ಗದಗ: ರೈತರ ಬೆಳೆ ವಿಮೆ ಹಣವನ್ನು ಬ್ಯಾಂಕಿನ ಶಾಖೆಗಳು ಬೆಳೆ ಸಾಲಕ್ಕೆ ಜಮಾ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ರೈತರ ಸಾಲ ಮಂಜೂರಾತಿಯನ್ನು ಕಾಗದಪತ್ರಗಳಲ್ಲಿ ಸರಳೀಕರಣ ಮಾಡಬೇಕು. ರೈತರ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಕಿಸಾನ್ ಜಾಗೃತಿ ವಿಕಾಸ ಸಂಘದ ವತಿಯಿಂದ ಶನಿವಾರ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಬಸವರಾಜ ಯಲ್ಲಪ್ಪ ನವಲಗುಂದ ಮಾತನಾಡಿ, ರಾಜ್ಯಾದ್ಯಂತ 2025-26ನೇ ಸಾಲಿನಲ್ಲಿ ಅತಿಯಾದ ಮಳೆಯಿಂದ ಗೋವಿನಜೋಳ, ಹೆಸರು, ಸೂರ್ಯಕಾಂತಿ, ಶೇಂಗಾ, ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳು ಕೊಳೆತು ಹಾಳಾಗಿ ಹೋಗಿವೆ. ಆದರೂ ಕೂಡ ರಾಜ್ಯ ಸರ್ಕಾರ ಇಲ್ಲಿಯವರೆಗೂ ಬೆಳೆ ಸಮೀಕ್ಷೆಯ ವರದಿಯನ್ನು ಪಡೆದುಕೊಳ್ಳದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ರೈತ ಪರ, ಪ್ರಗತಿಪರ ಸಂಘಟನಗಳು ಉಗ್ರವಾಗಿ ಖಂಡಿಸುತ್ತವೆ. ಕೂಡಲೇ ಬೆಳೆ ಸಮೀಕ್ಷೆಯನ್ನು ಮಾಡಿ ರೈತರಿಗೆ ಬೆಳೆ ಪರಿಹಾರವನ್ನು ಮಂಜೂರು ಮಾಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಬೆಳೆ ಪರಿಹಾರಕ್ಕೆ ಕರೆ ನೀಡಿ ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.ಈ ವೇಳೆ ವೀರಣ್ಣ ಶಂಕ್ರಪ್ಪ ಗಟ್ಟಿ, ದೇವಪ್ಪ ಇಟಗಿ, ಅನ್ನದಾನೇಶ್ವರ ಗಡ್ಡಿ ಸೇರಿದಂತೆ ರೈತರು ಇದ್ದರು.