಶ್ರೀ, ವೈದ್ಯರಾದ ಡಾ. ಶ್ರೀಧರ್, ಡಾ. ವಿವೇಚನ್, ನಿಖಿಲ್‌ರಾಜಣ್ಣ ಎಲ್ಲಾ ಪಕ್ಷಗಳ ಹಾಲಿ ಮಾಜಿ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಎನ್.ಸಿ.ಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ವೈದ್ಯರು, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್