ಸಮಾಜದಲ್ಲಿ ಮಾತನಾಡುವ ವರ್ಗವೇ ಬೇರೆ ಇದೆ. ಕೆಲಸ ಮಾಡುವ ವರ್ಗವೇ ಬೇರೆ ಇದೆ. ಬಿಜೆಪಿ-ಜೆಡಿಎಸ್‌ಗೆ ಕಾಂಗ್ರೆಸ್‌ನ್ನು ಟೀಕೆ ಮಾಡುವುದು ಬಿಟ್ಟರೆ ಬೇರೇನೂ ಅವರಿಗೆ ಗೊತ್ತಿಲ್ಲ. ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಕಿ ಹಚ್ಚುವವರನ್ನು, ಸುಳ್ಳು ಹೇಳುವವರನ್ನು ನಂಬಬೇಡಿ, ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುವವರನ್ನು, ಜನಪರವಾಗಿ ಕೆಲಸ ಮಾಡುವವರನ್ನು ಮಾತ್ರ ನಂಬುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ದಲಿತ ಸಮುದಾಯ ಸಂಘಟನೆಗಳ ಅಭಿನಂದನಾ ಸಮಿತಿಯಿಂದ ಭಾನುವಾರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಮಾತನಾಡುವ ವರ್ಗವೇ ಬೇರೆ ಇದೆ. ಕೆಲಸ ಮಾಡುವ ವರ್ಗವೇ ಬೇರೆ ಇದೆ. ಬಿಜೆಪಿ-ಜೆಡಿಎಸ್‌ಗೆ ಕಾಂಗ್ರೆಸ್‌ನ್ನು ಟೀಕೆ ಮಾಡುವುದು ಬಿಟ್ಟರೆ ಬೇರೇನೂ ಅವರಿಗೆ ಗೊತ್ತಿಲ್ಲ. ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ. ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸಂವಿಧಾನ ಬರೆಯಲು ಅವಕಾಶ ನೀಡದಿದ್ದರೆ ಇಂದು ಸಮುದಾಯದ ಯಾರಿಗೂ ಅಧಿಕಾರ ಸಿಗುತ್ತಿರಲಿಲ್ಲ ಎಂದು ನೇರವಾಗಿ ಹೇಳಿದರು.

ಇಡೀ ದೇಶದಲ್ಲಿ ದಲಿತ ಸಮುದಾಯದ ಅಭಿವೃದ್ಧಿಗೆ ಶೇ.೧೮ರಷ್ಟು ಹಣವನ್ನು ಮೀಸಲಿಟ್ಟಿದ್ದು ಸಿದ್ದರಾಮಯ್ಯ ಸರ್ಕಾರ. ಕಳೆದ ಹದಿಮೂರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಿಂದ ಇದು ಸಾಧ್ಯವಾಗಿಲ್ಲವೇಕೆ. ಕಾಮಗಾರಿಗಳಲ್ಲಿ ೧ ಕೋಟಿ ರು.ವರೆಗೆ ಮೀಸಲಾತಿ ಗುತ್ತಿಗೆ ನೀಡಿದ್ದೇವೆ. ದಲಿತರು ಯಾವ ಪಕ್ಷ ಸಮುದಾಯದ ಹಿತ, ಅಭಿವೃದ್ಧಿ, ಸಬಲೀಕರಣ ಮಾಡುತ್ತಿದೆ ಎಂಬುದನ್ನು ಯೋಚಿಸಿ, ಅರ್ಥಮಾಡಿಕೊಂಡು ಅದರ ಜೊತೆ ನಿಲ್ಲುವಂತೆ ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳನ್ನು ಯಾವುದೋ ಒಂದು ಸಮುದಾಯಕ್ಕೆ ನೀಡಿಲ್ಲ. ಎಲ್ಲ ವರ್ಗದವರಿಗೆ ಆರ್ಥಿಕ ಶಕ್ತಿ ನೀಡಬೇಕೆಂಬ ಉದ್ದೇಶದಿಂದ ನೀಡುತ್ತಿದ್ದೇವೆ. ಇದನ್ನು ವಿಪಕ್ಷದವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಸುಳ್ಳು ಹೇಳಿಕೊಂಡು, ಟೀಕೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಯೋಜನೆಗಳಿಂದ ಹಲವಾರು ಜನರು ಸ್ವಾವಲಂಬಿ ಜೀವನ ಕಂಡುಕೊಂಡಿದ್ದಾರೆ ಎಂದರು.

ಪಕ್ಷಕ್ಕಾಗಿ ದುಡಿಯುತ್ತಿರುವ ಎಲ್ಲರಿಗೂ ಅಧಿಕಾರ ಸಿಗಬೇಕು ಎನ್ನುವ ಆಸೆ ನಮಗೂ ಇದೆ. ಆದರೆ, ಅಧಿಕಾರದಲ್ಲಿರುವ ಪಕ್ಷ ಒಂದು ಜಿಲ್ಲೆಯ ಎಷ್ಟು ಜನರಿಗೆ ಅಧಿಕಾರ ಕೊಡಲು ಸಾಧ್ಯ. ನಾವೂ ಎಷ್ಟೂಂತ ಕೇಳಲಾಗುತ್ತದೆ. ಅಧಿಕಾರ ಸಿಗದವರು ಸಮಾಧಾನ ಮಾಡಿಕೊಳ್ಳಬೇಕು. ಪಕ್ಷ ಮುಂದೆ ಅಧಿಕಾರಕ್ಕೆ ಬಂದಾಗ ಅವಕಾಶ ಮಾಡಿಕೊಡೋಣ. ದಲಿತ ಸಮುದಾಯಗಳಿಗೆ ಆರ್ಥಿಕ ಶಕ್ತಿ, ಮಹಿಳೆಯರಿಗೆ ವಿಶೇಷ ಮಾನ್ಯತೆ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಮರೆಯಬಾರದು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಅನುಸೂಚಿತ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಅಂದಾನಿ, ನರಸಿಂಹಮೂರ್ತಿ, ಎಂ.ವಿ.ಕೃಷ್ಣ, ಸೋಮಶೇಖರ್ ಕೆರಗೋಡು ಇತರರಿದ್ದರು.