ಶ್ಯಾಡಗುಪ್ಪಿಯಲ್ಲಿ ನಿವೃತ್ತ ಗುರುಗಳಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

KannadaprabhaNewsNetwork | Published : Apr 6, 2025 1:48 AM

ಸಾರಾಂಶ

ಶಾಲಾ ಗುರು ಹಾಗೂ ಮಠಗಳ ಗುರುಗಳ ಕಾರ್ಯವೇ ಸಮಾಜವನ್ನು ತಿದ್ದುವುದು. ಅಂತಹ ಕಾರ್ಯವನ್ನು ಎಂ.ಎಸ್. ಗುಂಡಪಲ್ಲಿ ಅಕ್ಷರಶಃ ಪಾಲಿಸಿದ್ದಾರೆ ಎಂದು ಸಿದ್ಧವೃಷಬೇಂದ್ರ ಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ಅವರು ನೌಕರಿ ಮಾಡಲಿಲ್ಲ, ನಿಜವಾದ ಸೇವೆ ಮಾಡಿದರು, ನಿವೃತ್ತಿಗೆ ಊರ ತುಂಬೆಲ್ಲ ತೆರೆದ ವಾಹನದಲ್ಲಿ ಗೌರವದ ಮೆರವಣಿಗೆ ಮಾಡಿ, ಊರವರೆಲ್ಲ ಕೂಡಿ ಸನ್ಮಾನಿಸಿ, ಜಿಲ್ಲೆಯ ಅಧಿಕಾರಿಗಳೆಲ್ಲ ಗುಣಗಾನ ಮಾಡಿ, ವಿದ್ಯಾರ್ಥಿಗಳು ಕಣ್ಣೀರು ಸುರಿಸಿ ಗುರುಗಳನ್ನು ಬೀಳ್ಕೊಟ್ಟ ಹೃದಯಸ್ಪರ್ಶಿ ಸಮಾರಂಭಕ್ಕೆ ತಾಲೂಕಿನ ಶ್ಯಾಡಗುಪ್ಪಿ ಸಾಕ್ಷಿಯಾಯಿತು.ಶನಿವಾರ ತಾಲೂಕಿನ ಶ್ಯಾಡಗುಪ್ಪಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಗುಂಡಪಲ್ಲಿ ಅವರ ಅಪರೂಪದ ಸೇವೆಗೆ ಸಂದ ಗೌರವ ಇದಾಗಿತ್ತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೆಶಕ ಎಸ್.ಬಿ. ಕೊಡ್ಲಿ, ಗುಂಡಪಲ್ಲಿ ಗುರುಗಳು ಅಪರೂಪರಲ್ಲಿ ಅಪರೂಪರು. ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆಯಾಗಿ, ಆಡಳಿತಾತ್ಮಕ ವಿಷಯದಲ್ಲಿ ಶಿಸ್ತನ್ನು ಒಳಗೊಂಡು, ಅಧಿಕಾರಿ ವರ್ಗದಲ್ಲಿ ಒಲುಮೆ ಹೊಂದಿ, ಇಡೀ ಶಿಕ್ಷಕ ವೃತ್ತಿಗೆ ಮಾದರಿಯಾದ ಹಿರಿಮೆ ಅವರದು ಎಂದರು.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಮಾತನಾಡಿ, ವೃತ್ತಿ ಪ್ರವೃತ್ತಿಯಲ್ಲಿ ನಿಷ್ಕಲ್ಮಷ ಚಿನ್ನದಂತೆ ಎಲ್ಲರ ಪ್ರೀತಿಗೆ ಪಾತ್ರರಾದ ಎಂ.ಎಸ್. ಗುಂಡಪಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಾದರಿ ಎಂದರು.ಜಡೆ ಸಂಸ್ಥಾನ ಮಠದ ಕುಮಾರಕೆಂಪಿನ ಸಿದ್ಧವೃಷಬೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶಾಲಾ ಗುರು ಹಾಗೂ ಮಠಗಳ ಗುರುಗಳ ಕಾರ್ಯವೇ ಸಮಾಜವನ್ನು ತಿದ್ದುವುದು. ಅಂತಹ ಕಾರ್ಯವನ್ನು ಎಂ.ಎಸ್. ಗುಂಡಪಲ್ಲಿ ಅಕ್ಷರಶಃ ಪಾಲಿಸಿದ್ದಾರೆ ಎಂದರು.ಬೀಳ್ಕೊಡುಗೆ ಗೌರವ ಸ್ವೀಕರಿಸಿ ಮಾತನಾಡಿದ ಎಂ.ಎಸ್. ಗುಂಡಪಲ್ಲಿ ಅವರು, ಮಾನವ ಜನ್ಮ ಸಾರ್ಥಕ್ಯ ಕಾಣುವುದೇ ಸೇವೆಯಲ್ಲಿ. ಸೇವೆಯಲ್ಲಿ ದೇವರಿದ್ದಾನೆ ಎಂಬ ನಂಬುಗೆ ನನ್ನದು. ಶಿಕ್ಷಕನಾಗಿ ಶಾಲಾ ಮಕ್ಕಳ ಉನ್ನತಿಗೆ ಶ್ರಮಿಸಿದ್ದೇನೆ ಎಂದರು.ಹೀರೂರಿನ ನಂಜುಂಡಪಂಡಿತಾರಾಧ್ಯ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಚಾಕ್ಷರಿ ಪಡೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಶಾಂತಮ್ಮ ಗುಂಡಪಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ(ಹಾನಗಲ್ಲ ), ಎಂ.ಬಿ. ಅಂಬಿಗೇರ (ಶಿಗ್ಗಾಂವಿ), ಎಸ್.ಜಿ. ಕೋಟಿ(ಬ್ಯಾಡಗಿ), ಎಸ್.ಎಸ್. ಅಡಿಗ(ರಾಣಿಬೆನ್ನೂರು), ಹಾವೇರಿ ಡಯಟ್ ಉಪನ್ಯಾಸಕ ಎಂ.ಎಚ್. ಪಾಟೀಲ, ಗ್ರಾಪಂ ಸದಸ್ಯರಾದ ಶ್ರೀಧರ ಮಲಗುಂದ, ಲಿಂಗರಾಜ ಪಡೆಪ್ಪನವರ, ಮಲ್ಲಿಕಾರ್ಜುನ ಬಾಳೂರ ಮುಖ್ಯೋಪಾಧ್ಯಾಯ ಜಿ.ಜಿ. ಗೋರನವರ, ಸಿಆರ್‌ಪಿ ಮುರುಗೇಶ ಬಾಳೂರ ಪಾಲ್ಗೊಂಡಿದ್ದರು. ಶಿವಲಿಂಗಯ್ಯ ಕರಿಬಸಯ್ಯವರ ಸ್ವಾಗತಿಸಿದರು. ಸಿ. ನಾಗರಾಜ ನಿರೂಪಿಸಿದರು.

Share this article