ಕನ್ನಡಪ್ರಭ ವಾರ್ತೆ ಹಾಸನ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಡಿ. 6ರಂದು ಹಾಸನಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸದರಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಲು ಅಗತ್ಯ ಸಿದ್ಧತೆಗೆ ಕ್ರಮ ವಹಿಸುವಂತೆ ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಚಾಚು ತಪ್ಪದೆ ನಿರ್ವಹಿಸಲು ನಿರ್ದೇಶನ ನೀಡಿದರಲ್ಲದೆ, ಕೇಂದ್ರ ಸ್ಥಾನ ಬಿಡಲು ಜಿಲ್ಲಾಧಿಕಾರಿ ಅವರ ಪೂರ್ವಾನುಮತಿ ಪಡೆದು ತೆರಳುವಂತೆ ತಿಳಿಸಿದರು. ಸದರಿ ಕಾರ್ಯಕ್ರಮ ಯಶಸ್ವಿ ಕುರಿತು ರಾಜ್ಯದಲ್ಲಿಯೇ ಮಾತನಾಡುವಂತೆ ಮಾಡಲು ಅಧಿಕಾರಿಗಳು ಎಚ್ಚರಿಕೆಯಿಂದ ಶ್ರಮವಹಿಸಿ ಕರ್ತವ್ಯ ನಿರ್ವಹಿಸಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾತನಾಡಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಸಿದ್ಧತೆ ಮಾಡಿಕೊಂಡು ಎಲ್ಲರೂ ಒಂದು ತಂಡವಾಗಿ ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾರ್ಯಕ್ರಮಕ್ಕೆ ವಿವಿಧ ಸಚಿವರುಗಳು ಆಗಮಿಸುವುದರಿಂದ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ಲೈಸನ್ ಅಧಿಕಾರಿಯಾಗಿರುತ್ತಾರೆ. ಶಿಷ್ಟಾಚಾರದಲ್ಲಿ ಯಾವುದೇ ನ್ಯೂನ್ಯತೆ ಆಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಅಧಿಕಾರಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ತಮ್ಮ ಗಮನಕ್ಕೆ ಒಮ್ಮೆ ತನ್ನಿ ಎಂದರಲ್ಲದೆ, ಸಣ್ಣ ಸಣ್ಣ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಯಾವುದೇ ಲೋಪದೋಷ ಉಂಟಾಗದಂತೆ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ವಾಹನ ದಟ್ಟಣೆ ನಿಯಂತ್ರಣ ಹಾಗೂ ವಾಹನ ನಿಲುಗಡೆಗೆ ನಿರ್ದಿಷ್ಟ ಸ್ಥಳ ಗುರುತಿಸಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಸೈನೇಜ್ ಬೋರ್ಡ್ ಹಾಕುವಂತೆ ಸೂಚಿಸಿದರು. ಸುಸಜ್ಜಿತ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರಲ್ಲದೆ ಪ್ರಾಥಮಿಕ ಚಿಕಿತ್ಸೆಗೆ ಅಗತ್ಯ ಸಿದ್ಧತೆಗೆ ಕ್ರಮವಹಿಸಲು ಸೂಚಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ವ್ಯವಸ್ಥಿತವಾಗಿ ಕಸದ ಬುಟ್ಟಿಗಳನ್ನು ಇಡುವಂತೆ ಸೂಚಿಸಿದರಲ್ಲದೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಜೊತೆಗೆ ಕಸದ ಉತ್ಪಾದನೆ ಕಡಿಮೆ ಮಾಡಲು ಕೂಡ ಗಮನಹರಿಸಿ ಪರಿಸರ ಸ್ನೇಹಿ ಕಾರ್ಯಕ್ರಮ ಮಾಡಲು ಸಹಕರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರನ್ನು ಸ್ವಾಗತಿಸುವ ಹಂತದಿಂದ ಅವರನ್ನು ಬೀಳ್ಕೊಡುವವರೆಗೆ ಪ್ರತಿ ಹಂತದಲ್ಲೂ ವಿಡಿಯೋ ಮತ್ತು ಛಾಯಾಚಿತ್ರ ತೆಗೆಯಲು ಒಂದು ತಂಡ ನೇಮಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳ ಹೆಸರು, ಮೊಬೈಲ್ ನಂಬರ್, ಗ್ರಾಮದ ಹೆಸರಿನೊಂದಿಗೆ ಪಟ್ಟಿ ತಯಾರಿಸಿ ಒಂದು ಬಸ್‌ಗೆ ಒಬ್ಬರು ನೋಡಲ್ ಆಫೀಸರ್ ನೇಮಿಸಿ ಅವರ ಸಂಪರ್ಕ ಸಂಖ್ಯೆ ನೀಡಬೇಕು ವಾಟ್ಸಾಪ್ ಗ್ರೂಪ್ ಮಾಡಿ ಎಂದು ಸೂಚಿಸಿದರಲ್ಲದೆ ಬಸ್ ನಂಬರ್ ಮತ್ತು ಚಾಲಕನ ಮೊಬೈಲ್ ನಂಬರ್ ಶೇರ್ ಮಾಡಬೇಕು, ಬಸ್ ಹೊರಟ ತಕ್ಷಣ ಗ್ರೂಪ್‌ಗೆ ಪೋಟೋ ಹಾಕಬೇಕು ಎಂದು ತಿಳಿಸಿದರು. ಇಲಾಖೆವಾರು ಸ್ಟಾಲ್ ಹಾಕಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರಲ್ಲದೆ, ಕಾರ್ಯಕ್ರಮದ ಉದ್ದೇಶ ಮತ್ತು ಮಾಹಿತಿ ನೀಡಲು ಕಿರು ಹೊತ್ತಿಗೆ ಬಿಡುಗಡೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ ಗ್ರಾಮೀಣ ಭಾಗದಿಂದ ಬರುವ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಪಿಕ್‌ಅಪ್ ಪಾಯಿಂಟ್ ನಿಗದಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಬಾಬು, ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿಗಳಾದ ಜಗದೀಶ್ ಗಂಗಣ್ಣನವರ್, ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.