13ರಂದು ಶ್ರೀ ಸೇವಾಲಾಲ್‌ ಜಯಂತ್ಯುತ್ಸವ: ಸಿಎಂ ಚಾಲನೆ

KannadaprabhaNewsNetwork |  
Published : Feb 09, 2026, 01:30 AM IST
8ಕೆಡಿವಿಜಿ5-ದಾವಣಗೆರೆಯಲ್ಲಿ ಭಾನುವಾರ ಸಂತ ಶ್ರೀ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರು, ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶ್ರೀ ಸಂತ ಸೇವಾಲಾಲ್‌ 287ನೇ ಜಯಂತ್ಯುತ್ಸವ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ (ಭಾಯಾಘಡ್‌) ಕ್ಷೇತ್ರದಲ್ಲಿ ಫೆ.13ರಿಂದ 14ರವರೆಗೆ ನಡೆಯಲಿದೆ. ರಾಜ್ಯ, ದೇಶದ ವಿವಿಧೆಡೆಯಿಂದ ಲಂಬಾಣಿ ಸಮುದಾಯ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಸಂತ ಶ್ರೀ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ, ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದ್ದಾರೆ.

- ಸೂರಕೊಂಡನಕೊಪ್ಪದಲ್ಲಿ 3 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ।

- ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಒತ್ತು: ರುದ್ರಪ್ಪ ಲಮಾಣಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಸಂತ ಸೇವಾಲಾಲ್‌ 287ನೇ ಜಯಂತ್ಯುತ್ಸವ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ (ಭಾಯಾಘಡ್‌) ಕ್ಷೇತ್ರದಲ್ಲಿ ಫೆ.13ರಿಂದ 14ರವರೆಗೆ ನಡೆಯಲಿದೆ. ರಾಜ್ಯ, ದೇಶದ ವಿವಿಧೆಡೆಯಿಂದ ಲಂಬಾಣಿ ಸಮುದಾಯ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಸಂತ ಶ್ರೀ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ, ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯದ ಕುಲಗುರು ಸಂತ ಸೇವಾಲಾಲ್‌ ಶ್ರೀಗಳ ಜನ್ಮಸ್ಥಳವಾದ ಸೂರಗೊಂಡನಕೊಪ್ಪದಲ್ಲಿ 3 ದಿನಗಳ ಕಾಲ ವಿವಿಧ ಧಾರ್ಮಿಕ, ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಶ್ರೀ ಸಂತ ಸೇವಾಲಾಲ್‌ ಜಯಂತ್ಯುತ್ಸವ ಆಚರಿಸಲಾಗುವುದು ಎಂದರು.

ಭಾಗವಹಿಸುವ ಗಣ್ಯಾತಿ ಗಣ್ಯರು:

ಫೆ.13ಕ್ಕೆ ಕಾಟಿ ಆರೋಹಣ, ತಾಂಡಾ ಸಾಂಪ್ರಾದಾಯಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ, ಸತ್ಸಂಗ, ವಾಜಾ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿವೆ. ಫೆ.14ರ ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀ ಸಂತ ಸೇವಾಲಾಲ್‌ ಜಯಂತಿ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ಸಚಿವರಾದ ಎಚ್.ಕೆ.ಪಾಟೀಲ, ಡಾ.ಎಚ್.ಸಿ.ಮಹದೇವಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಸತೀಶ ಜಾರಕಿಹೊಳಿ, ಮಧು ಬಂಗಾರಪ್ಪ, ವಿಪಕ್ಷ ನಾಯಕ ಆರ್.ಅಶೋಕ, ಸಂಸದರಾದ ಬಿ.ವೈ.ರಾಘವೇಂದ್ರ, ಡಾ.ಪ್ರಭಾ ಮಲ್ಲಿಕಾರ್ಜುನ, ಮಹಾರಾಷ್ಟ್ರದ ಸಂಜಯ್ ಡಿ.ರಾಥೋಡ್‌, ಇಂದ್ರನೀಲ್ ಮನೋಹರ ನಾಯ್ಕ, ತೆಲಂಗಾಣಸಂಸದೆ ಬಿ.ಬಲರಾಮ ನಾಯ್ಕ ಇತರರು ಪಾಲ್ಗೊಳ್ಳುವರು ಎಂದರು.

ಪದವಿ ಕಾಲೇಜಿಗೆ ಮನವಿ:

ಬಂಜಾರ ಮತ್ತು ಇತರೆ ಸಮಾಜದಲ್ಲಿ ಕೆಲಸ ಅರಸಿಕೊಂಡು ವಲಸೆ ಹೋಗುವಂತಹ ಶ್ರಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸೂರಗೊಂಡನಕೊಪ್ಪದಲ್ಲಿ ವಲಸೆ ಮಕ್ಕಳ ವಸತಿಯುತ ಶಾಲೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುವರು. ಬಂಜಾರ ಸಮುದಾಯದ ಶೇ.75, ಇನ್ನುಳಿದ ಸಮುದಾಯದ ಶೇ.25ರಷ್ಟು ಸೇರಿ ಒಟ್ಟು 700 ಮಕ್ಕಳಿಗೆ ಸ್ಥಾಪನೆಯಾಗುವ ವಸತಿ ಶಾಲೆಯಲ್ಲಿ ಪ್ರವೇಶಾತಿ ನೀಡಲಾಗುವುದು. ಪದವಿ ಕಾಲೇಜು ಸ್ಥಾಪಿಸುವಂತೆಯೂ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.

ಶ್ರೀಕ್ಷೇತ್ರದಲ್ಲಿ ಸರ್ಕಾರಿ ಐಟಿಐ, ಕರಕುಶುಲ ತಯಾರಿಕಾ ಘಟಕ ಇತರೆ ಅಭಿವೃದ್ಧಿ ಕಾರ್ಯ ಭರದಿಂದ ನಡೆಯುತ್ತಿವೆ. ಧಾರ್ಮಿಕ ಆಚರಣೆ ಜೊತೆಗೆ ಬಂಜಾರ ಸಮುದಾಯದ ಕಲೆ, ಸಂಸ್ಕೃತಿ ಪರಿಚಯಿಸುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸೂರಗೊಂಡನಕೊಪ್ಪವನ್ನು ಎಜುಕೇಷನ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು. 3 ದಿನಗಳ ಜಾತ್ರಾ ಮಹೋತ್ಸವದಲ್ಲಿ ಮದ್ಯಪಾನ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಅಲ್ಲದೇ, ಕುರಿ ಇತರೆ ಪ್ರಾಣಿಗಳ ಬಲಿ ನೀಡುವುದನ್ನೂ ಶೇ.80ರಷ್ಟು ನಿಲ್ಲಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳ ಮೂಲಕ ಬಂಜಾರವನ್ನು ಮಾದರಿ ಸಮುದಾಯವಾಗಿಸುವ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಸೇವಾಲಾಲ್‌ ಮಾಲಾಧಾರಿಗಳು:

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಸರ್ಕಾರದಿಂದ ಜಯಂತ್ಯುತ್ಸವ ಪ್ರಾರಂಭಿಸಿ ಅನುದಾನ ನೀಡಿದರು. ಅನಂತರ ಸಿದ್ದರಾಮಯ್ಯನವರು ₹100 ಕೋಟಿಗೂ ಅಧಿಕ ಅನುದಾನ ನೀಡಿ, ಕ್ಷೇತ್ರ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದಾರೆ. ಶಬರಿಮಲೈ ಸ್ವಾಮಿ ಅಯ್ಯಪ್ಪ ಮಾಲಾಧಾರಿಗಳಂತೆಯೇ ಶ್ರೀ ಸಂತ ಸೇವಾಲಾಲ್‌ ಭಕ್ತರು ಮಾಲಾಧಾರಿಗಳಾಗಿ ತಮ್ಮ ತಮ್ಮ ಊರುಗಳಿಂದ ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬಂದು, ಭಕ್ತಿ ಸಮರ್ಪಿಸುತ್ತಾರೆ. ಸಮಾಜವನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಕೆಲಸವೂ ನಡೆದಿದೆ ಎಂದು ರುದ್ರಪ್ಪ ಲಮಾಣಿ ತಿಳಿಸಿದರು.

ಸಮಾಜದ ಮುಖಂಡರಾದ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ, ಹಿರಿಯ ವಕೀಲ ಕೆ.ರಾ‍ಘವೇಂದ್ರ ನಾಯ್ಕ, ಉದ್ಯಮಿ ಹನುಮಂತ ನಾಯ್ಕ, ಜಿ.ಚಂದ್ರನಾಯ್ಕ ತಾವರೆ ನಾಯ್ಕ, ನಂಜಾನಾಯ್ಕ, ನರೇನಹಳ್ಳಿ ಅರುಣಕುಮಾರ, ಮಂಜುನಾಥ ನಾಯ್ಕ, ಶಾಂತಾ ನಾಯ್ಕ, ಗೋಪಿನಾಯ್ಕ, ಮಂಜಾನಾಯ್ಕ, ರಾಮಾನಾಯ್ಕ, ರವಿನಾಯ್ಕ ಇತರರು ಇದ್ದರು.

- - -

-8ಕೆಡಿವಿಜಿ5.ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ಸಂತ ಶ್ರೀ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರು, ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ತೇಜಸ್ವಿ ಸೂರ್ಯ
ಜಿಬಿಎ ಪಾಲಿಕೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಮತದಾನಕ್ಕೆ ತೊಂದರೆ ಆಗದಂತೆ ಕ್ರಮ: ಸುನೀಲ್ ಕುಮಾರ್‌