ಗ್ರಾಹಕರ ವಿಸ್ವಾಸ, ನಂಬಿಕೆ ಉಳಿಸಿಕೊಂಡ ಸಹಕಾರಿ ಬ್ಯಾಂಕ್‌ಗಳು: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork | Published : Apr 6, 2025 1:48 AM

ಸಾರಾಂಶ

ಸಹಕಾರಿ ರಂಗದ ನೀತಿ ಯಾವಾಗಲೂ ಗಟ್ಟಿಯಾಗಿರುತ್ತದೆ. ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಲ್ಲಿ ಸಹಕಾರಿ ರಂಗವೇ ಸರ್ಕಾರ ಆಳುತ್ತವೆ. ಸಹಕಾರಿ ರಂಗ ಅಷ್ಟೊಂದು ಪ್ರಬಲವಾಗಿದ್ದು, ಸಹಕಾರಿ ಬ್ಯಾಂಕ್ ಎಂದರೆ ನಮ್ಮೆಲ್ಲರ ಬ್ಯಾಂಕ್ ಎಂಬ ನಂಬಿಕೆ ಇರಬೇಕು.

ಬ್ಯಾಡಗಿ: ಸರ್ಕಾರಗಳು ಎಂದಾದರೂ ತಪ್ಪಬಹುದು. ಆದರೆ ಸಹಕಾರ ತತ್ವ ಎಂದಿಗೂ ತಪ್ಪಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಪೂರ್ವದಿಂದ ಅದಕ್ಕೊಂದು ಗಟ್ಟಿಯಾದ ಇತಿಹಾಸವಿದೆ. ಗ್ರಾಹಕರ ನಂಬಿಕೆ, ವಿಶ್ವಾಸ ಉಳಿಸಿಕೊಂಡಂತಹ ಸಹಕಾರಿ ಬ್ಯಾಂಕ್‌ಗಳಿಂದ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವೆಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ದಾವಣಗೆರೆ ಜಿಎಂ ಸೌಹಾರ್ದ ಸಹಕಾರಿ ಪತ್ತಿನ ಸಹಕಾರಿ ಸಂಘದ 9ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ರಂಗದ ನೀತಿ ಯಾವಾಗಲೂ ಗಟ್ಟಿಯಾಗಿರುತ್ತದೆ. ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಲ್ಲಿ ಸಹಕಾರಿ ರಂಗವೇ ಸರ್ಕಾರ ಆಳುತ್ತವೆ. ಸಹಕಾರಿ ರಂಗ ಅಷ್ಟೊಂದು ಪ್ರಬಲವಾಗಿದ್ದು, ಸಹಕಾರಿ ಬ್ಯಾಂಕ್ ಎಂದರೆ ನಮ್ಮೆಲ್ಲರ ಬ್ಯಾಂಕ್ ಎಂಬ ನಂಬಿಕೆ ಇರಬೇಕು. ಸಾಲ ಪಡೆದವರು ಬಡ್ಡಿಸಹಿತ ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಕದ ತಟ್ಟುವ ಪ್ರಮೇಯ ಎದುರಾಗುವುದಿಲ್ಲ ಎಂದರು.

ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ: ಜಗತ್ತಿನ ಇತರ ರಾಷ್ಟ್ರಗಳಲ್ಲಿ ಶೇ. 2ರಿಂದ 3ರಷ್ಟು ಬೆಳವಣಿಗೆ ಆಗುತ್ತಿದೆ. ಭಾರತ ಶೇ. 6ರಷ್ಟು ಬೆಳವಣಿಗೆಯಾಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ವ್ಯಾಪಾರ ನಡೆಸಲು ಇದ್ದಂತಹ ನಿಯಮಗಳನ್ನು ಸರಳೀಕೃತಗೊಳಿಸಿದ್ದೇ ಕಾರಣ. ಕಳೆದ ಹತ್ತು ವರ್ಷದ ಹಿಂದೆ 1 ಕೋಟಿಗೂ ಹೆಚ್ಚು ಆದಾಯ ತೆರಿಗೆ ಕಟ್ಟುವ ಜನರ ಸಂಖ್ಯೆ ಕೇವಲ 42 ಸಾವಿರವಿತ್ತು. ಇದೀಗ ಸುಮಾರು ₹5.5 ಲಕ್ಷಕ್ಕೂ ಹೆಚ್ಚು ಜನರು ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದರು.

ಬ್ಯಾಡಗಿ ವಾಣಿಜ್ಯ ಕೇಂದ್ರ: ತೂಕ ಮತ್ತು ದರಗಳಲ್ಲಿ ರೈತರ ವಿಶ್ವಾಸ ಹೆಚ್ಚಿಸಿಕೊಂಡಿರುವ ಬ್ಯಾಡಗಿ ಮಾರುಕಟ್ಟೆ ವಿಶ್ವದಲ್ಲಿಯೇ ಉತ್ತಮ ಹೆಸರು ಪಡೆದಿದೆ. ವಿಶ್ವಾಸ ಹೆಚ್ಚಾದರೆ ವ್ಯಾಪಾರ ವೃದ್ಧಿಯಾಗಲಿದೆ. ವ್ಯಾಪಾರ ಹೆಚ್ಚಾದಾಗ ಅಭಿವೃದ್ದಿ ಸಾಧ್ಯ ಎಂದರು.

ಸಂಗೂರು ಸಕ್ಕರೆ ಕಾರ್ಖಾನೆ ಪುನಶ್ಚೇತನ: ಸಂಕಷ್ಟದಲ್ಲಿದ್ದ ಸಂಗೂರು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾದ ಜಿ.ಎಂ. ಸಿದ್ದೇಶ ಆಗಿನ ಸಿಎಂ ಯಡಿಯೂರಪ್ಪ ಅಂದಿನ ಸಚಿವ ದಿ‌. ಸಿ.ಎಂ. ಉದಾಸಿಯವರ ಮನವಿ ಮೇರೆಗೆ ಕಾರ್ಯೋನ್ಮುಖವಾಗಿದ್ದು, ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಜಿ.ಎಂ. ಪ್ರಸನ್ನಕುಮಾರ, ಪ್ರಭು ಮಾಗನೂರ, ಸಿದ್ದನಗೌಡ ಪಾಟೀಲ ಸೇರಿದಂತೆ ಇತರರಿದ್ದರು.

Share this article