ಹಸನಸಾಬ್‌ ನಾಲಿಗೆ ಮೇಲೆ ಹಿಡಿತವಿರಲಿ: ಶಾಸಕ ದೊಡ್ಡನಗೌಡ ಪಾಟೀಲ

KannadaprabhaNewsNetwork |  
Published : Apr 06, 2025, 01:48 AM IST
ಪೋಟೊ6ಕೆಎಸಟಿ1: ಕುಷ್ಟಗಿ ಪಟ್ಟಣದ ಸರ್ಕ್ಯೂಟ್ ಹೌಸನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ದಾಖಲೆಗಳನ್ನು ತೋರಿಸುವ ಮೂಲಕ ಮಾತನಾಡಿದರು.ಶಾಸಕ ದೊಡ್ಡನಗೌಡ ಪಾಟೀಲ. | Kannada Prabha

ಸಾರಾಂಶ

ಸನಸಾಬ್‌ ಅವರು ನನ್ನನ್ನು ಸುಳ್ಳು ಹೇಳುವ ಶಾಸಕ ಎನುತ್ತಿದ್ದಾರೆ. ನಾನು ಅವರನ್ನು ದಡ್ಡ ಎನ್ನಬೇಕೋ ಅಥವಾ ಹುಚ್ಚ ಎನ್ನಬೇಕೋ ತಿಳಿಯುತ್ತಿಲ್ಲ. ನನಗೆ ಕಾನೂನಿನ ಪಾಠ ಹೇಳುವ ಮೊದಲು ಅವರು ತಿಳಿದುಕೊಳ್ಳಬೇಕು.

ಕುಷ್ಟಗಿ:

ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ನನ್ನ ಬಗ್ಗೆ ಹುಚ್ಚನಂತೆ ಮಾತನಾಡುತ್ತಿದ್ದು ನಾಲಿಗೆ ಮೇಲೆ ಹಿಡಿತವಿರಲಿ ಎಂದು ಶಾಸಕ ದೊಡ್ಡನಗೌಡ ಪಾಟೀಲ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸನಸಾಬ್‌ ಅವರು ನನ್ನನ್ನು ಸುಳ್ಳು ಹೇಳುವ ಶಾಸಕ ಎನುತ್ತಿದ್ದಾರೆ. ನಾನು ಅವರನ್ನು ದಡ್ಡ ಎನ್ನಬೇಕೋ ಅಥವಾ ಹುಚ್ಚ ಎನ್ನಬೇಕೋ ತಿಳಿಯುತ್ತಿಲ್ಲ. ನನಗೆ ಕಾನೂನಿನ ಪಾಠ ಹೇಳುವ ಮೊದಲು ಅವರು ತಿಳಿದುಕೊಳ್ಳಬೇಕು ಎಂದು ತೀರುಗೇಟು ನೀಡಿದರು.

ನನಗಿಂತ ಹಿರಿಯರಾದ ಹಾಗೂ ಶಾಸಕರಾಗಿದ್ದವರು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ತಮ್ಮ ಸಮುದಾಯದ ಓಲೈಕೆ ಮಾಡಲು ಹೋಗಿ ಇನ್ನುಳಿದ ಸಮುದಾಯದವರ ದಾರಿ ತಪ್ಪಿಸುತ್ತಿದ್ದಾರೆಂದು ಕಿಡಿಕಾರಿದ ಅವರು, ಸರ್ಕಾರದ ಆದೇಶ ತಿಳಿದುಕೊಳ್ಳುವಷ್ಟು ನಾನು ದಡ್ಡನಲ್ಲ. ಶಾದಿಮಹಲ್ ಅನುದಾನದ ಆದೇಶ ತಿದ್ದುಪಡಿ ಕುರಿತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೆ. ಆಗ ಸಚಿವ ಜಮೀರ್ ಅಹ್ಮದ್‌ ಅವರು ಅಧಿಕಾರಿಗಳಿಗೆ ಏನು ಮಾಡಬೇಡಿ, ಇದರಿಂದ ತೊಂದರೆ ಆಗುತ್ತಿದೆ ಎಂದು ಹೇಳಿದಾಗ ಸುಮ್ಮನಾದೆ ಹೊರತು ಬೇರೆ ಯಾವ ಕಾರಣದಿಂದ ಅಲ್ಲ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ದುಡ್ಡು ಕೇಳುತ್ತಿರುವ ಹಸನಸಾಬ್‌ ಅವರು, ಈ ಯೋಜನೆಯಲ್ಲಿ ಶಾದಿಮಹಲ್‌ಗೆ ಅನುದಾನ ಕೊಡುವ ಯೋಜನೆ ಇಲ್ಲವೆಂಬುದನ್ನು ತಿಳಿದುಕೊಳ್ಳಬೇಕು. ಈ ಕುರಿತು ಬೇರೆ ಶಾಸಕರ ಬಳಿ ತಿಳಿದುಕೊಂಡು ಮಾತನಾಡಲಿ ಎಂದ ಶಾಸಕರು, ಶಾದಿಮಹಲ್‌ಗೆ ಅನುದಾನ ಒದಗಿಸಿಕೊಡುವಂತೆ ಸಚಿವರನ್ನು ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದೇನೆ. ಸಂಡೂರು ಉಪಚುನಾವಣೆ ಸಮಯದಲ್ಲಿ ನಾನು ವಿಪಕ್ಷ ಶಾಸಕ ಎಂದು ಅನುದಾನ ಕೊಟ್ಟಿರಲಿಲ್ಲ. ಬಳಿಕ ಸಚಿವರನ್ನು ಭೇಟಿ ಅನುದಾನ ತಂದಿದ್ದೇನೆ ಎಂದರು.

ಬಯ್ಯಾಪುರ ಪರ ಬ್ಯಾಟಿಂಗ್:

ನಾವು ಸುಸಂಸ್ಕೃತ ಮನೆತನದಲ್ಲಿ ಹುಟ್ಟಿದವರು. ಈ ವರೆಗೂ ದ್ವೇಷ ರಾಜಕಾರಣ ಮಾಡಿಲ್ಲ. ಎರಡು ಸಲ ಅಮರೇಗೌಡ ಬಯ್ಯಾಪುರ ಅವರು ಶಾಸಕರಾದರು ಒಮ್ಮೆಯೂ ಕೀಳುಮಟ್ಟದ ಹೇಳಿಕೆ ಕೊಟ್ಟಿಲ್ಲ. ನಿಮಗೆ ಏನೋ ಗ್ರಹಚಾರ ಕಾದಿದೆ ಎಂದು ದೊಡ್ಡನಗೌಡ ಪಾಟೀಲ ಹೇಳಿದರು.

ನನ್ನನ್ನು ಪರೋಕ್ಷವಾಗಿ ಕುರಿ ಎಂದು ಹೇಳುವ ಹಸನಸಾಬ್‌ ದೋಟಿಹಾಳ ನೇರವಾಗಿಯೇ ಹೇಳಲಿ. ಇದೇ ನನ್ನ ಕುರುಬರ ಆಶೀರ್ವಾದದಿಂದ ಅವರು ಶಾಸಕರಾಗಿದ್ದಾರೆ. ಅದು ನೆನಪಿನಲ್ಲಿಟ್ಟುಕೊಳ್ಳಲಿ. ಒಂದು ಸಮುದಾಯ ಹೀಯಾಳಿಸುವ ಮೊದಲು ಹಿನ್ನೆಲೆ ಮರೆಯಬಾರದು ಎಂದರು.

ಶಾದಿಮಹಲ್ ಅನುದಾನ ವಿಚಾರ ಹಾಗೂ ನನ್ನ ವಿರುದ್ಧ ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಇಲ್ಲದಿದ್ದರೆ ಅವರಿಗೆ ಸಂಬಂಧಿಸಿದ ಅನೇಕ ದಾಖಲೆ ನನ್ನ ಬಳಿ ಇದ್ದು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

₹ 10 ಲಕ್ಷ ಕೊಟ್ಟಿರುವೆ:

ನಾನು ಜನವರಿಯಲ್ಲಿ ₹ 10 ಲಕ್ಷ ಅನುದಾನ ಕೊಟ್ಟಿರುವೆ ಎಂದು ದಾಖಲೆ ಮೂಲಕ ತೋರಿಸಿದರು. ಆದರೆ, ಹಸನಸಾಬ್‌ ಅವರು ಏನು ಕೊಟ್ಟಿಲ್ಲ ಎಂದು ಹೇಳುತ್ತಿದ್ದು ಹಾಸ್ಯಾಸ್ಪದ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ, ಹಸನಸಾಬ್‌ ಅವರಿಗೆ ನಾನು ಏಕವಚನದಲ್ಲಿ ಮಾತನಾಡಿಲ್ಲ. ಅವರ ಕೆಲ ಬೆಂಬಲಿಗರು ಇತ್ತೀಚಿಗೆ ನಡೆದ ಸುದ್ದಿಗೋಷ್ಟಿಯಲ್ಲಿ ಧಮ್ಕಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕುಷ್ಟಗಿ ಮಂಡಲದ ಅಧ್ಯಕ್ಷ ಮಹಾಂತೇಶ ಬದಾಮಿ, ಲಾಡಸಾಬ್‌ ಕೊಳ್ಳಿ, ಅಮೀನುದ್ದೀನ ಮುಲ್ಲಾ, ಮಲ್ಲಣ್ಣ ಪಲ್ಲೇದ, ಪ್ರಭುಶಂಕರಗೌಡ ಪಾಟೀಲ, ಉಮೇಶ ಯಾದವ, ಆಲಂಪಾಷಾ ಮೋದಿ, ಸಂಗನಗೌಡ ಜೈನರ, ಶ್ಯಾಮೀದಸಾಬ್‌ ಬ್ಯಾಲಿಹಾಳ, ನಬಿಸಾಬ್‌ ದೋಟಿಹಾಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ