ಸಂಜೆ 5.30 ರಿಂದ 7 ಗಂಟೆವರೆಗೆ ಹಾಸ್ಯ ಸಂಭ್ರಮ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿಯ ನಟ ಗೋವಿಂದೇಗೌಡ ಚಾಲನೆ ನೀಡುವರು,
ಹರಪನಹಳ್ಳಿ: ನಗರದ ಎಡಿಬಿ ಪ್ರಥಮ ದರ್ಜೆ ಕಾಲೇಜು ಹಾಗೂ ಎಸ್ ಎಸ್ ಎಚ್ ಜೈನ್ ಪದವಿ ಪೂರ್ವ ಕಾಲೇಜುಗಳ ಸುವರ್ಣ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದ ಸುರಸಂಭ್ರಮ ಸಮಾರಂಭ ಸೆ. 3 ಹಾಗೂ 4 ರಂದು ಎರಡು ದಿನಗಳ ಕಾಲ ನಡೆಯಲಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ.ಕೊಟ್ರೇಶ್ವರ, ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಎರಡು ಕಾಲೇಜುಗಳ ಸುವರ್ಣ ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ವಿವಿಧ ಗಣ್ಯರ ಸಮ್ಮುಖದಲ್ಲಿ ಆಯೋಜಿಸಲಾಗಿದೆ.ಸೆ. 3 ರಂದು ಬೆಳಗ್ಗೆ 8 ಗಂಟೆಗೆ ಪ್ರವಾಸಿ ಮಂದಿರ ವೃತ್ತದಿಂದ ಮೆರವಣಿಗೆ ಆರಂಭವಾಗಿ ಎಡಿಬಿ ಕಾಲೇಜಿಗೆ ಆಗಮಿಸುತ್ತಲಿದೆ, ಬೆಳಗ್ಗೆ 10 ಗಂಟೆಗೆ ಪಂಚಪೀಠಗಳೊಂದಾದ ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸ್ಥಳೀಯ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಆರಂಭವಾಗಲಿದೆ.
ಬಳ್ಳಾರಿ ವೀವಿ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶ ಅಧ್ಯಕ್ಷತೆಯಲ್ಲಿ ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸುವರು.ವಿಶೇಷ ಆಹ್ವಾನಿತರಾಗಿ ಶಾಸಕಿ ಎಂ.ಪಿ. ಲತಾ, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ವಿಧಾನ ಪರಿಷತ್ತು ಸದಸ್ಯರುಗಳಾದ ವೈ.ಎಂ. ಸತೀಶ, ಶಶಿಲ್ ನಮೋಶಿ, ಡಾ. ಚಂದ್ರಶೇಖರ ಪಾಟೀಲ್ ಆಗಮಿಸುವರು.
ಬಳ್ಳಾರಿ ವೀವಿ ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ, ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್, ಸಹ ಕಾರ್ಯದರ್ಶಿ ಯಳ್ಪಿ ಮೇಟಿ ಪಂಪನಗೌಡ, ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ, ಸ್ಥಳೀಯ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೊಟ್ರೇಶ್ವರ ಹಾಗೂ ಉಭಯ ಕಾಲೇಜುಗಳ ಪ್ರಾಚಾರ್ಯರಾದ ಡಾ.ಸಿದ್ದಲಿಂಗಮೂರ್ತಿ, ಡಾ. ಎ.ಎಂ.ಶರತ್ ಉಪಸ್ಥಿತರಿರುವರು. ಮದ್ಯಾಹ್ನ 2 ಗಂಟೆಗೆ ವಚನ ಗಾಯನ ಬೆಳಗಾವಿಯ ವಿದೂಷಿ ಡಾ. ರೋಹಿಣಿ ಗಂಗಾಧರ, ವಚನ ಗಾಯನ ಕಾಲೇಜಿನ ವಿದ್ಯಾರ್ಥಿನಿಯರಿಂದ ಹಾಗೂ ವೀವಿ ಸಂಘದ ಪದಾಧಿಕಾರಿಗಳಿಗೆ ಗೌರವ ಸನ್ಮಾನ ಇರುತ್ತದೆ.ಮಧ್ಯಾಹ್ನ 3 ರಿಂದ 4 ಗಂಟೆವರೆಗೆ ದಾವಣಗೆರೆಯ ಎಸ್.ಬಿ. ರಾಜಶೇಖರಪ್ಪ ಸಿದ್ದನಮಠ ಅವರಿಂದ ಕೃಷಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನಡೆಯಲಿದೆ. ಸಂಜೆ 4 ರಿಂದ 5.30 ರವರೆಗೆ ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತೆ ಡಾ. ಮಾತಾ ಮಂಜಮ್ಮ ಜೋಗತಿ ಚಾಲನೆ ನೀಡುವರು, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಹೇಬ್ ವಾಲಿಕಾರ ಬಿನ್ನಾಳ ವಿಶೇಷ ಉಪನ್ಯಾಸ ನೀಡುವರು.
ಹಾಸ್ಯ ಸಂಭ್ರಮ:ಸಂಜೆ 5.30 ರಿಂದ 7 ಗಂಟೆವರೆಗೆ ಹಾಸ್ಯ ಸಂಭ್ರಮ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿಯ ನಟ ಗೋವಿಂದೇಗೌಡ ಚಾಲನೆ ನೀಡುವರು, ಮಿಮಿಕ್ರಿ ಗೋಪಿ, ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ರಾಘವೇಂದ್ರ, ಪ್ರವೀಣ ಜೈನ್, ಮಹೇಶ ಪಾಲ್ಗೊಳ್ಳುವರು.
ಸಂಜೆ 7 ಕ್ಕೆ ಬಯಲಾಟ ನೃತ್ಯ ಸಂಭ್ರಮದಲ್ಲಿ ಡಾ. ಕೆ.ರುದ್ರಪ್ಪ ನಿರ್ದೆಶನದಲ್ಲಿ ಗಿರಿಜಾ ಕಲ್ಯಾಣವನ್ನು ಕಾಲೇಜು ವಿದ್ಯಾರ್ಥಿನಿಯರು ಅಭಿನಯಸುವರು. ಬಸವನಾಳದ ಕೆ.ಆನಂದ ನಿರ್ದೆಶನದಲ್ಲಿ ಯಕ್ಷಗಾನವನ್ನು ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವರು.ಸೆ. 4 ರಂದು ವಿಚಾರ ಗೋಷ್ಟಿ, ಸಂಗೀತ ರಸಧಾರೆ, ಜಾನಪದ ನೃತ್ಯ ಸಂಭ್ರಮ, ಮಹಿಳೆ ಮತ್ತು ಆರೋಗ್ಯ ನಂತರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯರುಗಳಾದ ಆರುಂಡಿ ನಾಗರಾಜ, ಪಟೇಲ್ ಜಗದೀಶಗೌಡ, ಮಾಜಿ ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ಪ್ರಾಚಾರ್ಯರಾದ ಡಾ.ಸಿದ್ದಲಿಂಗಮೂರ್ತಿ, ಡಾ. ಎ.ಎಂ.ಶರತ್ ಉಪಸ್ಥಿತರಿದ್ದರು.