ಹೈನೋದ್ಯಮದಲ್ಲಿ ಯುವಜನತೆ ಪಾಲ್ಗೊಳ್ಳುವಿಕೆ ಸಂತಸ

KannadaprabhaNewsNetwork | Published : Apr 6, 2025 1:48 AM

ಸಾರಾಂಶ

ಹೈನುಗಾರಿಕೆಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಲು ಈ ಭಾಗದ ರೈತರಿಗೆ ಆಗಾಗ ಮಾರ್ಗದರ್ಶನ ನೀಡಲಾಗುವುದು

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯು ಕೃಷಿಗೆ ಪೂರಕ ಮತ್ತು ಆರ್ಥಿಕವಾಗಿ ಮಹತ್ವ ಪೂರ್ಣ ಉದ್ಯಮವಾಗಿ ಬೆಳೆಯುತ್ತಿದೆ. ಲಕ್ಷಾಂತರ ರು. ವಹಿವಾಟು ನಡೆಸುವ ಈ ವ್ಯವಸಾಯದಲ್ಲಿ ಇಂದು ಉನ್ನತ ಶಿಕ್ಷಣ ಪಡೆದ ಯುವಜನತೆ ಪಾಲ್ಗೊಳ್ಳುವಿಕೆ ಹೆಚ್ಚಿದೆ ಎಂದು ಡೈರಿ ವ್ಯಾಪಾರ ತಜ್ಞ ಸುಧೀರ್ ಸೂರ್ಯಗಂಧ ಹೇಳಿದರು.

ಇಲ್ಲಿನ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಕ್ಷೇತ್ರದಲ್ಲಿ ಶನಿವಾರ ಜೊಲ್ಲೆ ಸಮೂಹ ಆಯೋಜಿಸಿದ್ದ ಕೃಷಿ ಉತ್ಸವದ ಎರಡನೇ ದಿನದ ಲಾಭದಾಯಕ ಹೈನುಗಾರಿಕೆ ಕುರಿತು ಉಪನ್ಯಾಸ ನೀಡಿದ ಅವರು, ಹೈನುಗಾರಿಕೆಯಲ್ಲಿ ಪ್ರಥಮ ಜಾತಿವಂತ ಜಾನುವಾರು ಖರೀದಿ ಅಥವಾ ಸಿದ್ಧಪಡಿಸುವುದು ಅಗತ್ಯವಾಗಿದೆ. ಖರೀದಿಸುವಾಗ, ತಳಿ, ವಯಸ್ಸು, ನೀರಿನಂಶದ ಕಣ್ಣುಗಳು, ಕಿವಿ, ಮೂಗು, ಎದೆ, ಸ್ತನದಿಂದ ಕೆಚ್ಚಲು ಮತ್ತು ದೇಹಕ್ಕೆ ತಲೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಅದರ ಜೊತೆಗೆ ಗೋಟಾದ ವಿನ್ಯಾಸವು ಕೂಡ ಮಹತ್ವದ್ದಾಗಿದೆ. ಬಿಸಿಲು, ಗಾಳಿ ಮತ್ತು ಮಳೆಯಿಂದ ರಕ್ಷಿಸಲ್ಪಡುವುದರ ಹೊರತಾಗಿ, ಕನಿಷ್ಠ 12 ಗಂಟೆಗಳ ಸೂರ್ಯನ ಬೆಳಕು ಸಿಗಬೇಕಾದ ಅವಶ್ಯಕವಿದೆ. ಹೀಗೆ ಪ್ರಾಣಿಗಳ ದೇಹ ರಚನೆ, ಅವುಗಳಿಗೆ ನೀಡುವ ವಿವಿಧ ರೀತಿಯ ಆಹಾರ ಹಾಗೂ ಪದ್ಧತಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಹೈನುಗಾರಿಕೆಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಲು ಈ ಭಾಗದ ರೈತರಿಗೆ ಆಗಾಗ ಮಾರ್ಗದರ್ಶನ ನೀಡಲಾಗುವುದು ಎಂದರು. ಸದಲಗಾ ಗೀತಾ ಆಶ್ರಮದ ಶ್ರದ್ದಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಪಂಚಗಂಗಾ ಕಾರ್ಖಾನೆ ಅಧ್ಯಕ್ಷ ಪಿ.ಎನ್.ಪಾಟೀಲ್, ಕೃಷಿ ಮಹೋತ್ಸವದ ಮೂಲಕ ರೈತರಿಗೆ ಹೊಸ ತಂತ್ರಜ್ಞಾನದ ಹಲವು ಮಾಹಿತಿ ತಿಳಿಸಿದರು. ವಿಶ್ವ ಹಿಂದೂ ಪರಿಷತ್‌ನ ಶ್ರೀ ವಿಠ್ಠಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಕಲ್ಲಪ್ಪಣ್ಣ ನಾಗಣ್ಣನವರ್, ಹಾಲಶುಗರ್‌ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಪಂಚಗಂಗಾ ಕಾರ್ಖಾನೆ ನಿರ್ದೇಶಕ ಇಂದ್ರಜೀತ್ ಪಾಟೀಲ್ ಸೇರಿದಂತೆ ಹಾಲಶುಗರ್‌ ನಿರ್ದೇಶಕರು ಹಾಗೂ ರೈತರು ಉಪಸ್ಥಿತರಿದ್ದರು.

Share this article