ಸಿಎನ್‌ಸಿ ವತಿಯಿಂದ ಕುರ್ಚಿ ತೋಡನಾಡ್‌ನ ಶ್ರೀಮಂಗಲದಲ್ಲಿ 17ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ನೆಲದ ಆದಿಮಸಂಜಾತ ಏಕ ಜನಾಂಗೀಯ ಆ್ಯನಿಮಿಸ್ಟಿಕ್ ನಂಬಿಕೆಯ ಕೊಡವರ ಸರ್ವಾಂಗೀಣ ವಿಕಾಸ, ಸಬಲೀಕರಣ ಮತ್ತು ರಕ್ಷಣೆ ದೇಶದ ಪವಿತ್ರ ಸಂವಿಧಾನದಿಂದ ಮಾತ್ರ ಸಾಧ್ಯವೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪ್ರತಿಪಾದಿಸಿದ್ದಾರೆ.ಸಿಎನ್‌ಸಿ ವತಿಯಿಂದ ಕುರ್ಚಿ ತೋಡನಾಡ್ ನ ಶ್ರೀಮಂಗಲದಲ್ಲಿ ನಡೆದ 17ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶ್ರೇಷ್ಠ ಸಂವಿಧಾನದ ಆಶಯಕ್ಕೆ ಬದ್ಧರಾಗಿ ಕೊಡವರ ಪರವಾಗಿ ನಿರಂತರ ಶಾಂತಿಯುತ ಹೋರಾಟಗಳನ್ನು ರೂಪಿಸುತ್ತಿರುವ ಸಿಎನ್‌ಸಿಯ ಗುರಿ ಮತ್ತು ಹೋರಾಟದ ಬಗ್ಗೆ ವಿಶ್ವಾಸವಿಡುವಂತೆ ಕರೆ ನೀಡಿದರು.ಆದಿಮಸಂಜಾತ ಏಕ ಜನಾಂಗೀಯ ಆ್ಯನಿಮಿಸ್ಟಿಕ್ ನಂಬಿಕೆಯ ಕೊಡವರು ಯಾವುದೇ ಜಾತಿ, ಧರ್ಮದ ಬಂಧನ ಅಥವಾ ಕಳಂಕವಿಲ್ಲದೆ ಸ್ವತಂತ್ರವಾಗಿ ಬದುಕಿದ ಮತ್ತು ಬದುಕುತ್ತಿರುವ ಅತೀ ಅಪರೂಪದ ಸೂಕ್ಷ್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಇದು ದೇಶದ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ "ಸಂಘ " ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ ಸಿಗಬೇಕಾದರೆ, ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ರಾಷ್ಟ್ರೀಯ ಜನಗಣತಿಯ ಸಂದರ್ಭ ‘ಕೊಡವ’ ಎಂದು ದಾಖಲೀಕರಣವಾಗಬೇಕು. ಹೀಗೆ ಮಾಡಿದಾಗ ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ ಎಂದರು.ನ.5 ರಂದು ಮತ್ತು 10 ರಂದು ಜನಜಾಗೃತಿ
18ನೇ ಕೊಡವ ಜನಜಾಗೃತಿ ಮಾನವ ಸರಪಳಿ ನವೆಂಬರ್ 5ರಂದು ಬುಟ್ಟಂಗಾಲದಲ್ಲಿ ಮತ್ತು 19ನೇ ಮಾನವ ಸರಪಳಿ ನ.10 ರಂದು ಬೆಳಿಗ್ಗೆ 10.30 ಗಂಟೆಗೆ ಅಂಜಿಗೇರಿನಾಡ್‌ನ ಪುದಿಕೇರಿ (ಹುದಿಕೇರಿ) ಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡ್, ಚೇರಂಬಾಣೆ, ಚೆಟ್ಟಳ್ಳಿ ಹಾಗೂ ಅಮ್ಮತ್ತಿಯಲ್ಲಿ ಕೊಡವ ಮಾನವ ಸರಪಳಿ ಯಶಸ್ವಿಯಾಗಿ ನಡೆದಿದೆ ಎಂದರು. ಅಜ್ಜಮಾಡ ಸಾವಿತ್ರಿ, ಅಜ್ಜಮಾಡ ಅಕ್ಕಮ್ಮ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಮಾಡ ಮೋಹನ್, ಚೊಟ್ಟೆಯಂಡಮಾಡ ಉದಯ, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಇಟ್ಟೀರ ರಾಜು, ಅಜ್ಜಮಾಡ ರಂಜಿ, ಅಪ್ಪೆಂಗಡ ಮಾಲೆ ಪೂಣಚ್ಚ, ಬೊಳ್ಳಜಿರ ಅಶೋಕ್ ಮತ್ತಿತರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.