ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ- 70ರ ಅಭಿನಂದನೆ

KannadaprabhaNewsNetwork |  
Published : May 29, 2025, 12:13 AM IST
7 | Kannada Prabha

ಸಾರಾಂಶ

ಮೈಸೂರು ವಿವಿ ಕ್ಯಾಂಪಸ್ ಅಂದವಾಗಿ ಕಾಣುವಂತೆ ಮಾಡಿದ್ದು ಹಾಗೂ ವಿವಿಯ ಶೈಕ್ಷಣಿಕ ಚಟುವಟಕೆಗೆ ಬೇಕಾದ ಕಟ್ಟಡ ಸೌಲಭ್ಯ ದೊರಕಿಸಿಕೊಟ್ಟ ಕೀರ್ತಿ ರಂಗಪ್ಪ ಅವರಿಗೆ ಸಲ್ಲಬೇಕು. ಈ ರೀತಿಯ ಮಾದರಿ ವಿದ್ಯಾಸಂಸ್ಥೆಗಳು ದೇಶಕ್ಕೆ ಬೇಕಿವೆ. ಇವರಿಂದ ಇನ್ನಷ್ಟು ಕೊಡುಗೆ ಬರಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಹಾಗೂ 70 ವಸಂತಗಳನ್ನು ಪೂರೈಸಿದ ನೆನಪಿಗಾಗಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮತ್ತು ದಂಪತಿಯನ್ನು ಅವರ ಶಿಷ್ಯರು, ಅಭಿಮಾನಿಗಳು ಅಭಿನಂದಿಸಿದರು.

ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ರಸಾಯನ ಶಾಸ ಅಧ್ಯಯನ ವಿಭಾಗ, ಸಾವಯವ ರಸಾಯನಶಾಸ್ತ್ರ ವಿಭಾಗ, ಪ್ರೊ.ಕೆ.ಎಸ್. ರಂಗಪ್ಪ ಅವರ ಅಭಿಮಾನಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್. ರಂಗಪ್ಪ ಮತ್ತು ಪೂರ್ಣಿಮಾದೇವಿ ರಂಗಪ್ಪ ಅವರನ್ನು ಅಭಿನಂದಿಸಲಾಯಿತು.

ದಿವಂಗತ ವಿಜ್ಞಾನಿ ವೈ.ಟಿ.ತಾತಾಚಾರಿ ಪ್ರಶಸ್ತಿಯನ್ನು ಮಾದುರಿ ತಾತಾಚಾರಿ ಅವರು ರಂಗಪ್ಪ ಅವರಿಗೆ ಪ್ರದಾನ ಮಾಡಿದರು. ಅಲ್ಲದೇ ಪ್ರೊ. ಶಿವರಾಜಪ್ಪ ಸಂಗ್ರಹಿಸಿದ್ದ ರಂಗಪ್ಪ ಅವರ ಬಗ್ಗೆ ಬರೆದಿರುವ ವಿಸ್ಮಯ ಜಗತ್ತಿನ ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ತೆಲಂಗಾಣದ ಹೈದರಾಬಾದ್ ವಿವಿ ವಿಶ್ರಾಂತ ಕುಲಪತಿ ಗೋರ್ವಧನ್ ಮೇಹ್ತಾ ಮಾತನಾಡಿ, ಮೈಸೂರು ವಿವಿ ಕ್ಯಾಂಪಸ್ ಅಂದವಾಗಿ ಕಾಣುವಂತೆ ಮಾಡಿದ್ದು ಹಾಗೂ ವಿವಿಯ ಶೈಕ್ಷಣಿಕ ಚಟುವಟಕೆಗೆ ಬೇಕಾದ ಕಟ್ಟಡ ಸೌಲಭ್ಯ ದೊರಕಿಸಿಕೊಟ್ಟ ಕೀರ್ತಿ ರಂಗಪ್ಪ ಅವರಿಗೆ ಸಲ್ಲಬೇಕು. ಈ ರೀತಿಯ ಮಾದರಿ ವಿದ್ಯಾಸಂಸ್ಥೆಗಳು ದೇಶಕ್ಕೆ ಬೇಕಿವೆ. ಇವರಿಂದ ಇನ್ನಷ್ಟು ಕೊಡುಗೆ ಬರಬೇಕಿದೆ ಎಂದರು.

ಸಂಸದ ಹಾಗೂ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಪ್ರೊ.ಕೆ.ಎಸ್‌. ರಂಗಪ್ಪ ಅವರು ಮೈಸೂರು ವಿವಿ ಮತ್ತು ಮುಕ್ತ ವಿವಿ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಎರಡೂ ವಿವಿಗೂ ಹೊಸ ಆಯಾಮ ನೀಡಿದ್ದಾರೆ. ಆರ್ಗ್ಯಾನಿಕ್‌ ಕೆಮಿಸ್ಟ್ರಿ ವಿಷಯಕ್ಕೆ ತಮ್ಮದೇ ಆದ ಕೊಡುಗ ನೀಡಿದ್ದಾರೆ. ನೂರಾರು ಸಂಶೋಧಕರನ್ನು ಹುಟ್ಟು ಹಾಕಿದ ಕೀರ್ತಿ ಇವರಿಗೆ ಸಲ್ಲುಸ್ತತದೆ. ಉನ್ನತ ಸ್ಥಾನಕ್ಕೆ ತಲುಪಿದ ವ್ಯಕ್ತಿ ಆ ಸ್ಥಾನದಲ್ಲಿ ಹೆಚ್ಚು ಕಾಲ ಇರಬೇಕಾದರೆ ಕಲಿತ ಜ್ಞಾನಕ್ಕಿಂತ ಬದ್ಧತೆ, ನಡವಳಿಕೆ, ವ್ಯಕ್ತಿತ್ವ ಮುಖ್ಯ ಎಂದು ತಿಳಿಸಿದರು.

ದೊಡ್ಡ ವಿಜ್ಞಾನಿಗಳು ಒಳ್ಳೆಯ ಆಡಳಿತಗಾರರಾಗಿ ಇರುವುದಿಲ್ಲ. ಅಂತೆಯೇ ಒಳ್ಳೆಯ ಆಡಳಿತಗಾರ ಪ್ರಮುಖ ವಿಜ್ಞಾನಿಯಾಗಿರಲು ಸಾಧ್ಯವಿಲ್ಲ. ಆದರೆ, ಪ್ರೊ.ಕೆ.ಎಸ್.ರಂಗಪ್ಪ ಅವರು ಈ ಎರಡನ್ನೂ ಮೈಗೂಡಿಸಿಕೊಂಡ ವಿಶೇಷ ವ್ಯಕ್ತಿ ಎಂದು ಬಣ್ಣಿಸಿದರು.

ಆಪರೇಷನ್ ಸಿಂದೂರದ ಯಶಸ್ವಿಗೆ ಸೈನಿಕರೊಂದಿಗೆ ವಿಜ್ಞಾನ, ವಿಜ್ಞಾನಿಗಳು ನೀಡಿದ ಕೊಡುಗೆಯೂ ಮುಖ್ಯ ಪಾತ್ರವಹಿಸಿದೆ. ಆದ್ದರಿಂದ ಇಬ್ಬರನ್ನೂ ಅಭಿನಂದಿಸಬೇಕು ಎಂದರು.

ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಪ್ರೊ.ಟಿ.ಪಿ. ಸಿಂಗ್, ಸನ್ ಫಾರ್ಮಾ ಅಡ್ವಾನ್ಸ್ ರಿಸರ್ಚ್ ಕಂಪನಿ ಮುಖ್ಯಸ್ಥ ಡಾ.ಟಿ. ರಾಜಮನ್ನಾರ್, ಪೂರ್ಣಿಮಾದೇವಿ ರಂಗಪ್ಪ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ, ಪ್ರೊ.ಕೆ. ಮಂಟೇಲಿಂಗು, ಪ್ರೊ.ಎಂ.ಪಿ. ಸದಾಶಿವ, ಪ್ರೊ.ಎನ್‌.ಆರ್‌. ತಿಮ್ಮೇಗೌಡ ಮೊದಲಾದವರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್