ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ಡಿ.2ರಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.ಮೂರು ದಿನಗಳ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಂಘಟನೆಗಳ ಮುಖಂಡರೊಂದಿಗೆ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದ್ದು, ದತ್ತಪೀಠಕ್ಕೆ ಬರುವ ಭಕ್ತರಿಗೆ ಮೂಲಭೂತ ಸವಲತ್ತು ಒದಗಿಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯದ ಆದೇಶವನ್ನು ಗಮನದಲ್ಲಿಟ್ಟು ಹಿಂದಿನ ವರ್ಷದಂತೆ ಈ ಬಾರಿಯೂ ಆಚರಣೆಗೆ ಅವಕಾಶ ನೀಡಲಾಗುವುದು. ರಾಜ್ಯದ ವಿವಿಧೆಡೆಯಿಂದ ಭಕ್ತರು ಶ್ರೀ ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಡಿ.1ರಿಂದ ಡಿ.5ರವರೆಗೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಗಿರಿ ಪ್ರದೇಶಕ್ಕೆ ಬರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಕೋರಿಕೊಳ್ಳಲಾಗಿದೆ ಎಂದರು.5 ಸಾವಿರ ಪೊಲೀಸರ ನಿಯೋಜನೆ:
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಯವರು ಡಿ.2ರಂದು ಸಂಕೀರ್ತನಾ ಯಾತ್ರೆ, ಡಿ.3ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ. ಡಿ.4ರಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಲಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಅಮಟೆ ಹೇಳಿದರು.ದತ್ತ ಜಯಂತಿಯ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳು ಚಿಕ್ಕಮಗಳೂರಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸುವ ಜತೆಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಗಾಗಿ ಬಂದೋಬಸ್ತ್ ವಿಷಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಗೃಹ ರಕ್ಷಕದಳ ಸೇರಿದಂತೆ ಒಟ್ಟು 5 ಸಾವಿರ ಮಂದಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ. ಅವರು ನ. 30 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದರು.
ಈ ಬಾರಿ ಕಮಾಂಡೆಂಟ್ ಕಂಟ್ರೋಲ್ ವೆಹಿಕಲ್, ಸೆಷಲ್ ಆಕ್ಷನ್ ಪೋರ್ಸ್, ಆರ್‌ಎಎಫ್ ಪೋರ್ಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ತವ್ಯಕ್ಕೆ 45 ವರ್ಷದೊಳಗಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದರ ಜತೆಗೆ 15 ದ್ರೋಣ್ ಕ್ಯಾಮರಗಳು, 500ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯ ಗಡಿ ಭಾಗದಲ್ಲಿ ಒಟ್ಟು 7 ಜಿಲ್ಲೆಗಳು ಇವೆ. ಅವುಗಳ ಪ್ರವೇಶ ದ್ವಾರದಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಅವುಗಳು ನ. 30 ರಿಂದ ಕಾರ್ಯ ನಿರ್ವಹಿಸಲಿವೆ. ಜಿಲ್ಲಾಡಳಿದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 68 ಮಂದಿ ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿದೆ ಎಂದ ಅವರು, ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ಶೋಭಾಯಾತ್ರೆಯ ಮಾರ್ಗದಲ್ಲಿ 20 ವಾಚ್ ಟವರ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಜರಿದ್ದರು.