ದೊಡ್ಡಬಳ್ಳಾಪುರ: ಕಾರ್ಮಿಕರು, ಬಡವರ ಮಕ್ಕಳ ಶಿಕ್ಷಣಕ್ಕೆ ಸಮುದಾಯದ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವುದು ಅವಶ್ಯ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ದೊಡ್ಡಬಳ್ಳಾಪುರ: ಕಾರ್ಮಿಕರು, ಬಡವರ ಮಕ್ಕಳ ಶಿಕ್ಷಣಕ್ಕೆ ಸಮುದಾಯದ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವುದು ಅವಶ್ಯ ಎಂದು ಶಾಸಕ ಧೀರಜ್‌ ಮುನಿರಾಜ್‌ ಹೇಳಿದರು.

ಇಲ್ಲಿನ ಸಂಜಯನಗರದಲ್ಲಿರುವ ಶ್ರೀ ಅರವಿಂದ ವಿದ್ಯಾ ಸಂಸ್ಥೆಯಲ್ಲಿ ನಡೆದ 52ನೇ ವಾರ್ಷಿಕೋತ್ಸವ - ಸಂಕ್ರಾಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರ ಮಕ್ಕಳೇ ಅತ್ಯಧಿಕ ಸಂಖ್ಯೆಯಲ್ಲಿ ವ್ಯಾಸಂಗ ಮಾಡುವ ಕೆಲವೇ ಶಾಲೆಗಳಲ್ಲಿ ಅರವಿಂದ ವಿದ್ಯಾ ಸಂಸ್ಥೆಯೂ ಒಂದು. ಕಳೆದ ಅರ್ಧ ಶತಮಾನದಲ್ಲಿ ಶಾಲೆ ಸಮಾಜಕ್ಕೆ ನೀಡುವ ಕೊಡುಗೆ ಅನನ್ಯ. ಇಂತಹ ಅನುದಾನಿತ ಶಾಲೆಗಳ ಅಭ್ಯುದಯಕ್ಕೆ ಒತ್ತು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಶಾಸಕರ ನಿಧಿಯಿಂದ ಪ್ರತಿವರ್ಷ ₹5 ಲಕ್ಷ ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಶಾಲಾ ಆಡಳಿತ ಮಂಡಲಿ ಅಧ್ಯಕ್ಷ ತ.ನ.ಪ್ರಭುದೇವ್‌ ಮಾತನಾಡಿ, ಯಾವುದೇ ಲಾಭ ಅಥವಾ ವಾಣಿಜ್ಯ ಹಿತಾಸಕ್ತಿ ಇಲ್ಲದೆ, ಬಡ ಹಾಗೂ ಕಾರ್ಮಿಕ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಸಂಸ್ಥೆ ಆಸರೆಯಾಗಿದೆ. ಇಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸಮಾಜದ ವಿವಿಧ ಸ್ತರಗಳಲ್ಲಿ ತಮ್ಮದೇ ಆದ ಸ್ಥಾನಮಾನಗಳನ್ನು ಹೊಂದುವ ಮೂಲಕ ಸಾಮಾಜಿಕವಾಗಿ ಗುರ್ತಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿ, ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಶಾಲೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಪ್ರಾಥಮಿಕ ಶಿಕ್ಷಣ ಮಕ್ಕಳಲ್ಲಿ ಸಂಸ್ಕಾರ ಪ್ರಜ್ಞೆ ಮೂಡಿಸುವ ಮಹತ್ವದ ಘಟ್ಟವಾಗಿದ್ದು, ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಜಾಗೃತಗೊಳಿಸುವ ಅಗತ್ಯವಿದೆ ಎಂದರು.

ನಗರಸಭೆ ಉಪಾಧ್ಯಕ್ಷ ರೈಲ್ವೇಸ್ಟೇಷನ್ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಮಾಜಿ ಅಧ್ಯಕ್ಷೆ ಸುಧಾ ಲಕ್ಷ್ಮೀನಾರಾಯಣ್, ನಗರಸಭೆ ಸದಸ್ಯ ಬಂತಿ ವೆಂಕಟೇಶ್‌, ಉದ್ಯಮಿ ಲಲಿತ್‌ ಜೈನ್, ಅರವಿಂದ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳಾದ ಡಿ.ಕೆ.ವೆಂಕಪ್ಪ, ರಮೇಶ್‌, ಶ್ರೀನಿವಾಸ ರಾಘವನ್‌, ಸರಸ್ವತಮ್ಮ, ಅರವಿಂದ ಪ್ರಾಥಮಿಕ ಶಾಲೆ, ಆಂಗ್ಲ ಶಾಲೆ, ಐಟಿಐ ಸೇರಿದಂತೆ ವಿವಿಧ ಘಟಕಗಳ ಮುಖ್ಯಸ್ಥರು, ಅಧ್ಯಾಪಕರು ಉಪಸ್ಥಿತರಿದ್ದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು. ಮಕ್ಕಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

28ಕೆಡಿಬಿಪಿ1- ದೊಡ್ಡಬಳ್ಳಾಪುರದ ಶ್ರೀ ಅರವಿಂದ ವಿದ್ಯಾ ಸಂಸ್ಥೆಯ 52ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಾಸಕ ಧೀರಜ್‌ ಮುನಿರಾಜ್‌ ಚಾಲನೆ ನೀಡಿದರು.