ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ ಪ್ರಪ್ರಥಮ ಬಾರಿಗೆ ಕೊಳ್ಳೇಗಾಲ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ.
19 ವರ್ಷಗಳ ಬಳಿಕ ಅಂಬೇಡ್ಕರ್ ಭವನಕ್ಕೆ ಉದ್ಘಾಟನೆ ಭಾಗ್ಯ:ಕೊಳ್ಳೇಗಾಲದಲ್ಲಿ 19 ವರುಷಗಳ ಬಳಿಕ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಕಳೆದ ಆರೇಳು ವರುಷಗಳಿಂದಲೂ ಭೀಮನಗರದ ದಲಿತ ಸಮಾಜ ಹಾಗೂ ಅಂಬೇಡ್ಕರ್ ಸಂಘಟನೆಗಳಿಂದ ಭವನ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಕೂಗು ಕೇಳಿ ಬಂದಿತ್ತು, ಹಲವು ವೇದಿಕೆಗಳಲ್ಲೂ ಭೀಮನಗರದ ಹಲವು ಮುಖಂಡರು ಈ ಭವನ ಲೋಕಾರ್ಪಣೆ ಸಂಬಂಧ ಧ್ವನಿ ಎತ್ತಿದ್ದರು.
ಏನೇನು ಕಾಮಗಾರಿಗಳು:
ಕೊಳ್ಳೇಗಾಲ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ, ಕೊಳ್ಳೇಗಾಲ ಟೌನ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯ ವಿದ್ಯಾರ್ಥಿ ನಿಲಯ ಉದ್ಘಾಟನೆ, ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಆರ್.ಜಿ. ಮತ್ತು ಬಿ.ಎಲ್ ಕ್ರೀಡಾಪಟು ನಿಲಯದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಮರದ ನೆಲಹಾಸು ಅಳವಡಿಸುವ ಕಾಮಗಾರಿ ಉದ್ಘಾಟನೆ, ಆಗರ ಮತ್ತು ಮದ್ದೂರು ಕೆರೆಗಳಿಗೆ ನೀರು ಸಂಗ್ರಹ ಜಲಾಶಯಗಳನ್ನು ನಿರ್ಮಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಗೆ ಶಂಕುಸ್ಥಾಪನೆ, ಸುವರ್ಣಾವತಿ ನದಿಯ ವ್ಯಾಪ್ತಿಯಲ್ಲಿ ಸಣ್ಣ ಕೆರೆಗಳ, ಫೀಡರ್ ಚಾನೆಲ್ ಹಾಗೂ ಕಾಲುವೆ ಕಾಮಗಾರಿ, ಗರುಡಕಂಠಿ ನದಿಯ ಅಡಿಯಲ್ಲಿ ಬರುವ ಸಣ್ಣ ಕೆರೆಗಳ ಪಟ್ಟರ್ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ.
ಹೊಂಗನೂರು ಕೆರೆ, ಸಮುದಾಯ ಭವನಗಳಿಗೂ ಶಂಕು:
ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ 1.50 ಕೋಟಿ ರು. ಅಂದಾಜಿನಲ್ಲಿ ನವೀಕರಣ ಕಾಮಗಾರಿ, ಕೊಳ್ಳೇಗಾಲದ ವಾರ್ಡ್ 31ರಲ್ಲಿ ಬಸ್ತಿಪುರ ಆಶ್ರಯ ಕಾಲೋನಿ, 10ರಲ್ಲಿ 3.5 ಕೋಟಿ ರು. ಅಂದಾಜಿನಲ್ಲಿ ನಾಯಕರಬೀದಿಯಲ್ಲಿ ಒಳ ಚರಂಡಿ ಕಾಮಗಾರಿ, ಕೊಳ್ಳೇಗಾಲ ಪಟ್ಟಣದ ಚಿಕ್ಕನಾಯಕರ ಬೀದಿಯಲ್ಲಿ ಹಾಗೂ ದೊಡ್ಡನಾಯಕಬೀದಿಯಲ್ಲಿ ತಲಾ 25 ಲಕ್ಷ ರು. ಅಂದಾಜಿನಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿ.
5 ಕೋಟಿ ರು. ಅಂದಾಜಿನಲ್ಲಿ ಸಂತೇಮರಳ್ಳಿಯಲ್ಲಿ ಎಳನೀರು ಮಾರುಕಟ್ಟೆ ಸ್ಥಾಪನೆ, ಯಳಂದೂರು ಪಟ್ಟಣ ಪಂಚಾಯ್ತಿಯಲ್ಲಿ 2.48 ಕೋಟಿ ರು. ಅಂದಾಜಿನಲ್ಲಿ ಹಸಿಕಸ, ಒಣ ಕಸ ವಿಲೇವಾರಿ ಘಟಕ ನಿರ್ಮಾಣ, ಮದ್ದೂರಿನಲ್ಲಿ ಸೇತುವೆ ನಿರ್ಮಾಣ, 15 ಕೋಟಿ ರು. ಅಂದಾಜಿನಲ್ಲಿ ಮುಡಿಗುಂಡದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಮುಡಿಗುಂಡಂನ ಆದರ್ಶಶಾಲೆ ಸಮೀಪದ ರೇಷ್ಮೆ ಇಲಾಖೆಯ 5 ಎಕರೆ ಜಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 250 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣಗೊಳ್ಳಲಿದ್ದು, ಮೊದಲ ಹಂತದಲ್ಲಿ 150 ಹಾಸಿಗಳ ಆಸ್ಪತ್ರೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೆ.30ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಳ್ಳೇಗಾಲದಲ್ಲಿ ಜಿಲ್ಲಾಸ್ಪತ್ರೆಗೆ ಶಾಸಕ ಎ ಆರ್.ಕೃಷ್ಣಮೂರ್ತಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಅಂದು ಸಚಿವರಾಗಿದ್ದ ವೆಂಕಟೇಶ್ ಮತ್ತು ಎಚ್.ಸಿ.ಮಹದೇವಪ್ಪ ಆಸ್ಪತ್ರೆ ಮಂಜೂರಾತಿಗೆ ಸ್ಪಂದಿಸಿದರು. ವೆಂಕಟೇಶ್ ಅವರು ರೇಷ್ಮೆ ಇಲಾಖೆ ಜಾಗ 5 ಎಕರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಜಾಗದ ಸಮಸ್ಯೆ ನಿವಾರಿಸಿದ್ದರು.ಸರ್ಕಾರ 150 ಹಾಸಿಗೆ ಆಸ್ಪತ್ರೆಗೆ ಮೊದಲ ಹಂತದಲ್ಲಿ 48 ಕೋಟಿ ರು. ಬಿಡುಗಡೆ ಮಾಡಿರುವ ಬೆನ್ನಲ್ಲೆ ಸೆ.30ರಂದು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.