ಸಿಎಂ ಸಿದ್ದು ಸ್ವಪಕ್ಷದವರ ಆರೋಪಕ್ಕೆ ಉಸಿರೆತ್ತಿಲ್ಲ

KannadaprabhaNewsNetwork |  
Published : Jun 23, 2025, 11:46 PM IST
ಸುರೇಶಗೌಡ ಸುದ್ದಿಗೋಷ್ಠಿ | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಈಗಷ್ಟೇ ಎರಡು ವರ್ಷ ತುಂಬಿದೆ. ಆಗಲೇ ಇದು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಅದಕ್ಷ ಮತ್ತು ಜನ ವಿರೋಧಿ ಸರ್ಕಾರ ಎಂದು ವಿರೋಧ ಪಕ್ಷಗಳು ಅಲ್ಲ, ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಈಗಷ್ಟೇ ಎರಡು ವರ್ಷ ತುಂಬಿದೆ. ಆಗಲೇ ಇದು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಅದಕ್ಷ ಮತ್ತು ಜನ ವಿರೋಧಿ ಸರ್ಕಾರ ಎಂದು ವಿರೋಧ ಪಕ್ಷಗಳು ಅಲ್ಲ, ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಮಾತನ್ನು ನಾವು ಹೇಳಿದರೆ ನಾವು ರಾಜಕೀಯ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಮಾತೆತ್ತಿದರೆ ಅವರು ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಎಂದು ಟೀಕಿಸುತ್ತಾರೆ. ಆದರೆ, ಈಗ ಅವರ ಪಕ್ಷದವರೇ ಮಾಡುವ ಆರೋಪದ ಬಗ್ಗೆ ಅವರು ಉಸಿರೇ ಎತ್ತಿಲ್ಲ ಎಂದರು. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿದ್ದರಾಮಯ್ಯನವರ ಪರಮಾಪ್ತರೂ ಮತ್ತು ಸಮಾಜವಾದಿಯೂ ಆಗಿರುವ ಬಿ.ಆರ್‌. ಪಾಟೀಲರು ನೇರವಾಗಿ ಆರೋಪ ಮಾಡಿದ್ದಾರೆ. ಅವರು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಆಪ್ತ ಕಾರ್ಯಯದರ್ಶಿ ಸರ್ಪರಾಜ್‌ ಜತೆಗೆ ಮೊಬೈಲ್‌ನಲ್ಲಿ ಮಾತನಾಡಿದ್ದುದನ್ನು ಅವರೇ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ. ಇಂಥ ಸ್ಪೋಟಕ ಸುದ್ದಿಯನ್ನು ಆಡಳಿತ ಪಕ್ಷದ ಹಿರಿಯ ಸಚಿವರೇ ಬಿಡುಗಡೆ ಮಾಡಿದ್ದರೂ ಇದುವರೆಗೆ ಸಿದ್ದರಾಮಯ್ಯ ತುಟಿ ಬಿಚ್ಚಿಲ್ಲ. ಇದನ್ನು ನಾವು ಮಾಡಿದ್ದರೆ ನಾವು ಮುಸ್ಲಿಂ ವಿರೋಧಿ ಎಂದು ಇದೇ ಸಿದ್ದರಾಮಯ್ಯ ಹೇಳುತ್ತಿದ್ದರು ಎಂದರು.

ವಸತಿ ಇಲಾಖೆಯ ಮನೆಗಳ ಹಂಚಿಕೆಯಲ್ಲಿ ಶಾಸಕರ ಮಾತಿಗೆ ಬೆಲೆಯಿಲ್ಲ. ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಣ ಕೊಟ್ಟು ಮನೆಗಳನ್ನು ಹಂಚಿಕೊಂಡು ಬರುತ್ತಿದ್ದಾರೆ ಎಂದು ಪಾಟೀಲರು ನೇರವಾಗಿ ಆರೋಪ ಮಾಡಿದ್ದಾರೆ. ಅವರು ಇಷ್ಟಕ್ಕೇ ನಿಂತಿಲ್ಲ. ಈಗ ವೈರಲ್‌ ಆಗಿರುವ ಆಡಿಯೊ ತಮ್ಮದೇ ಎಂದಿದ್ದಾರೆ. ತಮ್ಮ ಆರೋಪ ನಿಜವಲ್ಲ ಎನ್ನುವುದಾದರೆ ತನಿಖೆಯಾಗಲಿ ಎಂದಿದ್ದಾರೆ. ಅವರು ಹೇಳಿ ಮೂರು ದಿನವಾಯಿತು. ಇದುವರೆಗೆ ಸರ್ಕಾರದಿಂದ ಅಧಿಕೃತವಾಗಿ ಯಾವ ಹೇಳಿಕೆಯೂ ಬಿಡುಗಡೆಯಾಗಿಲ್ಲ ಎಂದರು.ಡಿ.ಕೆ. ಶಿವಕುಮಾರ್‌ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರರ ಒಂದೋ ತನಿಖೆಗೆ ಆದೇಶ ಮಾಡಬೇಕು. ಇಲ್ಲವೇ ಬಿ.ಆರ್‌. ಪಾಟೀಲರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದರು.ಈ ಸರ್ಕಾರದಲ್ಲಿ ಲಂಚ ಮತ್ತು ಭ್ರಷ್ಟಾಚಾರ ಹೇಗೆ ಯಾವುದೇ ಲಂಗು ಲಗಾಮು ಇಲ್ಲದೆ ನಡೆದಿದೆ ಎನ್ನುವುದಕ್ಕೆ ಸರ್ಕಾರದಲ್ಲಿ ಇದ್ದವರೇ ಹೀಗೆ ಒಬ್ಬರಾದ ನಂತರ ಒಬ್ಬರು ಸಾಕ್ಷಿ ನುಡಿಯುತ್ತಿದ್ದಾರೆ. ಸಿದ್ದರಾಮಯ್ಯ ಆರಾಮಾಗಿ ಇದ್ದಾರೆ. ಅವರು ಯಾವ ಮುಖ ಇಟ್ಟುಕೊಂಡು ಈ ದೇಶ ಕಂಡ ಅಪ್ರತಿಮ ನಾಯಕ ನರೇಂದ್ರ ಮೋದಿ ಅವರ ವಿರುದ್ಧ ಆರೋಪ ಮಾಡುತ್ತಾರೋ ನನಗಂತೂ ಅರ್ಥ ಆಗುತ್ತಿಲ್ಲ ಎಂದರು.ಮುಖ್ಯಮಂತ್ರಿಗಳು ಏಕೆ ಮೌನವಾಗಿದ್ದಾರೆ ಮತ್ತು ನಿಷ್ಕ್ರಿಯ ಆಗಿದ್ದಾರೆ ಎಂದರೆ ಸ್ವತಃ ಅವರ ವಿರುದ್ಧವೇ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಮಾಡಿದ ಮತ್ತು ತಮ್ಮ ಪತ್ನಿಗೆ ಅಕ್ರಮವಾಗಿ 14 ನಿವೇಶನ ಕೊಡಿಸುವುದರಲ್ಲಿ ಪ್ರಭಾವ ಬೀರಿದ ಆರೋಪ ಇದೆ. ಇದರ ಬಗ್ಗೆ ಇನ್ನೂ ನ್ಯಾಯಾಂಗ ವಿಚಾರಣೆ ನಡೆದಿದೆ. ಹಾಗಿರುವಾಗ ಮುಖ್ಯಮಂತ್ರಿಗಳು ಮೌನಂ ಸಮ್ಮತಿ ಲಕ್ಷಣಂ ಎನ್ನುವ ಹಾಗೆ ತಮ್ಮದೇ ಸರ್ಕಾರದ ವಿರುದ್ಧ ತಮ್ಮ ಪಕ್ಷದವರಿಂದಲೇ ಬರುತ್ತಿರುವ ಆರೋಪಗಳಿಗೆ ಏನೂ ಸಮಜಾಯಿಷಿ ಹೇಳದ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದರು.ಐದು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ರಾಜ್ಯದ ಜನರಿಗೆ ಐದು ನಾಮ ಹಾಕಿರುವ ಈ ಸರ್ಕಾರ ರಾಜೀನಾಮೆ ಕೊಟ್ಟು ತೊಲಗಬೇಕು. ಈಗ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಇಂಥ ಆರೋಪಗಳನ್ನು ಮುಂದೆ ಇಟ್ಟುಕೊಂಡು ನಮ್ಮ ಪಕ್ಷ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ರಾಜ್ಯ ಕಾರ್ಯದರ್ಶಿ ಅಂಬಿಕಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಗೌಡ ಜಿಲ್ಲಾ ವಕ್ತಾರ ಜಗದೀಶ್ ವೇದಮೂರ್ತಿ, ನಂದಿನಾಥ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ