ರಾಜ್ಯಕ್ಕೆ ಅನುದಾನ ತರಲು 3 ದಿನ ಸಿಎಂ ದೆಹಲಿ ಸಭೆ

KannadaprabhaNewsNetwork |  
Published : Jun 27, 2024, 01:03 AM ISTUpdated : Jun 27, 2024, 05:41 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಕುರಿತಂತೆ ನೂತನ 28 ಸಂಸದರೊಂದಿಗೆ ಸಭೆ ನಡೆಸುವುದು ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರದಿಂದ 3 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

 ಬೆಂಗಳೂರು : ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಕುರಿತಂತೆ ನೂತನ 28 ಸಂಸದರೊಂದಿಗೆ ಸಭೆ ನಡೆಸುವುದು ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರದಿಂದ 3 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. 

ದೆಹಲಿ ಭೇಟಿಯ ಮೊದಲ ದಿನ ರಾಜ್ಯದ ನೂತನ 28 ಸಂಸದರೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಎರಡನೇ ದಿನವಾದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಕುರಿತು ಅಭಿನಂದನೆ ಸಲ್ಲಿಸಲಿದ್ದಾರೆ.

 ಈ ವೇಳೆ ಕೇಂದ್ರದಿಂದ ರಾಜ್ಯಕ್ಕೆ ಬೇಕಿರುವ ನೆರವಿನ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅದಾದ ನಂತರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ವಿವಿಧ ಕೇಂದ್ರ ಸಚಿವರನ್ನು ಭೇಟಿಯಾಗಿ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ.ಪ್ರವಾಸದ ಮೂರನೇ ದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರರನ್ನು ಭೇಟಿಯಾಗಿ ರಾಜ್ಯದಲ್ಲಿನ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ. 

ಈ ವೇಳೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ವ್ಯಕ್ತವಾಗುತ್ತಿರುವ ಅಭಿಪ್ರಾಯ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಸಂಸದರೊಂದಿಗೆ ರಾಜ್ಯದ ವಿಚಾರ ಚರ್ಚೆ

ದೆಹಲಿ ಭೇಟಿಯ ಮೊದಲ ದಿನವಾದ ಗುರುವಾರ ಸಂಜೆ 6 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ರಾಜ್ಯದ ನೂತನ 28 ಸಂಸದರೊಂದಿಗೆ ಸಭೆ ನಡೆಸಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

ಕೇಂದ್ರದ ಸಹಕಾರದೊಂದಿಗೆ ಅನುಷ್ಠಾನಗೊಳ್ಳಬೇಕಿರುವ ಭದ್ರಾ ಮೇಲ್ದಂಡೆ ಯೋಜನೆ, ಮೇಕೆದಾಟು, ಹಣಕಾಸು ಆಯೋಗದ ಶಿಫಾರಸು ಮಾಡಿರುವಂತೆ ಅನುದಾನ ಬಿಡುಗಡೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಕುರಿತು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಸಂಸದರನ್ನು ಸಿದ್ದರಾಮಯ್ಯ ಕೋರಲಿದ್ದಾರೆ.

ಸಭೆಯಲ್ಲಿ ಎಲ್ಲ 28 ಸಂಸದರು ಭಾಗಿಯಾಗುವ ನಿರೀಕ್ಷೆಯಿದ್ದು, ಅದರಲ್ಲಿ ಕೇಂದ್ರ ಸಚಿವರಾಗಿರುವ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಕೂಡ ಭಾಗಿಯಾಗುವ ಸಾಧ್ಯತೆಗಳಿವೆ. ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಖಚಿತತೆಯಿಲ್ಲ.

ಗಣಿಗಾರಿಕೆಗೆ ತಡೆ ಕುರಿತು ಚರ್ಚೆ?ಬಳ್ಳಾರಿಯ ದೇವದರಿ ಅರಣ್ಯ ಪ್ರದೇಶದಲ್ಲಿ ಕೆಐಒಸಿಎಲ್‌ಗೆ ಗಣಿಗಾರಿಕೆ ನಡೆಸಲು ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅನುಮತಿ ನೀಡಿದ ನಂತರ ರಾಜ್ಯ ಅರಣ್ಯ ಇಲಾಖೆ ಕೆಐಒಸಿಎಲ್‌ಗೆ ಅರಣ್ಯ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ನೀಡಿದೆ. ಈ ವಿಚಾರದ ಕುರಿತು ಎಚ್‌.ಡಿ. ಕುಮಾರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಂಸದರ ಸಭೆಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಚರ್ಚೆ:* ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿರುವ 5,300 ಕೋಟಿ ರು. ಅನುದಾನ ಬಿಡುಗಡೆ* ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಿರುವ 11,495 ಕೋಟಿ ರು. ಅನುದಾನ ಬಿಡುಗಡೆ* ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆಗೆ ಕೇಂದ್ರಕ್ಕೆ ಮನವಿ ಮಾಡುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ