ಕದಾಂಪೂರ ಹೊಲದಲ್ಲಿ ಕುಳಿತು ಮಣ್ಣಿನ ಮಕ್ಕಳ ಮೊರೆ ಆಲಿಸಿದ ಸಿಎಂ

KannadaprabhaNewsNetwork |  
Published : Sep 02, 2026, 03:30 AM IST
1ಎಂಡಿಜಿ1, ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಂಗಳವಾರ ರೈತರೊಂದಿಗೆ ಜಮೀನಿನಲ್ಲಿ ನೆಲದಲ್ಲಿ ಕುಳಿತು ರೈತರ ಸಮಸ್ಯಗಳನ್ನು ಆಲಿಸಿದರು. 1ಎಂಡಿಜಿ1ಎ, ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಂಗಳವಾರ ರೈತರ ಜಮೀನಿಗೆ ಭೇಟಿ ನೀಡಿ ಸೂರ್ಯಕಾಂತಿ ಬೆಳೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ಬಸವರಾಜ ರಾಯರಡ್ಡಿ, ಶಾಸಕ ಎಚ್.ಕೆ.ಪಾಟೀಲ, ಸಿ.ಸಿ.ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಇದ್ದರು. | Kannada Prabha

ಸಾರಾಂಶ

ಮಂಗಳವಾರ ಬರಗಾಲ ಪರಿಸ್ಥಿತಿ ಅರಿಯಲು ಗದಗ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಾಲೂಕಿನ ಕದಾಂಪೂರ ಗ್ರಾಮದ ರೈತ ಶಂಕ್ರಪ್ಪ ಗಾವರವಾಡ ಅವರ ಹೊಲದಲ್ಲಿ ಕುಳಿತು ಸಮಾಧಾನ, ಕಳಕಳಿಯಿಂದ ರೈತರ ಮೊರೆ ಆಲಿಸುವ ಮೂಲಕ ಸರಳತೆ ಮೆರೆದರು.

-ಬರಗಾಲ ವೀಕ್ಷಣೆ ವೇಳೆ ಸರಳತೆ, ಸಮಾಧಾನ, ಕಳಕಳಿ ತೋರಿದ ಸಿಎಂ ಡಿ.ಕೆ.ಶಿವಕುಮಾರಶರಣು ಸೊಲಗಿ/ ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಮುಂಡರಗಿ/ ಡಂಬಳ

ಮಂಗಳವಾರ ಬರಗಾಲ ಪರಿಸ್ಥಿತಿ ಅರಿಯಲು ಗದಗ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಾಲೂಕಿನ ಕದಾಂಪೂರ ಗ್ರಾಮದ ರೈತ ಶಂಕ್ರಪ್ಪ ಗಾವರವಾಡ ಅವರ ಹೊಲದಲ್ಲಿ ಕುಳಿತು ಸಮಾಧಾನ, ಕಳಕಳಿಯಿಂದ ರೈತರ ಮೊರೆ ಆಲಿಸುವ ಮೂಲಕ ಸರಳತೆ ಮೆರೆದರು.

ಈ ಸಂದರ್ಭದಲ್ಲಿ ರೈತ ಮುಖಂಡ ಶಿವಾನಂದ ಇಟಗಿ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಮುಖಂಡ ವೀರನಗೌಡ ಪಾಟೀಲ, ರೈತ ಸಂಘದ ಅಶ್ವಿನಿ ಬೀಡನಾಳ, ಶಂಕರಗೌಡ ಜಾಯನಗೌಡ್ರ ಮಾತನಾಡಿ, ಗದಗ ಜಿಲ್ಲೆಯಲ್ಲಿ ತೀವ್ರ ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸುವಂತೆ ಮನವಿ ಮಾಡಿದರು.

ಸದ್ಯ ಜಿಲ್ಲೆಯಲ್ಲಿ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿದ್ದು, ಸರ್ಕಾರದ ಅಂಕಿ-ಅಂಶಗಳು ವ್ಯತಿರಿಕ್ತವಾಗಿವೆ. ಮಳೆ ಇಲ್ಲದೆ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದು, ಜಿಲ್ಲೆಯ ಉಳಿದ ಆರು ತಾಲೂಕುಗಳನ್ನೂ ತಕ್ಷಣವೇ ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದರು.

ತೀವ್ರ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ಘೋಷಿಸಬೇಕು. ಬೆಳೆ ಕೈಕೊಟ್ಟ ಕಾರಣ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೃಷಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಬ್ಯಾಂಕುಗಳು ಸಾಲ ವಸೂಲಾತಿಗಾಗಿ ರೈತರಿಗೆ ನೀಡುತ್ತಿರುವ ಒತ್ತಡವನ್ನು ಕೂಡಲೇ ನಿಲ್ಲಿಸಬೇಕು. ಬರಗಾಲದ ತೀವ್ರತೆಯಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು, ತಕ್ಷಣವೇ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಬೇಕು, ಕಬ್ಬಿನ ಎಫ್.ಆರ್.ಪಿ. ದರದ ಕುರಿತು ಪರಿಶೀಲಿಸುವಂತೆ ಮನವಿ ಮಾಡಿದರು.

ರೈತರ ಮೊರೆ ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೇವಲ ಹೇಳಿಕೆಗಳ ಆಧಾರದ ಮೇಲಲ್ಲದೆ ನಿಖರ ವೈಜ್ಞಾನಿಕ ಸಮೀಕ್ಷೆ ಹಾಗೂ ಕಾನೂನು ನಿಯಮಾವಳಿಗಳ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಿಸಲಾಗುತ್ತಿದೆ. ವಿಮಾನ ಅಥವಾ ಹೆಲಿಕಾಪ್ಟರ್ ಮೂಲಕ ಪರಿಸ್ಥಿತಿ ವೀಕ್ಷಿಸಿದರೆ ಸಾಲದು ಎಂದು ವಾಸ್ತವ ಅರಿಯಲು ನಾನೇ ಖುದ್ದಾಗಿ ನೆಲಮಟ್ಟದಲ್ಲಿ ಈ ಪರಿಶೀಲನೆ ನಡೆಸುತ್ತಿದ್ದೇನೆ. ರಾಜ್ಯ ಸರ್ಕಾರ ಸಲ್ಲಿಸುವ ಮನವಿ ಆಧರಿಸಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವೂ ಪರಿಶೀಲನೆಗೆ ಆಗಮಿಸಲಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಬರ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದು, ವರದಿ ಮರುಪರಿಶೀಲಿಸಿ, ಯಾವುದೇ ಅರ್ಹ ತಾಲೂಕು ಅಥವಾ ಗ್ರಾಮಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.

ಸುನಿತಾ ಪೂಜಾರ, ಕಲ್ಲಪ್ಪ ಕಾಡಪ್ಪಗೋಳ ಅವರ ಜಮೀನುಗಳಿಗೆ ತೆರಳಿ ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ವೀಕ್ಷಿಸಿದ ಸಿಎಂ, ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಿ ರೈತರ ಹಿತರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ಎಚ್.ಕೆ. ಪಾಟೀಲ್, ಸಿ.ಸಿ. ಪಾಟೀಲ, ಪ್ರಮುಖರಾದ ಡಿ.ಆರ್. ಪಾಟೀಲ, ಐ.ಎಸ್. ಪಾಟೀಲ, ಡಿ.ಡಿ. ಮೋರನಾಳ, ಮಿತುನಗೌಡ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್.ಪಿ. ಮಿತುನ್ ಎಚ್.ಎನ್., ಜಿಪಂ ಸಿಇಒ ಮುಕುಲ್ ಜೈನ್, ಮುಂಡರಗಿ ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್. ತಾಪಂ ಇಓ ವಿಜಯಕುಮಾರ ಬೆಣ್ಣಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಒಬ್ಬ ರಾಜ್ಯದ ಮುಖ್ಯಮಂತ್ರಿ ತಾಲೂಕಾ ಹಂತದಲ್ಲಿನ ಮೂರು ಜಮೀನುಗಳಲ್ಲಿನ ಬೆಳೆ ವೀಕ್ಷಿಸಿ, ನಂತರ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರೈತರೊಂದಿಗೆ ಕುಳಿತು ತಾಲೂಕಿನ ಬೆಳೆಹಾನಿ ಬಗ್ಗೆ ಚರ್ಚಿಸಿ ಸೂಕ್ತವಾದ ಭರವಸೆ ನೀಡಿರುವುದು ಇದೇ ಮೊದಲು. ಇಂದಿನ ಘಟನೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ರೈತರ ಬಗ್ಗೆ ಇರುವ ಕಾಳಜಿ ಎತ್ತಿ ತೋರಿಸುತ್ತಿದೆ. ಇದನ್ನೆಲ್ಲ ನೋಡಿದರೆ ಮುಂಡರಗಿ ತಾಲೂಕು ಬರಗಾಲದ ಪಟ್ಟಿಗೆ ಸೇರ್ಪಡೆಯಾಗುವ ಭರವಸೆ ಮೂಡಿದೆ ಎನ್ನುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಪಾದಯಾತ್ರೆ ಅಲ್ಲ, ಪಶ್ಚಾತ್ತಾಪದ ಯಾತ್ರೆ: ಶಿವರಾಜ ತಂಗಡಗಿ
3ರಿಂದ ಎಡಿಬಿ, ಜೈನ್‌ ಕಾಲೇಜುಗಳ ಸುರಸಂಭ್ರಮ