ಬಿಜೆಪಿಯವರು ನಡೆಸುತ್ತಿರುವ ಪಾದಯಾತ್ರೆ ಪಾದಯಾತ್ರೆಯಲ್ಲ, ಅವರ ಪಶ್ಚಾತ್ತಾಪದ ಯಾತ್ರೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.
ಕೊಪ್ಪಳ: ಬಿಜೆಪಿಯವರು ನಡೆಸುತ್ತಿರುವ ಪಾದಯಾತ್ರೆ ಪಾದಯಾತ್ರೆಯಲ್ಲ, ಅವರ ಪಶ್ಚಾತ್ತಾಪದ ಯಾತ್ರೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಬಸವರಾಜ ರಾಯರಡ್ಡಿ ಅವರ ಹೇಳಿಕೆ ಕೇಳಿದ್ದೇನೆ. ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಅವರು ಮಾತನಾಡಿದ್ದಾರೆ. ರಾಯರಡ್ಡಿ ಅವರು ಎಲ್ಲ ಧರ್ಮಗಳನ್ನೂ ಪ್ರೀತಿಸುತ್ತಾರೆ. ಸಣ್ಣ ವಿಚಾರವನ್ನು ಇಷ್ಟೊಂದು ದೊಡ್ಡದಾಗಿ ಚರ್ಚಿಸುವ ಅಗತ್ಯವಿಲ್ಲ ಎಂದರು.ನಾನೂ ಎಲ್ಲ ಧರ್ಮಗಳನ್ನು ಪ್ರೀತಿಸುತ್ತೇನೆ. ಯಾರು ಯಾವ ಧರ್ಮಕ್ಕೆ ಹೋದರೂ ಅದರಿಂದ ಯಾವುದೇ ಧರ್ಮಕ್ಕೂ ನಷ್ಟವಾಗುವುದಿಲ್ಲ. ಧರ್ಮದ ವಿಚಾರ ಬಂದ ತಕ್ಷಣ ಬಿಜೆಪಿಯವರ ಕಣ್ಣು-ಕಿವಿ ದೊಡ್ಡದಾಗುತ್ತವೆ. ಆದರೆ, ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಯಾಗಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿಲ್ಲ ಎಂದು ಟೀಕಿಸಿದರು.
ಲಿಂಗಸುಗೂರಿನಲ್ಲಿ ಬರದ ಕುರಿತಂತೆ ಮಾತನಾಡುವ ಬಿಜೆಪಿ ನಾಯಕರು ಅಧಿವೇಶನದಲ್ಲಿ ಒಂದು ವಾರ ವ್ಯರ್ಥ ಮಾಡಿದ್ದಾರೆ. ಪಾದಯಾತ್ರೆಯಲ್ಲಿ ತಮ್ಮೊಳಗಿನ ಜಗಳದ ವಿಚಾರವನ್ನೇ ಇಟ್ಟುಕೊಳ್ಳಲಿ. ಕುಮಾರಸ್ವಾಮಿ ಒಂದು ರೀತಿಯಲ್ಲಿ, ಸೋಮಣ್ಣ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಾರೆ. ಹೀಗಾಗಿ, ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡೇ ಪಾದಯಾತ್ರೆ ಮಾಡಲಿ ಎಂದು ವ್ಯಂಗ್ಯವಾಡಿದರು.ಪಾದಯಾತ್ರೆಯಲ್ಲಿ ಭಾಗವಹಿಸಿರುವವರು ಭ್ರಷ್ಟಾಚಾರದ ಪಿತಾಮಹರು. ವಿಜಯೇಂದ್ರ ಅವರ ತಂದೆ ಏಕೆ ಜೈಲಿಗೆ ಹೋಗಿದ್ದರು ಎಂಬುದನ್ನು ಜನರು ಮರೆತಿಲ್ಲ. ಇಂತಹವರು ಪಾದಯಾತ್ರೆ ನಡೆಸಿದರೆ ಜನ ನಗುತ್ತಾರೆ. ರೆಡ್ಡಿಯವರೂ ಪಾದಯಾತ್ರೆ ಮಾಡುತ್ತಿದ್ದಾರೆ. ಇವರೆಲ್ಲರೂ ಭ್ರಷ್ಟಾಚಾರದ ಮಹಾತ್ಮರು ಎಂದು ಟೀಕಿಸಿದರು.
ವಾಲ್ಮೀಕಿ ಹಗರಣದ ತನಿಖೆ ನಡೆದಿದೆ. ಎಸ್‌ಐಟಿ ತನಿಖೆಯಲ್ಲಿಯೂ ಕ್ಲೀನ್ ಚಿಟ್ ನೀಡಲಾಗಿದೆ. ಅದರ ಬಳಿಕವೇ ಸಚಿವ ಸ್ಥಾನ ನೀಡಲಾಗಿದೆ. ಆದರೆ, ನಾಗೇಂದ್ರ ಅವರ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಅಧಿವೇಶನವನ್ನು ಹಾಳು ಮಾಡಿತು. ಈಗ ಪಾದಯಾತ್ರೆ ನಡೆಸುತ್ತಿರುವುದು ಬಿಜೆಪಿಯವರ ಪಶ್ಚಾತ್ತಾಪದ ಯಾತ್ರೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪದೇಪದೆ ಹೇಳುವ ಬಿಜೆಪಿಯವರು ತಾಕತ್ ಇದ್ದರೆ ಕೇಂದ್ರ ಸರ್ಕಾರದಲ್ಲಿ ಎಸ್‌ಸಿಪಿ–ಟಿಎಸ್‌ಪಿ ಯೋಜನೆಗೆ ಹಣ ಮೀಸಲಿಡಲಿ. ರಾಜ್ಯ ಸರ್ಕಾರ ಮಾಡಿರುವ ಕೆಲಸಗಳಿಗೆ ಬಿಜೆಪಿ ನಾಯಕರು ತಮ್ಮ ನಾಯಕರ ಹೆಸರನ್ನು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಬೋವಿ ಹಗರಣದ ತನಿಖೆ ನಡೆಯುತ್ತಿದ್ದು, ವರದಿ ಬಂದಿದೆ. ಕೆಪಿಎಸ್‌ಸಿ ಹಗರಣದ ಬಗ್ಗೆಯೂ ಬಿಜೆಪಿ ನಾಯಕರು ಮಾತನಾಡಲಿ. ಹಗರಣದ ಪಿತಾಮಹರು ಯಾರು ಎಂಬುದನ್ನು ಜನರಿಗೆ ತಿಳಿಸಲಿ. ರಾಜ್ಯದ ಜನ ಬಿಜೆಪಿ ಮರೆತಿದ್ದರು. ಇದೀಗ ಪುನರುಜ್ಜೀವನಕ್ಕಾಗಿ ಪಶ್ಚಾತ್ತಾಪದ ಯಾತ್ರೆ ನಡೆಸುತ್ತಿದ್ದಾರೆ ಎಂದರು.ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಎಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಸಂಪೂರ್ಣವಾಗಿ ತನಿಖೆ ಮಾಡಿಸಲಾಗುವುದು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತನಿಖಾ ಸಂಸ್ಥೆಗೆ ಪ್ರಕರಣ ವಹಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.