ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Jan 12, 2026, 03:00 AM IST
ಕರಾವಳಿಯಲ್ಲಿ ಪ್ರವಾಸೋದ್ಯಮ ಹೂಡಿಕೆಗೆ ಸಹಿ ಹಾಕಿರುವ ಹೊಟೇಲ್‌ ಉದ್ದಿಮೆದಾರರಿಗೆ ತಿಳಿವಳಿಕೆ ಪತ್ರ ಹಸ್ತಾಂತರಿಸುತ್ತಿರುವ ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಸರ್ಕಾರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಹೂಡಿಕೆ ಮಾಡಲು ಮುಂದೆ ಬರುವವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಸರ್ಕಾರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಹೂಡಿಕೆ ಮಾಡಲು ಮುಂದೆ ಬರುವವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರವಾಸೋದ್ಯಮ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 5 ವರ್ಷದ ನೀತಿ ಘೋಷಣೆ ಮಾಡಿ ಜಾರಿಗೆ ತಂದಿದ್ದೇವೆ. ಡಿಸಿಎಂ ಡಿ.ಕೆ.ಶಿವಕುಮಾರ್‌, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಇವರು ಈ ಭಾಗದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಎಲ್ಲರ ಸಹಕಾರದಿಂದ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದರು.ಬೆಂಗಳೂರು ಹೊರತುಪಡಿಸಿದರೆ ಆದಾಯ ಹೆಚ್ಚು ಇರುವ ನಗರ ಮಂಗಳೂರು. ದೇಶದಲ್ಲಿ ಮಹಾರಾಷ್ಟ್ರ ಬಿಟ್ಟರೆ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟ ದ್ವಿತೀಯ ಸ್ಥಾನದಲ್ಲಿದೆ ಎಂದ ಸಿಎಂ, 320 ಕಿ.ಮೀ. ಉದ್ದದ ಈ ಕರಾವ‍ಳಿಯಲ್ಲಿ ಶಿಕ್ಷಣ, ಬ್ಯಾಂಕಿಂಗ್‌, ಆರೋಗ್ಯ, ಸಂಸ್ಕೃತಿ ಎಲ್ಲವೂ ಇದೆ, ಆದರೆ ಪ್ರವಾಸೋದ್ಯಮ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ. ಕೇರಳಕ್ಕಿಂತ ಕರ್ನಾಟಕ ಪ್ರವಾಸೋದ್ಯಮದಲ್ಲಿ ಮುಂದೆ ಇರಬೇಕು. ಹಾಗಾದಾಗ ಮಾತ್ರ ಆದಾಯದಲ್ಲೂ ಕರಾವಳಿ ಕರ್ನಾಟಕ ಮುಂಚೂಣಿ ದಾಖಲಿಸಲು ಸಾಧ್ಯವಿದೆ ಎಂದರು. ಶಾಂತಿ ಸ್ಥಾಪನೆ ಉಳಿಸಿಕೊಳ್ಳಿ:

ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರ ಅಂತಹ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಸದ್ಯ ಇಲ್ಲಿ ಶಾಂತಿ ಸ್ಥಾಪನೆಯಾಗಿದ್ದು, ಇದು ಹೀಗೆಯೇ ಮುಂದುವರಿಯಬೇಕು. ಜಾತಿ, ಧರ್ಮಗಳ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಎಲ್ಲ ಧರ್ಮಗಳೂ ಪ್ರೀತಿಯ ಹೊರತು ದ್ವೇಷವನ್ನು ಬೋಧಿಸಿಲ್ಲ. ಕರಾವಳಿ ಯಾವಾಗಲೂ ಕುವೆಂಪು ಕಲ್ಪನೆಯ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು. ಇದಕ್ಕೆ ಪೂರಕವಾದ ಎಲ್ಲ ಸಹಕಾರವನ್ನೂ ಸರ್ಕಾರ ನೀಡುತ್ತದೆ ಎಂದರು.

ಸಿಆರ್‌ಝಡ್‌ ಸರಳೀಕರಣಕ್ಕೆ ದೆಹಲಿ ಭೇಟಿ:

ಕರ್ನಾಟಕ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಅನಾನುಕೂಲವಾಗಿರುವ ಸಿಆರ್‌ಝಡ್‌(ಕರಾವ‍ಳಿ ನಿಯಂತ್ರಣ ವಲಯ) ನಿಯಮವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಸಿಎಂ ಜೊತೆ ದೆಹಲಿಗೆ ನಿಯೋಗ ಕರೆದುಕೊಂಡು ಹೋಗುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕೇರಳ ಹಾಗೂ ಗೋವಾದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಲಭಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಸಿಆರ್‌ಝಡ್‌ ನಿಯಮ ಅಡ್ಡಿಯಾಗುತ್ತಿದೆ. ಹೀಗಾಗಿ ಈ ನಿಯಮ ಸರಳೀಕರಣಗೊಳಿಸಲು ಕರಾವಳಿ ಜಿಲ್ಲೆಗಳ ಸಂಸದರು, ಉಸ್ತುವಾರಿ ಸಚಿವರು, ಶಾಸಕರನ್ನು ಸಿಎಂ ನೇತೃತ್ವದಲ್ಲಿ ದೆಹಲಿಗೆ ಕರೆದುಕೊಂಡು ಹೋಗಲಾಗುವುದು. ಅಲ್ಲಿ ಕೇಂದ್ರ ಅರಣ್ಯ ಹಾಗೂ ಪ್ರವಾಸೋದ್ಯಮ ಸಚಿವರ ಜೊತೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಪ್ರತ್ಯೇಕ ನೋಡೆಲ್‌ ಏಜೆನ್ಸಿ:

ಕರಾವಳಿಯಲ್ಲಿ 22 ಬೀಚ್‌ ಹಾಗೂ 30 ಪ್ರಮುಖ ಧಾರ್ಮಿಕ ಕೇಂದ್ರಗಳಿವೆ. ಇದರಿಂದಾಗಿ ಕರಾವಳಿಯಲ್ಲಿ ಪ್ರವಾಸೋದ್ಯಮ ಹೂಡಿಕೆಯನ್ನು ಪ್ರೋತ್ಸಾಹಿಸಲು ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ಮಧ್ಯರಾತ್ರಿ ವರೆಗೂ ಪ್ರವಾಸೋದ್ಯಮ ಪೂರಕ ಚಟುವಟಿಕೆ ನಡೆಸುವಂತಾಗಲು ಕರಾವಳಿಗೆ ಪ್ರತ್ಯೇಕವಾಗಿ ನೋಡೆಲ್‌ ಅಧಿಕಾರಿ ಹಾಗೂ ಏಜೆನ್ಸಿ ನೇಮಕಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕರಾವಳಿ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸುವಂತಾಗಬೇಕು. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಜಾಗತಿಕವಾಗಿ ಕರಾವಳಿ ಆಕರ್ಷಣೆಗೆ ಬೇಕಾದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಹೂಡಿಕೆದಾರರಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್‌ ವ್ಯವಸ್ಥೆ ಜಾರಿಗೆ ತರಬೇಕು. ಇಲ್ಲಿಗೆ ಪ್ರತ್ಯೇಕ ಪ್ಯಾಕೇಜ್‌ ರೂಪುಗೊಳ್ಳಬೇಕು. ಸಿಆರ್‌ಝಡ್‌ ನಿಯಮ ಸರಳೀಕರಣವಾಗಬೇಕು ಎಂದು ಆಗ್ರಹಿಸಿದರು.

ಸ್ಪೀಕರ್‌ ಯು.ಟಿ.ಖಾದರ್‌, ಸಿಎಂ ರಾಜಕೀಯ ಸಲಹೆಗಾರ ನಜೀರ್‌ ಅಹ್ಮದ್‌, ಶಾಸಕರಾದ ಅಶೋಕ್‌ ಕುಮಾರ್‌ ರೈ, ಗುರ್ಮೆ ಸುರೇಶ್ ಶೆಟ್ಟಿ, ಐವನ್‌ ಡಿಸೋಜಾ, ಮಂಜುನಾಥ ಭಂಡಾರಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತಿಲೋಕ್‌ಚಂದ್ರ ಮತ್ತಿತರರಿದ್ದರು.

ಕರ್ನಾಟಕ ಟೂರಿಸಂ ಮಾದರಿಯಾಗಲಿ: ಸಚಿವ ದಿನೇಶ್‌ ಗೂಂಡೂ ರಾವ್‌

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸ್ವಾಗತಿಸಿ, ಪ್ರಾಸ್ತಾವಿಕದಲ್ಲಿ, ಪ್ರವಾಸೋದ್ಯಮದಲ್ಲಿ ‘ಕರ್ನಾಟಕ ಟೂರಿಸಂ’ ಮಾದರಿಯಾಗಬೇಕು. ಕರಾವಳಿಯ ಒಂದೆರಡು ಕಡೆ ಪ್ರವಾಸೋದ್ಯಮ ಯೋಜನೆಗಳನ್ನು ಹಮ್ಮಿಕೊಂಡರೆ ಸಹಜವಾಗಿ ಟೂರಿಸಂ ಹೂಡಿಕೆಗೆ ಅನೇಕರು ಮುಂದೆ ಬಂದು ಅಭಿವೃದ್ಧಿಯಾಗಲು ಸಾಧ್ಯವಿದೆ. ಈಗಾಗಲೇ ಹೊಟೇಲ್‌ ಮಾಲೀಕರ ಜೊತೆ ಹೂಡಿಕೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದರು.

ವ್ಯಾಸಂಗಕ್ಕೆ ವಿದೇಶದಿಂದ ಇಲ್ಲಿಗೆ, ಉದ್ಯೋಗಕ್ಕೆ ಅಲ್ಲಿಗೆ!

ಕರಾವಳಿ ಜಿಲ್ಲೆ ಶೈಕ್ಷಣಿಕವಾಗಿಯೂ ಸಾಕಷ್ಟು ಕೊಡುಗೆ ನೀಡಿದೆ ಎಂದ ಸಿಎಂ ಸಿದ್ದರಾಮಯ್ಯ ಅವರು ಇಲ್ಲಿನ ವಿಚಿತ್ರ ಸಂಗತಿಯೊಂದನ್ನು ಭಾಷಣದಲ್ಲಿ ಪ್ರಸ್ತಾಪಿಸಿದರು.

ಸಾಕಷ್ಟು ಶಿಕ್ಷಣ ಸಂಸ್ಥೆಗಳಿರುವ ಕರಾವಳಿಗೆ ವಿದ್ಯಾಭ್ಯಾಸಕ್ಕೆ ದೇಶ, ವಿದೇಶಗಳಿಂದ ಆಗಮಿಸುತ್ತಾರೆ. ಆದರೆ ಉದ್ಯೋಗಕ್ಕೆ ಇಲ್ಲಿಂದ ದೇಶ, ವಿದೇಶಗಳಿಗೆ ತೆರಳುತ್ತಾರೆ! ಇನ್ನು ಮುಂದೆ ಹೀಗೆ ಆಗಬಾರದು. ಇಲ್ಲಿನವರು ಉದ್ಯೋಗಕ್ಕೆ ಹೊರಗಡೆ ತೆರಳಿದರೆ, ಅವರ ತಂದೆ-ತಾಯಿಯರನ್ನು ನೋಡಿಕೊಳ್ಳುವವರು ಯಾರು? ಇಲ್ಲಿ ಕಲಿತ ಮಂದಿ ಇಲ್ಲಿಯೇ ಉದ್ಯೋಗ ಮಾಡುವಂತಾಗಬೇಕು. ಹೊರಗೆ ಉದ್ಯೋಗ ಮಾಡುತ್ತಿದ್ದರೆ, ಇಲ್ಲಿಯೂ ಹೂಡಿಕೆ ಮಾಡಿ ಕರಾವಳಿಯನ್ನು ಪ್ರವಾಸೋದ್ಯಮ ಭೂಪಟದಲ್ಲಿ ವಿಶ್ವಮಾನ್ಯ ಮಾಡುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭ ಕರ್ನಾಟಕ ಟೂರಿಸಂ ಇಲಾಖೆಯ ವೆಬ್‌ಸೈಟ್‌ನ್ನು ಸಿಎಂ ಗುಂಡಿ ಅದುಮುವ ಮೂಲಕ ಅನಾವರಣಗೊಳಿಸಿದರು.

ಉತ್ತರ ಕರ್ನಾಟಕ ಜಿಲ್ಲಾಡಳಿತ ನಡೆಸಿದ ಪ್ರವಾಸೋದ್ಯಮ ಕುರಿತ ಅಧ್ಯಯನ ವರದಿಯನ್ನು ಸಿಎಂಗೆ ಸಲ್ಲಿಸಲಾಯಿತು. ಕರಾವ‍ಳಿ ಜಿಲ್ಲೆಯ ಹೊಟೇಲ್‌ ಉದ್ಯಮಿಗಳ ಜೊತೆ ಸರ್ಕಾರದ ಒಪ್ಪಂದದ ತಿಳಿವಳಿಕೆ ಪತ್ರವನ್ನು ಹಸ್ತಾಂತರಿಸಲಾಯಿತು.

ಪಣಂಬೂರು ಬೀಚ್‌ನಲ್ಲಿ ನಡೆಯಲಿರುವ ಗಾಳಿಪಟ ಉತ್ಸವದ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಕರಾವಳಿಯಲ್ಲಿ ಅನೇಕ ಮಂದಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದು ಸಹಿ ಹಾಕಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ನೆಲೆಯಲ್ಲಿ ಯಾರೇ ಮುಂದೆ ಬಂದರೂ ಸರ್ಕಾರ ಸಹಕಾರ ನೀಡಲಿದೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ