ಡಿ.2 ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ

KannadaprabhaNewsNetwork | Published : Nov 20, 2024 12:32 AM

ಸಾರಾಂಶ

ತುಮಕೂರುಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕೈಗಾರಿಕೆ, ಕಾರ್ಮಿಕ, ರೇಷ್ಮೆ, ಕಂದಾಯ, ವಿಕಲ ಚೇತನರ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಹಾಲು ಒಕ್ಕೂಟ, ವಿವಿಧ ನಿಗಮಗಳು, ಎನ್‌ಆರ್‌ಎಲ್‌ಎಂ ಸೇರಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳಡಿ 1.46 ಲಕ್ಷ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಸಿದ್ಧವಿರುವ ಲೋಕೋಪಯೋಗಿ, ಅಗ್ನಿಶಾಮಕ, ಪೊಲೀಸ್, ಸಣ್ಣ ನೀರಾವರಿ, ಸಮಾಜ ಕಲ್ಯಾಣ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೊಳಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 1500 ಕೋಟಿ ರು.. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಜಿಲ್ಲೆಯಲ್ಲಿ ಕೈಗೊಳ್ಳಲಾಗುವ 929 ಕೋಟಿ ರು.. ವೆಚ್ಚದ ಒಟ್ಟು 825 ಕಾಮಗಾರಿಗಳ ಶಿಲಾನ್ಯಾಸ ಹಾಗೂ 94 ಕೋಟಿ ರು.. ವೆಚ್ಚದ ಪೂರ್ಣಗೊಂಡಿರುವ ಒಟ್ಟು 66 ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಲಾಗುವುದು. ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಿಂದ 253 ಕೋಟಿ ರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 263 ಕೋಟಿ ರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 194 ಕೋಟಿ ರು. ಲೋಕೋಪಯೋಗಿ ಇಲಾಖೆಯ 188 ಕೋಟಿ ರು. ಸಣ್ಣ ನೀರಾವರಿ ಇಲಾಖೆಯಲ್ಲಿ 57 ಕೋಟಿ ರು. ಸಮಾಜ ಕಲ್ಯಾಣ ಇಲಾಖೆಯ 35 ಕೋಟಿ ರು. ಅಗ್ನಿಶಾಮಕ ಇಲಾಖೆಯ 3 ಕೋಟಿ ರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ 12 ಕೋಟಿ ರು. ಕೆಆರ್‌ಐಡಿಎಲ್‌ನ 11 ಕೋಟಿ ರು. ಕೃಷಿ ಇಲಾಖೆಯ 2 ಕೋಟಿ ರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 3 ಕೋಟಿ ರು. ಪೊಲೀಸ್ ಇಲಾಖೆಯ 0.71 ಕೋಟಿ ರು.. ಸೇರಿದಂತೆ ಸುಮಾರು 1500 ಕೋಟಿ ರು. ಕಾಮಗಾರಿಗಳಿಗೆ ಕಾರ್ಯಕ್ರಮದಲ್ಲಿ ಅಡಿಗಲ್ಲು ಹಾಗೂ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು. ನಮ್ಮ ಸರ್ಕಾರದಿಂದ ಜನಸಮುದಾಯಕ್ಕೆ ಭರವಸೆ ನೀಡಿದಂತೆ ವಿನೂತನ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ವಿರೋಧ ಪಕ್ಷಗಳ ಟೀಕೆ-ಟಿಪ್ಪಣಿಗಳಿಗೆ ಉತ್ತರ ನೀಡುತ್ತಿದ್ದೇವೆ. ಈ ಕಾರ್ಯಕ್ರಮದಿಂದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿರುವ ವಿಪಕ್ಷದವರ ನಡವಳಿಕೆ ಜನರಿಗೆ ತಿಳಿಯಲಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಸರ್ಕಾರ ದಿವಾಳಿಯಾಗಿದೆ. ಕಾಮಗಾರಿಗಳ ಅನುಷ್ಠಾನಕ್ಕೆ ಹಣವಿಲ್ಲವೆಂದು ವಿರೋಧ ಪಕ್ಷದವರು ಮಾಡುವ ಟೀಕೆಗಳಿಗೆ ಈ ಕಾರ್ಯಕ್ರಮ ಉತ್ತರವಾಗಲಿದೆ ಎಂದರು.ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದರು. ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿಲ್ಲ ಎಂದು ಮಹಾರಾಷ್ಟ್ರ ಚುನಾವಣೆಯಲ್ಲಿ ವಿರೋಧಪಕ್ಷದವರು ಜಾಹೀರಾತು ನೀಡಿದ್ದು, ಇದಕ್ಕೆಲ್ಲ ಉತ್ತರ ಕೊಡುವ ಸಂದರ್ಭ ಬಂದಿದೆ ಎಂದು ತಿಳಿಸಿದರು.ಈ ಬೃಹತ್ ಕಾರ್ಯಕ್ರಮದಲ್ಲಿ ರೈತರಿಗೆ ಬೆಳೆ ಕಟಾವು ಯಂತ್ರ, ಟ್ರ್ಯಾ ಕ್ಟರ್, ಮಿನಿ ಟ್ರ್ಯಾಕ್ಟರ್‌, ರೋಟಾವೇಟರ್, ಹಾರ್ವೆಸ್ಟರ್, ಟಿಲ್ಲರ್ ಸೇರಿದಂತೆ ಆಧುನಿಕ ಕೃಷಿ ಉಪಕರಣಗಳು, ವಿವಿಧ ನಿಗಮಗಳಿಂದ ಟ್ಯಾಕ್ಸಿ ಸೇರಿದಂತೆ ಒಟ್ಟು 1.46 ಲಕ್ಷ ಫಲಾನುಭವಿಗಳಿಗೆ 236 ಕೋಟಿ ರು.. ವೆಚ್ಚದ ಸವಲತ್ತುಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.ಕ್ರಿಕೆಟ್ ಸ್ಟೇಡಿಯಂಗೆ 41 ಎಕರೆ ಹಲವಾರು ದಶಕಗಳಿಂದ ಜಿಲ್ಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಒತ್ತಾಯವಿದ್ದು, ಈ ನಿಟ್ಟಿನಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗೊಲ್ಲಹಳ್ಳಿಯಲ್ಲಿ 41 ಎಕರೆ ಪ್ರದೇಶವನ್ನು ಗುರುತಿಸಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ಗೆ ನೀಡಲಾಗಿದೆ. ಮುಖ್ಯಮಂತ್ರಿಗಳು ಡಿಸೆಂಬರ್ 2ರಂದು ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮಾದರಿಯಲ್ಲಿ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ಇದಾಗಲಿದೆ ಎಂದು ತಿಳಿಸಿದರು.

Share this article