)
ಮಡಿಕೇರಿ: ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ 48 ಗಂಟೆಗಳ ಕಾಲ ಅಹೋರಾತ್ರಿ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ.ಮಡಿಕೇರಿಯ ಕೊಡವ ಮಂದ್ ನಲ್ಲಿ 12 ರಂದು ಬೆಳಿಗ್ಗೆ 10.30 ಗಂಟೆಯಿಂದ ಮೇ 14 ರಂದು ಬೆಳಿಗ್ಗೆ 10.30 ರವರೆಗೆ ಸತ್ಯಾಗ್ರಹ ನಡೆಸಲಾಗುವುದು. ಸತ್ಯಾಗ್ರಹದಲ್ಲಿ ವಿವಿಧ ಹಕ್ಕೋತ್ತಾಯಗಳನ್ನು ಮಂಡಿಸಿ, ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರ ನೀಡಬೇಕೆಂದು ಆಗ್ರಹಿಸಿರುವ ಮನವಿ ಪತ್ರವನ್ನು ಭಾರತದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೊಡವರಿಗೆ ಮಾತ್ರ ಮೀಸಲಾದ "ವಿಶೇಷ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರ "ಗಳನ್ನು ನೀಡಬೇಕು ಅಥವಾ ಸಿಕ್ಕಿಂನ ಸಂಘ ಕ್ಷೇತ್ರದ ಮಾದರಿಯಲ್ಲಿ ಕೊಡವ ಕ್ಷೇತ್ರಗಳನ್ನು ಸೃಷ್ಟಿಸಬೇಕು. ಶೇ.33ರ ಮಹಿಳಾ ಮೀಸಲಾತಿಯೊಳಗೆ ಕೊಡವ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಲಾಗುವುದು. 2027ರ ಜನಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ "ಕೋಡ್ " ಮತ್ತು ಕಾಲಂ ನೀಡಬೇಕು. 1871-1931ರವರೆಗೆ ಇದ್ದಂತೆ ಸ್ವತಂತ್ರ ಜನಾಂಗ ಎಂದು ದಾಖಲಿಸಬೇಕು. ವಿಧಿ 25 ಮತ್ತು 26ರ ಅಡಿಯಲ್ಲಿ "ಗನ್-ತೋಕ್ " (ಶಸ್ತಾçಚರಣೆ) ಧಾರ್ಮಿಕ ಹಕ್ಕನ್ನು ರಕ್ಷಿಸಬೇಕು. ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸಿ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕು.
1785ರ ದೇವಟ್‌ಪರಂಬ್ ಜನಾಂಗೀಯ ಹತ್ಯೆ ಮತ್ತು ನಾಲ್ನಾಡ್ ಹಾಗೂ ಮಡಿಕೇರಿ ಕೋಟೆಯಲ್ಲಿ ನಡೆದ ಅರಮನೆ ಹತ್ಯಾಕಾಂಡಗಳನ್ನು ಅಂತರಾಷ್ಟ್ರೀಯ ಸ್ಮಾರಕಗಳಾಗಿ ಗುರುತಿಸಬೇಕು. ಉಲುಗುಲಿ, ಮುಳ್ಳುಸೋಗೆ ಮತ್ತು ಲಕ್ಕಡಿಕೋಟೆಗಳಲ್ಲಿ ಕೊಡವ ಯುದ್ಧ ಸ್ಮಾರಕಗಳನ್ನು ನಿರ್ಮಿಸಬೇಕು.ಹೆಲ್ಸಿಂಕಿ ನಿಯಮಗಳು 1966ರ ಪ್ರಕಾರ ಕೊಡವ ಭೂಪ್ರದೇಶಕ್ಕೆ ಕಾವೇರಿ ನೀರಿನ ಪಾಲು ನೀಡಬೇಕು. ಕೊಡವ ಇತಿಹಾಸವನ್ನು ಸುಳ್ಳಾಗಿಸಿದ ಇತಿಹಾಸಕಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಆಡಳಿತ ವ್ಯವಸ್ಥೆಯ ಮುಂದಿಡುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ.ಹೊಸ ಸೆಂಟ್ರಲ್ ವಿಸ್ಟಾ ಸಂಸತ್ತಿನಲ್ಲಿ 1200ಕ್ಕೂ ಹೆಚ್ಚು ಸೀಟುಗಳಿವೆ. ರಾಷ್ಟ್ರ ಸೇವೆ ಮಾಡಿದ ಮತ್ತು ಜನಸಂಖ್ಯೆ ನಿಯಂತ್ರಿಸಿದ ಕೊಡವರನ್ನು ಶಿಕ್ಷಿಸಬೇಡಿ ಎಂದು ಆಗ್ರಹಿಸಿದ್ದಾರೆ.