ಗದಗ-ವಾಡಿ ರೈಲು ಮಾರ್ಗ ಉದ್ಘಾಟನೆಗೆ ಕೇಂದ್ರ ಸಚಿವರಿಗೆ ಸಿಎಂ ಪತ್ರ

KannadaprabhaNewsNetwork | Published : Mar 26, 2025 1:30 AM

ಸಾರಾಂಶ

ಗದಗ-ತಳಕಲ್-ಕುಷ್ಟಗಿ ವರೆಗೆ 60 ಕಿಮೀ ಮತ್ತು ವಾಡಿಯಿಂದ ಶಹಾಪುರ ವರೆಗಿನ 45 ಕಿಮೀ ಮಾರ್ಗವು ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಈ ಪ್ರದೇಶಗಳ ಜನರು ರೈಲ್ವೆ ಸೇವೆಗಳ ಪ್ರಾರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. 2025ರ ಏಪ್ರಿಲ್‌ನಲ್ಲಿ ರೈಲ್ವೆ ಯೋಜನೆ ಆರಂಭ ಕಾರ್ಯಕ್ಕೆ ಯಲಬುರ್ಗಾ ಪಟ್ಟಣದಲ್ಲಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಬೇಕು.

ಕುಕನೂರು:

ಗದಗ-ವಾಡಿ ರೈಲ್ವೆ ಯೋಜನೆಯಲ್ಲಿ ಪೂರ್ಣವಾದ ರೈಲು ಮಾರ್ಗದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ರೈಲ್ವೆ ಸಚಿವರು ಸಮ್ಮಿತಿಸಿದರೆ ಏಪ್ರಿಲ್‌ನಲ್ಲಿ ನೂತನ ರೈಲ್ವೆ ಮಾರ್ಗದಲ್ಲಿ ರೈಲು ಓಡಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮನವಿ ಪತ್ರದಲ್ಲಿ ರೈಲ್ವೆ ಮೂಲಸೌಕರ್ಯಗಳ ವಿಸ್ತರಣೆಯು ಆರ್ಥಿಕ ಬೆಳವಣಿಗೆ, ಪ್ರಾದೇಶಿಕ ಸಂಪರ್ಕ ಮತ್ತು ಸಾಮಾಜಿಕ ಅಭಿವೃದ್ಧಿಯ ನಿರ್ಣಾಯಕ ಭಾಗವಾಗಿದೆ. ಈ ದೃಷ್ಟಿಕೋನದಿಂದ, ಮುಂಬೈ-ಕರ್ನಾಟಕ ಮತ್ತು ಕಲ್ಯಾಣ-ಕರ್ನಾಟಕ ಪ್ರದೇಶಗಳ ನಡುವೆ ಪ್ರಮುಖ ಸಂಪರ್ಕವನ್ನು ಸ್ಥಾಪಿಸಲು 2013-14ರ ರೈಲ್ವೆ ಬಜೆಟ್‌ನಲ್ಲಿ ಗದಗ-ವಾಡಿ ರೈಲು ಮಾರ್ಗ ಯೋಜನೆ ಅನುಮೋದಿಸಲಾಗಿದೆ. ₹ 2000 ಕೋಟಿ ಅಂದಾಜು ವೆಚ್ಚದೊಂದಿಗೆ 275 ಕಿಮೀ ವ್ಯಾಪ್ತಿಯ ಈ ದೀರ್ಘಾವಧಿಯ ಯೋಜನೆಯು ಕರ್ನಾಟಕದಾದ್ಯಂತ ವ್ಯಾಪಾರ, ಚಲನಶೀಲತೆ ಮತ್ತು ಆರ್ಥಿಕ ಏಕೀಕರಣವನ್ನು ಗಣನೀಯವಾಗಿ ಹೆಚ್ಚಿಸಲು ಸಿದ್ಧವಾಗಿದೆ. ಈ ಯೋಜನೆಯನ್ನು ಬೆಂಬಲಿಸುವಲ್ಲಿ ಕರ್ನಾಟಕ ಸರ್ಕಾರವು ಸಕ್ರಿಯ ಮತ್ತು ಮುಂಚೂಣಿಯ ಪಾತ್ರ ವಹಿಸಿದೆ. ರಾಜ್ಯ ಸರ್ಕಾರವು ಒಟ್ಟು ಯೋಜನಾ ವೆಚ್ಚದ ಶೇ. 50 ಭರಿಸಿದೆ ಮತ್ತು 6,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಂಪೂರ್ಣ ಹಣ ನೀಡಿದೆ ಎಂದು ಹೇಳಿದ್ದಾರೆ.

ಯಲಬುರ್ಗಾದಲ್ಲಿ ಕಾರ್ಯಕ್ರಮ:

ಗದಗ-ತಳಕಲ್-ಕುಷ್ಟಗಿ ವರೆಗೆ 60 ಕಿಮೀ ಮತ್ತು ವಾಡಿಯಿಂದ ಶಹಾಪುರ ವರೆಗಿನ 45 ಕಿಮೀ ಮಾರ್ಗವು ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಈ ಪ್ರದೇಶಗಳ ಜನರು ರೈಲ್ವೆ ಸೇವೆಗಳ ಪ್ರಾರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. 2025ರ ಏಪ್ರಿಲ್‌ನಲ್ಲಿ ರೈಲ್ವೆ ಯೋಜನೆ ಆರಂಭ ಕಾರ್ಯಕ್ಕೆ ಯಲಬುರ್ಗಾ ಪಟ್ಟಣದಲ್ಲಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

ಖರ್ಗೆಗೆ ಆಹ್ವಾನಿಸಿ:

ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಹಾಗೂ ರಾಜ್ಯದ ಪ್ರಗತಿಗೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಪರಿಗಣಿಸಿ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವರನ್ನು ಕೋರಿದ್ದಾರೆ.ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಲ್ಲಿ ರೈಲ್ವೆ ಸಚಿವರಿದ್ದಾಗ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಕಳೆದ ಅವಧಿಯಲ್ಲಿ ಸಹ ಗದಗ-ವಾಡಿ ರೈಲ್ವೆ ಯೋಜನೆಗೆ ಅನುಮೋದನೆ ಕೊಡಿಸಿದ್ದು, ಈ ಭಾಗದ ಜನರಿಗೆ ಈ ಯೋಜನೆ ಅನುಕೂಲ ಆಗಲಿದೆ. ಸದ್ಯ ನಮ್ಮ ಭಾಗದಲ್ಲಿ ಕುಷ್ಟಗಿ ವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಜನರು ಸಹ ರೈಲು ಓಡಾಟವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಕೇಂದ್ರ ರೈಲ್ವೆ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ದಿನಾಂಕ ನಿಗದಿಗೆ ಪತ್ರ ಬರೆದಿದ್ದಾರೆ. ಶೀಘ್ರ ಉದ್ಘಾಟನೆ ಜರುಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

Share this article