- ರೇಣು ವೈಯಕ್ತಿಕ ಹಿತಾಸಕ್ತಿಯ ಹೋರಾಟ, ಸಭೆಗೆ ರಾಜ್ಯಾಧ್ಯಕ್ಷರು ಭಾಗಿಯಾಗಬಾರದು: ಶಾಂತರಾಜ ಪಾಟೀಲ - - -
ಬಿಜೆಪಿ ನೇತೃತ್ವದ ರೈತ ಹೋರಾಟವೆಂದರೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ರೈತರು, ಜನರು ಪಾಲ್ಗೊಳ್ಳುತ್ತಿದ್ದ ಇತಿಹಾಸವಿದೆ. ವೈಯಕ್ತಿಕ ಲಾಭಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕರೆ ನೀಡಿದ್ದ ಇಂತಹ ಹೋರಾಟದಲ್ಲಿ ಭಾಗಿಯಾಗುವ ಬದಲು, ಮೂರು ಹೋಳಾಗಿರುವ ಜಿಲ್ಲಾ ಬಿಜೆಪಿಯನ್ನು ಸರಿಪಡಿಸುವ ಕೆಲಸ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಡಬೇಕಿತ್ತು ಎಂದು ಪಕ್ಷದ ಹಿರಿಯ ಮುಖಂಡ ಹೊನ್ನಾಳಿ ಶಾಂತರಾಜ ಪಾಟೀಲ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ವೈಯಕ್ತಿಕ ಉದ್ದೇಶದ ಹೋರಾಟದಲ್ಲಿ ಪಾಲ್ಗೊಳ್ಳುವ ಮುನ್ನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಯಾ ಜಿಲ್ಲೆಯಿಂದ ವರದಿ ತರಿಸಿಕೊಂಡು ಪಾಲ್ಗೊಳ್ಳುವುದು ಸೂಕ್ತ ಎಂದರು.ಒಂದು ಗುಂಪಿಗಷ್ಟೇ ಇಲ್ಲಿನ ಜಿಲ್ಲಾಧ್ಯಕ್ಷ ಇರುವಂತಿದೆ. ಈಚೆಗೆ ಜಿಲ್ಲಾ ಕೋರ್ ಕಮಿಟಿ ಸಭೆಗೆ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರದ ಏಕೈಕ ಬಿಜೆಪಿ ಶಾಸಕ ಬಿ.ಪಿ. ಹರೀಶ ಸೇರಿದಂತೆ ನಾವ್ಯಾರೂ ಭಾಗಿಯಾಗಿಲ್ಲ. ದಾವಣಗೆರೆಯಲ್ಲಿ ರೇಣುಕಾಚಾರ್ಯ ನೇತೃತ್ವದಲ್ಲಿ ಕರೆ ನೀಡಿದ್ದ ಹೋರಾಟಕ್ಕೆ ರಾಜ್ಯಾಧ್ಯಕ್ಷರು ಭಾಗಿಯಾಗಿದ್ದರು. ಹೀಗಿದ್ದರೂ ಕೇವಲ 300-400 ಜನರಷ್ಟೇ ಭಾಗಿಯಾಗಿದ್ದರು ಎಂದರು.
ದಾವಣಗೆರೆಯಲ್ಲಿ ರೇಣುಕಾಚಾರ್ಯರಂಥ ವ್ಯಕ್ತಿಗಳಿಂದಾಗಿ ಪಕ್ಷವು ಮೂರು ಗುಂಪುಗಳಾಗಿದೆ. ದಾವಣಗೆರೆ ದಕ್ಷಿಣಕ್ಕೆ ಬಿ.ಜಿ.ಅಜಯಕುಮಾರ, ಉತ್ತರಕ್ಕೆ ಲೋಕಿಕೆರೆ ನಾಗರಾಜ ಹೀಗೆ ಒಂದೊಂದು ಕ್ಷೇತ್ರಕ್ಕೆ ಒಬ್ಬೊಬ್ಬರ ಕೈಹಿಡಿದು, ವಿಧಾನಸೌಧಕ್ಕೆ ಕರೆ ತರುತ್ತೇನೆಂದು ರೇಣುಕಾಚಾರ್ಯ ಹೇಳುತ್ತಿರುವುದೇ ಹಾಸ್ಯಾಸ್ಪದ. ಪಕ್ಷದಲ್ಲಿ ಬಿ ಫಾರಂ ನೀಡಲು ಚುನಾವಣಾ ಸಮಿತಿ ನಿರ್ಧರಿಸುತ್ತದೆ. ಅದಕ್ಕೊಂದು ಸಮಿತಿ ಇದೆ, ರಾಷ್ಟ್ರೀಯ ನಾಯಕರಿದ್ದಾರೆ. ಆದರೆ, ರೇಣುಕಾಚಾರ್ಯ ಕೆಲವರಿಗೆ ತಾವೇ ಬಿ ಫಾರಂ ಕೊಡುವವರಂತೆ ಕೈ ಹಿಡಿದು, ವಿಧಾನಸೌಧಕ್ಕೆ ಕರೆ ತರುತ್ತೇನೆಂದು ಹೇಳುತ್ತಿರುವುದು ಸಹ ಪಕ್ಷದ ವರಿಷ್ಠರು ಗಮನಿಸಲಿ ಎಂದರು.ಕಳೆದ 2 ವರ್ಷಗಳಿಂದಲೂ ಪಕ್ಷ ಮೂರು ಹೋಳಾಗಿದೆ. ಸಮಸ್ಯೆ ಪರಿಹರಿಸಲು ಪ್ರಭಾರಿಗಳನ್ನು ಕಳಿಸುವ ಕೆಲಸ ರಾಜ್ಯ ನಾಯಕರು ಮಾಡಬೇಕು. ಆದರೆ, ಸಿದ್ದೇಶ್ವರ, ಹರೀಶ ಸೇರಿದಂತೆ ಯಾರೂ ಭಾಗವಹಿಸುತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಶಾಸಕರನ್ನು ಕಟ್ಟಿಕೊಂಡು ಹೋಗಿ, ರೆಸಾರ್ಟ್ ರಾಜಕೀಯ ಮಾಡಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಬಿಎಸ್‌ವೈ ಬಗ್ಗೆ ಅಪ್ಪ-ಮಕ್ಕಳ ಬಂಡವಾಳ ಬಯಲಿಗೆ ಎಳೆಯುತ್ತೇನೆಂಬ ಬೆದರಿಕೆ ಮಾತುಗಳನ್ನಾಡಿದ್ದೂ ಇದೇ ರೇಣುಕಾಚಾರ್ಯ ಎಂಬುದನ್ನು ವಿಜಯೇಂದ್ರ ಮರೆಯಬಾರದು ಎಂದರು.
ಪಕ್ಷದ ಹಿರಿಯ ಮುಖಂಡರಾದ ಅರಕೆರೆ ಶಾಂತರಾಜ ಪಾಟೀಲ್, ಎಂ.ಆರ್.ಮಹೇಶ, ಕೆ.ವಿ.ಚನ್ನಪ್ಪ, ನೆಲಹೊನ್ನೆ ದೇವರಾಜ, ಯಕ್ಕನಹಳ್ಳಿ ಜಗದೀಶ, ಮಾಸಡಿ ಸಿದ್ದೇಶ ಇತರರು ಇದ್ದರು.- - -
(ಬಾಕ್ಸ್)* ಎಸ್ಸೆಸ್ಸೆಂ ಮನೇಲಿ ರೇಣುಕಾಚಾರ್ಯ ರಹಸ್ಯ ಸಭೆ ಏಕೆ?: ಹನುಮಂತಪ್ಪದಾವಣಗೆರೆ: ಹೊನ್ನಾಳಿ- ನ್ಯಾಮತಿ ಬಂದ್ ಮಾಡಿದ್ದ ವೇಳೆ ಬಿಜೆಪಿ ಮುಖಂಡನಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಕಪಾಳ ಮೋಕ್ಷ ಮಾಡಿ, ಅವಾಚ್ಯವಾಗಿ ನಿಂದಿಸಿದ ಮಾರನೆಯ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಬೆಂಗಳೂರು ನಿವಾಸದಲ್ಲಿ ಭೇಟಿ ಮಾಡಿ, ಗಂಟೆಗಟ್ಟಲೆ ಮಾಜಿ ಸಚಿವ ರೇಣುಕಾಚಾರ್ಯ ಏನು ಚರ್ಚೆ ಮಾಡಿದ್ದಾರೆ ಎಂದು ಹೊನ್ನಾಳಿ ಬಿಜೆಪಿ ಮುಖಂಡರಾದ ಎ.ಬಿ.ಹನುಮಂತಪ್ಪ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷನಿಂದ ಹಲ್ಲೆಗೊಳಗಾದ ಪಾಲಾಕ್ಷಪ್ಪ ಮುಖಾಂತರ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಿ, ಠಾಣೆ ಮುಂದೆ ಪ್ರತಿಭಟಿಸಿದ್ದ ರೇಣುಕಾಚಾರ್ಯ, ಬೆಂಗಳೂರಿನ ಸದಾಶಿವ ನಗರದ ಎಸ್.ಎಸ್. ಮಲ್ಲಿಕಾರ್ಜುನರ ಮನೆಗೆ ಹೋಗಿ ಬಂದ ನಂತರ ಪಾಲಾಕ್ಷಪ್ಪ ಕೊಟ್ಟಿದ್ದ ಕೇಸ್ ಹಿಂಪಡೆಯುವಂತೆ ನೋಡಿಕೊಂಡಿದ್ದು ಏಕೆ ಎಂದರು.ಒಂದೇ ಒಂದು ಸಲವೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ರೇಣುಕಾಚಾರ್ಯ ಚಕಾರ ಎತ್ತಿಲ್ಲ ಏಕೆ? ಕುಶಲೋಪರಿ ಮಾತನಾಡುತ್ತಾ, ರಾಜಕೀಯ ಹೊಂದಾಣಿಕೆ ಮಾಡಿಕೊಂಡು ಬೀದಿಯಲ್ಲಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರದಲ್ಲಿ ಬಂದ್ ಮಾಡುವುದು ಹೋರಾಟವಾ? ನಾಟಕವಾ? ನೆರೆಯ ಹೊಸಪೇಟೆಯಲ್ಲಿ ಯಾವುದೇ ಆಹ್ವಾನವಿಲ್ಲದೇ ಇದ್ದರೂ ಹೋಗಿ ರೇಣುಕಾಚಾರ್ಯ ಸಭೆಯಲ್ಲಿ ಭಾಗಿಯಾಗಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ವ್ಯಕ್ತಿಗೆ ಹೀಗೆ ಹೋಗಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
- - --26ಕೆಡಿವಿಜಿ1:
ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಹೊನ್ನಾಳಿ ತಾಲೂಕು ಮುಖಂಡರಾದ ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.