ಶಾಸಕರ ಸಮಸ್ಯೆ ಆಲಿಸಿದ ಸಿಎಂ ಸಿದ್ದು

KannadaprabhaNewsNetwork |  
Published : Jul 30, 2025, 12:46 AM IST
CM (7) | Kannada Prabha

ಸಾರಾಂಶ

ಹೈಕಮಾಂಡ್‌ ಸೂಚನೆ ಮೇರೆಗೆ ಸ್ವಪಕ್ಷದ ಶಾಸಕರ ಸಮಸ್ಯೆ ಆಲಿಸುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದು, ಮೊದಲ ದಿನದ ಸಭೆಯಲ್ಲಿ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಿದ್ದರಾಮಯ್ಯ ಅವರು ಶಾಸಕರಿಗೆ ಪಾಠ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೈಕಮಾಂಡ್‌ ಸೂಚನೆ ಮೇರೆಗೆ ಸ್ವಪಕ್ಷದ ಶಾಸಕರ ಸಮಸ್ಯೆ ಆಲಿಸುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದು, ಮೊದಲ ದಿನದ ಸಭೆಯಲ್ಲಿ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಿದ್ದರಾಮಯ್ಯ ಅವರು ಶಾಸಕರಿಗೆ ಪಾಠ ಮಾಡಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆ ನಡೆಸಿ ಸಮಸ್ಯೆ ಆಲಿಸಿದ ನಂತರ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ದೂರುದುಮ್ಮಾನ ಆಲಿಸಲು ನಾಲ್ಕು ದಿನಗಳ ಸಭೆಗೆ ಮಂಗಳವಾರ ಚಾಲನೆ ನೀಡಿದ್ದಾರೆ. ವಿಧಾನಸೌಧದ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ನಡೆದ ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ 22 ಶಾಸಕರು ಮತ್ತು ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ಕ್ಷೇತ್ರವಾರು ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಕುರಿತು ಸಿದ್ದರಾಮಯ್ಯ ಅವರು ಶಾಸಕರಿಂದ ಮಾಹಿತಿ ಪಡೆದರು. ಇದೇ ವೇಳೆ ಯಾವೆಲ್ಲ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನಕೊಡಬೇಕು ಎಂಬುದರ ಬಗ್ಗೆಯೂ ಶಾಸಕರಿಗೆ ಸೂಚನೆ ನೀಡಿದ್ದಾರೆ.

50 ಕೋಟಿ ರು. ಸರಿಯಾಗಿ ಬಳಸಿಕೊಳ್ಳಿ:

ಅನುದಾನ ವಿಚಾರವಾಗಿ ಶಾಸಕರ ಅಸಮಾಧಾನ ತಣಿಸಲು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ತಲಾ 50 ಕೋಟಿ ರು. ಅನುದಾನ ನಿಗದಿ ಮಾಡಲಾಗಿದೆ. ಆ ಅನುದಾನ ಯಾವ ರೀತಿ ಬಳಕೆ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಸೂಚನೆಗಳನ್ನು ನೀಡಿದ್ದಾರೆ. ರಸ್ತೆ, ಸೇತುವೆ ನಿರ್ಮಾಣ ಸೇರಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ 37.50 ಕೋಟಿ ರು. ಮೊತ್ತದ ಕ್ರಿಯಾಯೋಜನೆ ರೂಪಿಸಬೇಕು ಹಾಗೂ ಉಳಿದ 12.50 ಕೋಟಿ ರು.ಗಳನ್ನು ತಮ್ಮ ವಿವೇಚನಾಧಿಕಾರದ ಕಾಮಗಾರಿಗೆ ಬಳಕೆ ಮಾಡುವಂತೆ ಮತ್ತೊಮ್ಮೆ ಸೂಚಿಸಿದ್ದಾರೆ.

ಬಾಕಿ ಅನುದಾನ, ಕಾಮಗಾರಿ ಪ್ರಗತಿ ಬಗ್ಗೆ ಚರ್ಚೆ:

ಪ್ರಮುಖ ಅಭಿವೃದ್ಧಿ ಕೆಲಸಗಳ ಸ್ಥಿತಿಗತಿ, ಕೃಷಿ ಚಟುವಟಿಕೆ ಮತ್ತು ಬಿಡುಗಡೆಯಾಗಿರುವ ಅನುದಾನದಲ್ಲಿ ಖರ್ಚಾಗಿರುವ ಮೊತ್ತದ ಪ್ರಮಾಣ ಹಾಗೂ ಕಾಮಗಾರಿ ಪೂರ್ಣಗೊಳಿಸಲು ಬೇಕಾಗುವ ಕಾಲಾವಧಿ ಬಗ್ಗೆ ಸಿದ್ದರಾಮಯ್ಯ ಶಾಸಕರಿಂದ ಮಾಹಿತಿ ಪಡೆದರು. ಕಾಮಗಾರಿ ವಿಳಂಬವಾಗುತ್ತಿದ್ದರೆ ಅದಕ್ಕೆ ಕಾರಣ ತಿಳಿಸುವಂತೆಯೂ ಸೂಚಿಸಿದರು. ಜತೆಗೆ ಸಂಬಂಧಪಟ್ಟ ಇಲಾಖಾ ಸಚಿವರು ಅಥವಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತೆ ಮಾಡುವ ಹೊಣೆ ಶಾಸಕರದ್ದೇ ಎಂಬುದನ್ನು ಸೂಚಿಸಿದರು. ಇದೇ ವೇಳೆ ಬಜೆಟ್‌ನಲ್ಲಿ ಘೋಷಿಸಲಾಗಿರುವ ಯೋಜನೆಗಳ ಸ್ಥಿತಿಗತಿ, ಹಾಗೆಯೇ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ (ಕೆಲ್ಯಾಡ್‌) ಬಳಕೆ ವಿವರವನ್ನು ಪಡೆದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತಂತೆಯೂ ಮಾಹಿತಿ ಕೇಳಿದರು.

ಇಂದು 10 ಜಿಲ್ಲೆಗಳ ಶಾಸಕರೊಂದಿಗೆ ಸಭೆ: ಎರಡನೇ ದಿನವಾದ ಬುಧವಾರ 10 ಜಿಲ್ಲೆಗಳ ಕಾಂಗ್ರೆಸ್‌ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಉತ್ತರಕನ್ನಡ ಜಿಲ್ಲೆಯ ಶಾಸಕರೊಂದಿಗೆ ಸಮಾಲೋಚಿಸಲಿದ್ದಾರೆ.-ಬಾಕ್ಸ್‌-

ತುಮಕೂರು ಶಾಸಕರ ನಡುವೆ ವಾಗ್ವಾದ:

ಸಿಎಂ ಜತೆಗಿನ ಸಭೆಯಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಯ ಶಾಸಕರ ನಡುವಿನ ಅಸಮಾಧಾನ ಬಹಿರಂಗಗೊಂಡ ಪ್ರಸಂಗ ನಡೆಯಿತು. ಪ್ರಮುಖವಾಗಿ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್‌) ಅಧ್ಯಕ್ಷ ಸ್ಥಾನ ವಿಚಾರವಾಗಿ ಸಚಿವ ಕೆ.ಎನ್‌.ರಾಜಣ್ಣ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್‌ (ವಾಸು) ನಡುವಿನ ಮುನಿಸು ಸಿಎಂ ಎದುರು ಸ್ಫೋಟಗೊಂಡಿತು. ತುಮುಲ್‌ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್‌ ಪತ್ನಿ ಆಕಾಂಕ್ಷಿಯಾಗಿದ್ದರು. ಅದನ್ನು ತಪ್ಪಿಸಿದ್ದ ರಾಜಣ್ಣ, ಪಾವಗಡ ಶಾಸಕ ವೆಂಕಟೇಶ್‌ ರನ್ನು ಅಧ್ಯಕ್ಷರಾಗುವಂತೆ ಮಾಡಿದ್ದರು. ಈ ವಿಚಾರ ಸಿದ್ದರಾಮಯ್ಯ ಎದುರಲ್ಲಿ ಚರ್ಚೆಗೆ ಬಂದಿದ್ದು, ಶ್ರೀನಿವಾಸ್‌ ಮತ್ತು ರಾಜಣ್ಣ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಮತ್ತೊಂದು ವಿಚಾರದಲ್ಲಿ ರಾಜಣ್ಣ ಮತ್ತು ಕುಣಿಗಲ್‌ ಶಾಸಕ ಡಾ.ರಂಗನಾಥ್‌ ನಡುವೆಯೂ ವಾಗ್ವಾದ ನಡೆದಿದೆ. ಈ ವೇಳೆ ರಾಜಣ್ಣ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಂಗನಾಥ್‌ ಪಕ್ಷ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ಅಸಮಧಾನಗೊಂಡ ರಂಗನಾಥ್‌, ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಕೊನೆಗೆ ಪರಿಸ್ಥಿತಿಯನ್ನರಿತ ಸಿಎಂ, ರಂಗನಾಥ್‌ರನ್ನು ಸಮಾಧಾನಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಕೋಟ್‌ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ 50 ಕೋಟಿ ರು. ಅನುದಾನ ಬಳಕೆ ಕುರಿತು ಚರ್ಚೆ ಮಾಡಲಾಗಿದೆ. ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಕುರಿತು ಸಮಾಲೋಚನೆ ನಡೆಸಲಾಗಿದೆ. ನಮ್ಮ ಜಿಲ್ಲೆಯಲ್ಲಿನ ಸಣ್ಣಪುಟ್ಟ ಗೊಂದಲಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲರೂ ಒಟ್ಟಾಗಿದ್ದು, ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಅವರಿಗೂ ತಿಳಿಸಿದ್ದೇವೆ.- ಡಾ. ಜಿ. ಪರಮೇಶ್ವರ್‌ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ---ಹಂತಹಂತವಾಗಿ ಅಭಿವೃದ್ಧಿ ಕೆಲಸ ಮಾಡುವ ಕುರಿತು ಸಿಎಂ ಹೇಳಿದ್ದಾರೆ. ಕ್ಷೇತ್ರದ ಸಮಸ್ಯೆ ಮತ್ತು ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗಿದೆ. ನೀರಾವರಿ ವಿಚಾರವಾಗಿ ಶಾಸಕರು ಬೇಡಿಕೆಯಿಟ್ಟಿದ್ದು, ಅದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಕೆ. ವೆಂಕಟೇಶ್‌ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ---ಅಭಿವೃದ್ಧಿ ಕಾಮಗಾರಿಗಳು, ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೂ ತಂದಿದ್ದೇವೆ. ಮೈಸೂರಿಗೆ ಈಗಾಗಲೇ ಹೆಚ್ಚಿನ ಅನುದಾನ ನೀಡಿದ್ದಾರೆ. ಜತೆಗೆ ಶಾಸಕರಿಗೆ ನೀಡಲಾಗುವ ಅನುದಾನ ಬಳಕೆ ಬಗ್ಗೆ ಚರ್ಚೆ ಮಾಡಲಾಗಿದೆ.ಡಾ. ಎಚ್.ಸಿ.ಮಹದೇವಪ್ಪಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

---

ಶಾಸಕರ ಪ್ರಮುಖ ಬೇಡಿಕೆಗಳು:- ಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಬೇಕು-ರಸ್ತೆ ಅಭಿವೃದ್ಧಿ ಸೇರಿ ಮತ್ತಿತರ ಮೂಲಸೌಕರ್ಯ ಕಾಮಗಾರಿಗಳಿಗೆ ಅನುದಾನ ನೀಡಬೇಕು- 50 ಕೋಟಿ ರು. ಅನುದಾನ ಹೊರತುಪಡಿಸಿ ಬೃಹತ್‌ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಅನುದಾನ ಬೇಕು.

ನಾಡಿದ್ದು ಮತ್ತೆ ಸಿಎಂ ಸಿದ್ದು ದಿಲ್ಲಿಗೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದು 1 ತಿಂಗಳಲ್ಲಿ ಅವರು ರಾಷ್ಟ್ರರಾಜಧಾನಿಗೆ ಅವರ ಮೂರನೇ ಪ್ರವಾಸವಾಗಿದ್ದು, ಹೈಕಮಾಂಡ್ ವರಿಷ್ಠ ರಾಹುಲ್ ಗಾಂಧಿ ಭೇಟಿಯಾಗುವರೇ ಎಂಬ ಕುತೂಹಲ ಹುಟ್ಟುಹಾಕಿದೆ.

ಸಿಎಂ ಆ.1ರ ಸಂಜೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಆ.2ರಂದು ಎಐಸಿಸಿ ಕಾನೂನು, ಮಾಹಿತಿ ಹಕ್ಕು ವಿಭಾಗ ವಿಜ್ಞಾನ ಭವನದಲ್ಲಿ ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಭಾಗವಹಿಸುವರು. ಎಐಸಿಸಿ ಅಧ್ಯಕ್ಷ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತಿತರ ವರಿಷ್ಠರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ರಾಹುಲ್‌ರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಸಭೆ ನಡೆಸಲಿದ್ದಾರೆಯೇ ಎನ್ನುವ ಬಗ್ಗೆ ಕುತೂಹಲವಿದೆ.

ಸುರ್ಜೇವಾಲಾ ಅವರ ಬುಲಾವ್ ಮೇರೆಗೆ ಸಿಎಂ ಹಾಗೂ ಡಿಸಿಎಂ ಜು.10ರಂದು ದೆಹಲಿಗೆ ತೆರಳಿದ್ದರು. ಈ ವೇಳೆ ಇಬ್ಬರೂ ಪ್ರತ್ಯೇಕವಾಗಿ ರಾಹುಲ್‌ರ ಭೇಟಿಗೆ ಅವಕಾಶ ಕೋರಿದ್ದರು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಇದಾದ ಬಳಿಕ ಮತ್ತೆ ಜು.24ರಂದು ಸಿಎಂ, ಡಿಸಿಎಂ ದಿಲ್ಲಿಗೆ ತೆರಳಿ ಪರಿಷತ್‌ ಸ್ಥಾನಗಳಿಗೆ ಹೆಸರು, ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಪಟ್ಟಿ ಅಂತಿಮಗೊಳಿಸಿಕೊಂಡು ಬಂದಿದ್ದರು. ಈ ಸಂದರ್ಭದಲ್ಲೂ ರಾಹುಲ್ ಭೇಟಿ ಸಾಧ್ಯವಾಗಿರಲಿಲ್ಲ. ಈಗ ಆ.1ರಂದು ದೆಹಲಿಗೆ ತೆರಳಲಿದ್ದು, ರಾಹುಲ್ ಭೇಟಿಯಾಗುವರೇ ಎಂಬ ಕುತೂಹಲ ನಿರ್ಮಾಣವಾಗಿದೆ.ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ‘ಬೆಂಗಳೂರು ಟೆಕ್ ಶೃಂಗಸಭೆ 2025’ರ ಮುನ್ನುಡಿಯಾಗಿ ಆಯೋಜಿಸಿರುವ ‘ಬ್ರಿಡ್ಜ್‌ ಟು ಬೆಂಗಳೂರು’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ದೇಶಗಳ ರಾಯಭಾರಿಗಳೊಂದಿಗೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಲಿದ್ದಾರೆ.ನಾಳೆ ಡಿಸಿಎಂ ಡಿಕೆಶಿಯೂ ದಿಲ್ಲಿಗೆ:

ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಮತ್ತು ನಾನು ಜು. 31ಕ್ಕೆ ದೆಹಲಿಗೆ ತೆರಳುತ್ತಿದ್ದೇವೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ವಿಚಾರವಾಗಿ ದೆಹಲಿಗೆ ಭೇಟಿ ನೀಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು. ದೆಹಲಿ ಭೇಟಿ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಭಾರಿಗಳನ್ನು ಭೇಟಿ ಮಾಡಲು ನಾವು ಜು. 31ಕ್ಕೆ ದೆಹಲಿಗೆ ತೆರಳುತ್ತಿದ್ದೇವೆ. ಆ. 2ರಂದು ಅಲ್ಲಿನ ವಿಜ್ಞಾನ ಭವನದಲ್ಲಿ ಸಂವಿಧಾನ ರಕ್ಷಣೆ ಸವಾಲುಗಳು ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ವಿಚಾರಕ್ಕಾಗಿ ಹೋಗುತ್ತಿಲ್ಲ ಎಂದರು.ಇಂದು 10 ಜಿಲ್ಲೆಗಳ ಶಾಸಕರೊಂದಿಗೆ ಸಭೆ:ಎರಡನೇ ದಿನವಾದ ಬುಧವಾರ 10 ಜಿಲ್ಲೆಗಳ ಕಾಂಗ್ರೆಸ್‌ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಉತ್ತರಕನ್ನಡ ಜಿಲ್ಲೆಯ ಶಾಸಕರೊಂದಿಗೆ ಸಮಾಲೋಚಿಸಲಿದ್ದಾರೆ.ಮುಖ್ಯಮಂತ್ರಿ ಅವರ ಸಭೆಗೆ ನಿಮ್ಮನ್ನು ಆಹ್ವಾನಿಸದಿರುವ ಕುರಿತು ಬಿಜೆಪಿ ಟೀಕಿಸುತ್ತಿರುವ ಪ್ರಶ್ನೆಗೆ ಉತ್ತರಿಸಿ, ವಿರೋಧ ಪಕ್ಷಗಳು ನನ್ನ ಬಗ್ಗೆ ಅಷ್ಟಾದರೂ ಕಾಳಜಿ ಇಟ್ಟುಕೊಂಡಿದ್ದಾರಲ್ಲ. ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು.ಸಿಎಂ ಸಭೆಗೆ ಡಿಸಿಎಂ ಹಾಜರು:

ತುಮಕೂರು ಜಿಲ್ಲೆಯ ಶಾಸಕರ ಸಭೆ ನಡೆಯುವ ಸಂದರ್ಭದಲ್ಲಿಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಭೆಗೆ ಹಾಜರಾದರು. ಸಭೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರ ಗೊಂದಲಗಳಿಗೆ ಡಿ.ಕೆ. ಶಿವಕುಮಾರ್‌ ಉತ್ತರಿಸಿದ್ದಾರೆ. ಅದರ ಜತೆಗೆ ಆ. 4ರಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ರಾಜ್ಯಕ್ಕಾಗಮಿಸುತ್ತಿರುವ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು ಎಂದು ಮೂಲಗಳು ಹೇಳಿವೆ.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’