ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ 29ನೇ ವರ್ಷದ ಸಾರ್ವತ್ರಿಕ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸುವ 34ನೇ ವರ್ಷದ ‘ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮವನ್ನು ನ.26 ರಂದು ಕ್ಯಾಪಿಟಲ್ ವಿಲೇಜ್‌ನಲ್ಲಿ ಆಚರಿಸಲಾಗುವುದು ಎಂದು ಘೋಷಿಸಿದರು.ಕೊಡವ ಕುಲದ ಉದ್ಭವ, ವಿಕಾಸ ಮತ್ತು ಕೊಡವ ತಾಯಿನೆಲದ ಸೃಷ್ಟಿ ಈ ಮಣ್ಣಿನಲ್ಲಿ ಆರ್ವಿಭವಿಸಿದೆ. ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಬುಡಕಟ್ಟು ಜನಾಂಗದ ಕೊಡವರಲ್ಲಿ ಹುಟ್ಟಿನಿಂದಲೂ ಅಂತರ್ಗತವಾಗಿದೆ. ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಶಾಶ್ವತ ಹಕ್ಕಾಗಿದೆ. ಕೊಡವವರಲ್ಲಿ ಯೋಧ ಪ್ರವೃತ್ತಿ ಅನುವಂಶಿಕವಾಗಿ ಬಂದಿದ್ದು, ಅದನ್ನು ಜತನದಿಂದ ಕಾಯ್ದುಕೊಳ್ಳುತ್ತಾ ಬರಲಾಗಿದೆ. ತೋಕ್/ಬಂದೂಕು ಮತ್ತು ಭೂಮಿಯೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ವಿಶೇಷ ರಾಜಕೀಯ ಪ್ರಾತಿನಿಧ್ಯವಾದ ‘ಸಂಘ’ ಅಮೂರ್ತ ಮತ ಕ್ಷೇತ್ರದಂತೆ ಕೊಡವ ಜನಾಂಗಕ್ಕೆ ಪ್ರತ್ಯೇಕವಾಗಿ ಒಂದು ಅಮೂರ್ತ/ಅದೃಶ್ಯ ಕೊಡವ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರವನ್ನು ಸ್ಥಾಪಿಸಿ, ಭಾರತದ ಪಾರ್ಲಿಮೆಂಟ್ ಸೆಂಟ್ರಲ್ ವಿಸ್ತಾ ಮತ್ತು ಕರ್ನಾಟಕದ ಶಾಸಕಾಂಗಗಳಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕು ಎಂದರು.
ಕಲಿಯಂಡ ಮೀನಾ, ಬೊಪ್ಪಂಡ ಬೊಳ್ಳಮ್ಮ, ಪಟ್ಟಮಾಡ ಲಲಿತಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಮಂದಪಂಡ ರಚನ, ನಂದಿನೆರವಂಡ ನಿಶಾ, ಪಾಲಂದಿರ ಲೀಲ, ನಂದಿನೆರವಂಡ ಬೀನಾ, ಅಜ್ಜಿನಿಕಂಡ ಇನಿತಾ, ಅಪ್ಪಾರಂಡ ವಿನ್ಸಿ, ನಂದಿನೆರವಂಡ ಸೋನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ‘ಕೈಲ್ ಪೊಳ್ದ್’ ಪ್ರಯುಕ್ತ ‘ತೋಕ್ ಪೂವ್’ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಇಟ್ಟು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಕೋರಲಾಯಿತು. ಕೊಡವರು ಹಾಗೂ ಕೊಡವತಿಯರು ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಪಾಲ್ಗೊಂಡರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಿದರು.