ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿದ್ದಾಪುರ ವ್ಯಾಪ್ತಿಯ 2400 ಎಕ್ರೆ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದ ಜಮೀನುಗಳನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರಮುಖರು ಭೂಪರಿವರ್ತನೆಗೆ ಅವಕಾಶ ನೀಡುವ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ವಾಣಿಜ್ಯೋದ್ಯಮ ಉದ್ದೇಶಕ್ಕಾಗಿ ಭೂಪರಿವರ್ತಿಸುವುದನ್ನು ಸಂಪೂರ್ಣವಾಗಿ ತಡೆಯಬೇಕು. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಭೂಪರಿವರ್ತನಾ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎನ್.ಯು.ನಾಚಪ್ಪ ಮಾತನಾಡಿ, ಕೊಡಗಿನ ಕಾಫಿ ತೋಟಗಳನ್ನು ಭೂಪರಿವರ್ತಿಸುವ ಮೂಲಕ ಭೂಮಾಫಿಯಾ, ರೆಸಾರ್ಟ್ ದೊರೆಗಳು, ರಿಯಲ್ ಎಸ್ಟೇಟ್ ದಣಿಗಳು, ಅನಿವಾಸಿ ಭಾರತೀಯ ಉದ್ಯಮಪತಿಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೋರೇಟ್ ವಲಯಗಳಿಗೆ ವಿಲ್ಲಾ, ಬೃಹತ್ ಬಂಗಲೆ ಹಾಗೂ ಟೌನ್ ಶಿಪ್‌ಗಳನ್ನು ನಿರ್ಮಿಸಲು ಸರ್ಕಾರ ಅವಕಾಶ ನೀಡಲು ಮುಂದಾಗಿದೆ. ಕಾವೇರಿ ನದಿ ಪಾತ್ರದ ಭೂಪ್ರದೇಶವನ್ನು ನಾಶ ಪಡಿಸಿದಲ್ಲಿ ಅದು ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗಲಿದೆ. ದಕ್ಷಿಣ ಭಾರತದ ಜೀವನ ರೇಖೆಯಾದ ಕಾವೇರಿಯ ಜಲಮೂಲಗಳಿಗೆ ದಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೊಡವ ಪ್ರಾಂತ್ಯದ ಪ್ರತಿಯೊಂದು ಕುಗ್ರಾಮ ಮತ್ತು ಗ್ರಾಮವು ಕನಿಷ್ಠ 25 ರಿಂದ 30 ದೈವಿಕ ನಿರ್ಮಿತ ನೈಸರ್ಗಿಕ ಜಲಾನಯನ ಪ್ರದೇಶಗಳು, ತೊರೆಗಳು, ಗುರುತ್ವಾಕರ್ಷಣೆಯ ನೀರಿನ ಬಿಂದುಗಳು, ನೀರಿನ ಬುಗ್ಗೆಗಳು, ಝರಿಗಳು ಮತ್ತು ಜಲಪಾತಗಳಿಂದ ಕೂಡಿದ್ದು, ಇವು ಸರ್ವ ಋತುಗಳಲ್ಲಿ ಹರಿಯುತ್ತವೆ. ಪ್ರತಿ ಕೊಡವ ಮನೆಯವರು ತಮ್ಮ ದೈನಂದಿನ ನೀರಿನ ಅಗತ್ಯವನ್ನು ಪೂರೈಸಲು ‘ಕುವ್ವ’ ಎಂಬ ಸಣ್ಣ ಸಾಂಪ್ರದಾಯಿಕ ತೆರೆದ ಬಾವಿಯನ್ನು ಹೊಂದಿದ್ದರು. ಇತ್ತೀಚಿನವರೆಗೂ, ಇದನ್ನು ಸ್ಥಳೀಯ ಕೊಡವ ರೈತರು ನಿರ್ವಹಿಸುತ್ತಿದ್ದರು ಮತ್ತು ರಕ್ಷಿಸುತ್ತಿದ್ದರು. ಈಗ ಪ್ರವಾಸೋದ್ಯಮ ಮತ್ತು ರೆಸಾರ್ಟ್‌ಗಳ ಹೆಸರಿನಲ್ಲಿ ಕೊಡವರ ಪ್ರಾಚೀನ ಜಮೀನುಗಳನ್ನು ಬಲಿಪಶು ಮಾಡುವ ಮೂಲಕ ಸರ್ಕಾರದ ಖಜಾನೆ ತುಂಬಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿನ ಗಿರಿಕಂದರಗಳು, ಪರ್ವತಗಳು ಮತ್ತು ನೀರಿನ ಬಿಂದುಗಳನ್ನು ಅಗೆದು-ಬಗೆದು-ಕೊರೆದು ತಿರುಗಿಸುತ್ತಿದ್ದಾರೆ, ಹಾದಿ ತಪ್ಪಿಸುತ್ತಿದ್ದಾರೆ ಮತ್ತು ನಾಶ ಮಾಡುತ್ತಿದ್ದಾರೆ ಎಂದರು.ಕೊಡಗು ವಾರಾಂತ್ಯದ ಕಸದ ತೊಟ್ಟಿ ಮತ್ತು ವೇಶ್ಯಾಗೃಹವಾಗುವುದನ್ನು ತಪ್ಪಿಸಲು ಮಾನವ ನಿರ್ಮಿತ ದುರಂತದಿಂದ ಕೊಡವಲ್ಯಾಂಡ್ ಅನ್ನು ಉಳಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು.ಧರಣಿ ಸತ್ಯಾಗ್ರಹದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳಮಂಡ ಜೈ, ಕಿರಿಯಮಾಡ ಶೆರಿನ್, ಪುಲ್ಲೇರ ಕಾಳಪ್ಪ, ಚಂಬಂಡ ಜನತ್, ಕರ್ನಲ್ ಚೆಪ್ಪುಡಿರ ಮುತ್ತಣ್ಣ, ಬೇಪಡಿಯಂಡ ಬಿದ್ದಪ್ಪ, ಅರೆಯಡ ಗಿರೀಶ್, ಮೂಕೊಂಡ ದಿಲೀಪ್, ಕಾಟುಮಣಿಯಂಡ ಉಮೇಶ್, ಪುಟ್ಟಿಚೆಂಡ ದೇವಯ್ಯ, ಚೋಳಪಂಡ ನಾಣಯ್ಯ ಇದ್ದರು. ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ, ಯುನೆಸ್ಕೋದ ಮಹಾನಿರ್ದೇಶಕರು, ವಿಶ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.ಪ್ರತಿಗಳನ್ನ ಮುಖ್ಯಮಂತ್ರಿಗಳು, ವಿರಾಜಪೇಟೆ ಕ್ಷೇತ್ರದ ಶಾಸಕರು ಎ.ಎಸ್.ಪೊನ್ನಣ್ಣ, ಕಾವೇರಿ ವಾಟರ್ ಮ್ಯಾನೆಜ್‌ಮೆಂಟ್ ಅಥಾರೆಟಿ ನವದೆಹಲಿ, ಕಾವೇರಿ ವಾಟರ್ ರೆಗ್ಯೂಲೇಷನ್ ಕಮಿಟಿ ಬೆಂಗಳೂರು, ಜಿಲ್ಲಾಧಿಕಾರಿಗಳು, ಕೊಡಗು ವೃತ್ತದ ಕನ್ಸರ್‌ವೇಟರ್ ಆಫ್ ಫಾರೆಸ್ಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ನಾಚಪ್ಪ ತಿಳಿಸಿದರು.